ಮೈಸೂರು ಆಸ್ಪತ್ರೆಗಳಿಗೆ 5 ತಿಂಗಳಾದರೂ ಬಿಲ್ ಹಣ ಪಾವತಿಸದ ಸರ್ಕಾರ
ಮೈಸೂರು

ಮೈಸೂರು ಆಸ್ಪತ್ರೆಗಳಿಗೆ 5 ತಿಂಗಳಾದರೂ ಬಿಲ್ ಹಣ ಪಾವತಿಸದ ಸರ್ಕಾರ

June 6, 2019

ಮೈಸೂರು: ಸುಳವಾಡಿ ಮಾರಮ್ಮ ದೇವಸ್ಥಾನ ಪ್ರಸಾದದಲ್ಲಿ ವಿಷ ಪ್ರಾಶನ ಪ್ರಕರಣದಲ್ಲಿ ಅಸ್ವಸ್ಥರಾಗಿದ್ದವರಿಗೆ ನೀಡಿದ ಚಿಕಿತ್ಸಾ ಬಿಲ್ ಹಣವನ್ನು ಮೈಸೂರಿನ ಖಾಸಗಿ ಆಸ್ಪತ್ರೆಗಳಿಗೆ 5 ತಿಂಗಳಾದರೂ ಸರ್ಕಾರ ಬಿಡುಗಡೆ ಮಾಡಿಲ್ಲ.

2018ರ ಡಿಸೆಂಬರ್ 14ರಂದು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಿಚುಗುತ್ ಸುಳವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಬೆರೆಸಿದ ಪ್ರಸಾದ ಸೇವಿಸಿ 17 ಮಂದಿ ಸಾವನ್ನಪ್ಪಿ, 120ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ದ್ದರು. ಚಾಮರಾಜನಗರದಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯ ಇಲ್ಲದ ಕಾರಣ ಹಲವರನ್ನು ಮೈಸೂರಿನ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲು ಮಾಡಿ ಜಿಲ್ಲಾಡಳಿತ ಚಿಕಿತ್ಸೆ ಕೊಡಿಸಿತ್ತು. ತುರ್ತು ಚಿಕಿತ್ಸೆ ಅಗತ್ಯವಿದ್ದ ಕಾರಣ ಹಾಗೂ ಬಿಲ್ ಅನ್ನು ನಾವೇ ಪಾವತಿಸುತ್ತೇವೆ ಎಂದು ಚಾಮರಾಜನಗರ ಜಿಲ್ಲಾಡಳಿತ ಭರವಸೆ ನೀಡಿದ್ದರಿಂದಾಗಿ ನಾವು ಆದ್ಯತೆ ಮೇಲೆ ರೋಗಿಗಳಿಗೆ ಚಿಕಿತ್ಸೆ ನೀಡಿ, ಗುಣ ಪಡಿಸಿದೆವು. ಆದರೆ 5 ತಿಂಗಳು ಕಳೆದರೂ ವೈದ್ಯಕೀಯ ಬಿಲ್ ಹಣ ಪಾವತಿಸಿಲ್ಲ ಎಂದು ಖಾಸಗಿ ಆಸ್ಪತ್ರೆಗಳ ಮುಖ್ಯ ಸ್ಥರು ದೂರಿದ್ದಾರೆ. ಘಟನೆ ನಡೆದಾಗ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅವರ ಸಂಪುಟದ ಹಲವು ಸಚಿವರು ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ, ಚಿಕಿತ್ಸೆ ನೀಡುವಂತೆ ಹೇಳಿದ್ದರು. ತುರ್ತು ಚಿಕಿತ್ಸಾ ಘಟಕದಲ್ಲಿರಿಸಿ ಹಲವು ರೋಗಿಗಳನ್ನು ಗುಣಪಡಿಸಲಾಗಿದೆ. ಗಂಭೀರ ಪರಿಸ್ಥಿತಿಯಲ್ಲಿದ್ಧ ಸುಮಾರು 30 ರೋಗಿಗಳನ್ನು ವೆಂಟಿಲೇಟರ್ ಸಪೋರ್ಟ್‍ನಿಂದ ಚಿಕಿತ್ಸೆ ನೀಡಿ ಬದುಕಿಸಲಾಗಿದೆ ಎಂದು ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ತಡ ಮಾಡದೇ ವೈದ್ಯಕೀಯ ವೆಚ್ಚದ ಬಿಲ್ ಅನ್ನು ಕ್ಲಿಯರ್ ಮಾಡುತ್ತೇವೆ ಎಂದು ಸರ್ಕಾರ ಹಾಗೂ ಚಾಮ ರಾಜನಗರ ಜಿಲ್ಲಾಡಳಿತ ಭರವಸೆ ನೀಡಿದ್ದರಿಂದ ನಾವು ರೋಗಿಗಳಿಗೆ ಚಿಕಿತ್ಸೆ ನೀಡಿ ಮಾನವೀಯ ದೃಷ್ಟಿಯಿಂದ ಆಸ್ಥೆ ವಹಿಸಿ ಗುಣಪಡಿಸಿದೆವಾದರೂ ಇದುವರೆಗೂ ಒಂದು ನಯಾ ಪೈಸೆಯನ್ನು ಪಾವತಿಸಿಲ್ಲ ಎಂದು ಮೈಸೂರಿನ ಸುಯೋಗ ಆಸ್ಪತ್ರೆ ಮುಖ್ಯಸ್ಥ ಡಾ.ಎಸ್.ಪಿ.ಯೋಗಣ್ಣ ದೂರಿದ್ದಾರೆ. ನಮ್ಮಂತೆ ಇತರ, ಖಾಸಗಿ ಆಸ್ಪತ್ರೆಗಳೂ ಸುಳ ವಾಡಿ ಪ್ರಕರಣದ ಅಸ್ವಸ್ಥರಿಗೆ ಚಿಕಿತ್ಸೆ ನೀಡಿವೆ. ಸುಯೋಗ ಆಸ್ಪತ್ರೆಯಲ್ಲಿ 19 ಮಂದಿಗೆ ಐಸಿಯು ಹಾಗೂ ಇತರ ರನ್ನು ಸಿಸಿಯುನಲ್ಲಿರಿಸಿ ತಿಂಗಳಿಗೂ ಹೆಚ್ಚು ಕಾಲ ಚಿಕಿತ್ಸೆ ನೀಡಿದ್ದು, ಸರ್ಕಾರದಿಂದ ನಮಗೆ ಸುಮಾರು 25 ಲಕ್ಷ ರೂ. ಬಿಲ್ ಬರಬೇಕಿದೆ ಎಂದೂ ತಿಳಿಸಿದರು.

ಸರ್ಕಾರದ ನಿರ್ದೇಶನದಂತೆ ನಾವು ರೋಗಿಗಳಿಗೆ ಚಿಕಿತ್ಸೆ ನೀಡಿ, ಅವರ ಬಿಲ್ ಅನ್ನು ಚಾಮರಾಜನಗರ ಜಿಲ್ಲಾಧಿ ಕಾರಿಗಳಿಗೆ ಕಳುಹಿಸಿದ್ದೇವೆ. ಅವರು ಅನುಮೋದನೆಗಾಗಿ ಸರ್ಕಾರಕ್ಕೆ ರವಾನಿಸಿದ್ದಾರೆ. ನಾವು ಹಲವು ಬಾರಿ ಮುಖ್ಯ ಮಂತ್ರಿಗಳ ಕಚೇರಿ ಹಾಗೂ ಆರೋಗ್ಯ ಸಚಿವರ ಕಚೇರಿಗಳಿಗೆ ಫೋನ್ ಮಾಡಿ ಮಾತನಾಡಿದ್ದೇವೆ. ಆದರೂ ಕೇವಲ ಸಬೂಬು ಹೇಳುತ್ತಿದ್ದಾರೆಯೇ ಹೊರತು, ಹಣ ಬಿಡುಗಡೆ ಯಾಗಿಲ್ಲ ಎಂದು ಡಾ. ಯೋಗಣ್ಣ ದೂರಿದ್ದಾರೆ.

ಈ ಕುರಿತು `ಮೈಸೂರುಮಿತ್ರ’ನಿಗೆ ಪ್ರತಿಕ್ರಿಯಿಸಿದ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಅವರು ಬಿಲ್ ಪಾವತಿಸುವವರು ಚಾಮರಾಜನಗರ ಜಿಲ್ಲಾಡಳಿತ. ಆದರೆ ಸರ್ಕಾರದಿಂದ ಮಂಜೂರಾಗದ ಕಾರಣ ವಿಳಂಬವಾಗಿದೆ, ಸರ್ಕಾರದಿಂದ ಅನುಮೋದನೆ ಬಂದ ತಕ್ಷಣ ಪಾವತಿ ಮಾಡುವುದಾಗಿ ತಿಳಿಸಿದರು.

ಒಟ್ಟಾರೆ ಸುಳವಾಡಿ ವಿಷ ಪ್ರಾಶನ ಪ್ರಕರಣದಲ್ಲಿ ಅಸ್ವಸ್ಥರಾಗಿದ್ದವರಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಗಳ 1.27 ಕೋಟಿ ರೂ. ಬಿಲ್ ಅನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

Translate »