ಮೋದಿಯೇ ಮತ್ತೆ ಪ್ರಧಾನಿ; ಶೇ.83 ಮಂದಿ ಅಭಿ`ಮತ’
ಮೈಸೂರು

ಮೋದಿಯೇ ಮತ್ತೆ ಪ್ರಧಾನಿ; ಶೇ.83 ಮಂದಿ ಅಭಿ`ಮತ’

February 22, 2019

ಟೈಮ್ಸ್ ಮೆಗಾ ಆನ್‍ಲೈನ್ ಸಮೀಕ್ಷೆಯಲ್ಲಿ 2 ಲಕ್ಷ  ಮಂದಿ ಭಾಗಿ; ರಾಹುಲ್‍ಗೆ ಶೇ.8.33 ಮಂದಿ ಮತ

ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ವಾರಗಳು ಉಳಿದಿರುವಾಗ ಟೈಮ್ಸ್ ಸಮೂಹದ ಮೆಗಾ ಆನ್ ಲೈನ್ ಸಮೀಕ್ಷೆಯಲ್ಲಿ 3ನೇ ಎರಡಕ್ಕಿಂತಲೂ ಹೆಚ್ಚು ಮಂದಿ (ಶೇ.83) ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗುತ್ತಾರೆ ಎಂದು ಅಭಿ`ಮತ’ ಚಲಾಯಿಸಿದ್ದಾರೆ.

ಮೋದಿ ಅವರ ನೇತೃತ್ವದ ಎನ್‍ಡಿಎ ಸರಕಾರವೇ ಮತ್ತೆ ಅಧಿ ಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಕೇವಲ ಶೇ 3.47 ಮಂದಿ ಮಾತ್ರ ಎನ್‍ಡಿಎಯೇತರ, ಯುಪಿಎಯೇತರ ಮಹಾಘಟಬಂಧನ ಸರಕಾರ ಚುನಾವಣೆ ಬಳಿಕ ಅಧಿಕಾರಕ್ಕೆ ಬರಬಹುದು ಎಂದು ಭಾವಿಸಿದ್ದಾರೆ. ಒಟ್ಟಾರೆ 5 ಲಕ್ಷಕ್ಕೂ ಅಧಿಕ ಮಂದಿ ಈ ಸಮೀಕ್ಷೆಯಲ್ಲಿ ಮತ ಚಲಾಯಿಸಿ ದ್ದಾರೆ. ಒಬ್ಬ ವ್ಯಕ್ತಿಗೆ ಒಂದೇ ಬಾರಿ ಅಭಿಪ್ರಾಯ ವ್ಯಕ್ತಪಡಿಸಲು ಮಿತಿ ವಿಧಿಸಲಾಗಿತ್ತು. ಪ್ರಧಾನಿ ಮೋದಿ ಅವರ ವೈಯಕ್ತಿಕ ಜನಪ್ರಿಯತೆ ಅಧಿಕವಾಗಿರುವುದನ್ನು ಈ ಸಮೀಕ್ಷೆ ಎತ್ತಿ ತೋರುತ್ತದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೆ 2ನೇ ಆದ್ಯತೆ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಅವರ ಪರವಾಗಿ ಶೇ.8.33 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ. ಪ್ರಧಾನಿ ಅಭ್ಯರ್ಥಿಯಾಗಿ ಮಮತಾ ಬ್ಯಾನರ್ಜಿ ಅವರಿಗೆ ಶೇ.1.44, ಬಿಎಸ್‍ಪಿ ವರಿಷ್ಠೆ ಮಾಯಾವತಿ ಪರವಾಗಿ ಶೇ.0.43 ಮಂದಿ ಮತ ಚಲಾಯಿಸಿದ್ದರೆ, ಶೇ.5.9 ಮಂದಿ ಬೇರೆ ಯಾರಾದರೂ ಮುಂದಿನ ಪ್ರಧಾನಿಯಾಗಲಿ ಎಂದಿದ್ದಾರೆ. 2014ಕ್ಕೆ ಹೋಲಿಸಿದರೆ ರಾಹುಲ್ ಜನಪ್ರಿಯತೆ ಹೆಚ್ಚಿದೆ ಎಂದು ಭಾವಿಸುವಿರಾ? ಎಂಬ ಪ್ರಶ್ನೆಗೆ ಶೇ.31 ಮಂದಿ ಸಕಾರಾತ್ಮಕ ಉತ್ತರ ನೀಡಿದ್ದರೆ, ಶೇ.63 ಮಂದಿ ಇಲ್ಲ ಎಂದು ಉತ್ತರಿಸಿದ್ದಾರೆ.

ಮೋದಿ ಸರಕಾರದ ಐದು ವರ್ಷಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದವರು ಮೂರನೇ ಎರಡಕ್ಕಿಂತಲೂ ಹೆಚ್ಚು ಮಂದಿ. ಇವರ ಪೈಕಿ ಶೇ.59.51 ಮಂದಿ ‘ಅತ್ಯುತ್ತಮ’ ಎಂದಿದ್ದರೆ, ಶೇ.22.29 ಮಂದಿ ‘ಉತ್ತಮ’ ಎಂದಿದ್ದಾರೆ. ಶೇ.8.25 ಮಂದಿ ಸರಾಸರಿ ಎಂದಿದ್ದಾರೆ. ಶೇ.9.9 ಮಂದಿ ಮಾತ್ರ ‘ಕಳಪೆ’ ಎಂದು ಉತ್ತರಿಸಿದ್ದಾರೆ.

ಶೇ 34.39 ಮಂದಿ ಕೇಂದ್ರ ಸರಕಾರದ ಯೋಜನೆಗಳ ಲಾಭ ಬಡವರಿಗೆ ಸುಲಭವಾಗಿ ತಲುಪುವಂತಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದುವೇ ಮೋದಿ ಸರಕಾರದ ಅತಿ ದೊಡ್ಡ ಯಶಸ್ಸು ಎಂದಿದ್ದಾರೆ. ಜಿಎಸ್‍ಟಿ ಜಾರಿಗೊಳಿಸಿದ್ದೇ ಯಶಸ್ಸು ಎಂದವರ ಪ್ರಮಾಣ ಶೇ 29. ಆಸಕ್ತಿದಾಯಕ ಅಂಶವೆಂದರೆ, ರಾಮ ಮಂದಿರ ವಿಚಾರದಲ್ಲಿ ಮೋದಿ ಸರಕಾರ ಪ್ರಗತಿ ಸಾಧಿಸಿಲ್ಲ; ಇದೇ ದೊಡ್ಡ ವೈಫಲ್ಯ ಎಂದವರ ಪ್ರಮಾಣ ಶೇ.37.72ರಷ್ಟಿದೆ.

ಉದ್ಯೋಗ ಸೃಷ್ಟಿಯಾಗದಿರುವುದೇ ದೊಡ್ಡ ವೈಫಲ್ಯ ಎಂದವರ ಪ್ರಮಾಣ ಶೇ.29.5ರಷ್ಟಿದೆ. ವಾಸ್ತವದಲ್ಲಿ, ಉದ್ಯೋಗ ಸೃಷ್ಟಿ ವಿಚಾರವೇ ಮುಂದಿನ ಚುನಾವಣೆಯಲ್ಲಿ ಪ್ರಮುಖವಾಗಲಿದ್ದು, ಇದೇ ಪ್ರಮುಖ ಆತಂಕದ ವಿಚಾರ ಎಂದವರು ಶೇ.40.2 ಮಂದಿ. ರೈತರ ಸಮಸ್ಯೆಗಳೇ ಚುನಾವಣೆ ವೇಳೆ 2ನೇ ದೊಡ್ಡ ಸವಾಲಾಗಬಹುದು ಎಂದವರು ಶೇ.21.8 ಮಂದಿ. ಶೇ.10 ಮಂದಿ ಮಾತ್ರ ರಾಮ ಮಂದಿರ ನಿರ್ಮಾಣವಾಗದಿರುವುದು ದೊಡ್ಡ ವೈಫಲ್ಯ ಎಂದಿದ್ದಾರೆ. ಪ್ರಸ್ತುತ ಸರಕಾರದ ಆಡಳಿತದಲ್ಲಿ ಅಲ್ಪಸಂಖ್ಯಾತರು ಅಭದ್ರತೆ ಭಾವನೆ ಎದುರಿಸಿ ದ್ದಾರೆಯೇ ಎಂಬ ಪ್ರಶ್ನೆಗೆ, ಬಹುತೇಕ ಮತದಾರರು (ಶೇ 65.5) ಇಲ್ಲ ಎಂದು ಉತ್ತರಿಸಿದ್ದಾರೆ. ಶೇ.24.2 ಮಂದಿ ಅಲ್ಪಸಂಖ್ಯಾತರು ಅಭದ್ರತೆ ಎದುರಿಸಿದ್ದಾರೆ ಎಂದಿದ್ದಾರೆ. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇ 10ರ ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿಯಿಂದ ಚುನಾವಣೆಯಲ್ಲಿ ಲಾಭ ಆಗಬಹುದೆ? ಎಂಬ ಪ್ರಶ್ನೆಗೆ, ಶೇ.72.6 ಮಂದಿ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಫೇಲ್ ಡೀಲ್ ಕುರಿತ ಪ್ರಶ್ನೆಗೆ ಮತದಾರರ ಉತ್ತರ ಮತ್ತಷ್ಟು ಕುತೂಹಲಕಾರಿಯಾಗಿದೆ. ರಾಜಕೀಯ ಕೆಸರೆರಚಾಟದ ನಡುವೆಯೂ ಚುನಾವಣೆಯಲ್ಲಿ ಎನ್‍ಡಿಎ ಮೇಲೆ ಇದರಿಂದ ನಕಾರಾತ್ಮಕ ಪರಿಣಾಮವಾಗಬಹುದು ಎಂದವರ ಸಂಖ್ಯೆ ಶೇ.17.5 ಮಾತ್ರ. ಶೇ.74.6 ಮಂದಿ ಇದರಿಂದ ನಕಾರಾತ್ಮಕ ಪರಿಣಾಮವಿಲ್ಲ ಎಂದಿದ್ದಾರೆ.

Translate »