ಮೋದಿ ಆಳ್ವಿಕೆ ದೇಶಕ್ಕೆ ನೀಡಿರುವ ಅತ್ಯಂತ ಶ್ರೇಷ್ಠ ಕೊಡುಗೆ
ಮೈಸೂರು

ಮೋದಿ ಆಳ್ವಿಕೆ ದೇಶಕ್ಕೆ ನೀಡಿರುವ ಅತ್ಯಂತ ಶ್ರೇಷ್ಠ ಕೊಡುಗೆ

April 10, 2019

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರದ್ದು ಕಳಂಕ ರಹಿತ ನಾಯಕತ್ವ. ಭ್ರಷ್ಟಾ ಚಾರ ಸುಳಿಯಲೂ ಅವಕಾಶ ನೀಡದೆ 5 ವರ್ಷ ಆಡಳಿತ ನಡೆಸಿರುವುದು ಅವರು ದೇಶಕ್ಕೆ ನೀಡಿರುವ ಅತ್ಯಂತ ಶ್ರೇಷ್ಠ ಕೊಡುಗೆ ಎಂದು ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಬಣ್ಣಿಸಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಆಗಮನಕ್ಕೂ ಮುನ್ನ ಮಾತನಾಡಿದ ಅವರು, ವಿಶ್ವ ನಾಯಕರ ಸಮಾನರಾಗಿ ನಿಂತಿರುವ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಮರ್ಪಿ ಸುತ್ತೇನೆ. ಈ ಬಗ್ಗೆ ನಾನೊಬ್ಬ ಭಾರತೀಯನಾಗಿ ಹೆಮ್ಮೆ ಪಡುತ್ತೇನೆ. ಕಳಂಕ ರಹಿತ ನಾಯಕರಾದ ಮೋದಿ ಅವರು, ದೇಶದ ಜನರಿಗೆ ಯಾವುದೇ ಭ್ರಷ್ಟಾಚಾರದ ವಾಸನೆ ಇಲ್ಲದ ಸರ್ಕಾರವನ್ನು ನೀಡಿ ದ್ದಾರೆಂದು ಧೈರ್ಯದಿಂದ ಹೇಳುತ್ತೇನೆ. ದೇಶದ ಬಲಿಷ್ಠತೆಗೆ ಮೋದಿ ಅವರೇ ಕಾರಣೀಭೂತರು. ಕಳೆದ 5 ವರ್ಷಗಳಲ್ಲಿ ಭಾರತದ ಬೆಳವಣಿಗೆಯ ಗತಿ, ವಿಧಾನ ಹಾಗೂ ಮೋದಿ ಅವರ ಮಹತ್ವದ ಹೆಜ್ಜೆಗಳನ್ನು ಕಂಡು ಅದೆಷ್ಟೋ ರಾಷ್ಟ್ರಗಳು ಅಸೂಯೆ ಪಡುತ್ತಿವೆ ಎಂದು ಹೇಳಿದರು. ದೊಡ್ಡ ರಾಷ್ಟ್ರಗಳ ಪ್ರಧಾನಮಂತ್ರಿ ಬಲಿಷ್ಠವಾಗಿರಬೇಕು. ಹಾಗೆಯೇ ಬಲಿಷ್ಠ ನಾಯಕ ಮೋದಿ ಭಾರತದ ಪ್ರಧಾನಿಯಾಗಿದ್ದಾರೆ.

ಕೆಲವರಿಗೆ ಪರಿವಾರವೇ ದೇಶ. ಆದರೆ ನನಗೆ ದೇಶವೇ ಪರಿವಾರ ಎಂದು ಹೇಳಿದಂತೆಯೇ ನಡೆದಿದ್ದಾರೆ. ಅವರಿಗೆ ಪರಿವಾರವಿಲ್ಲ, ದೇಶಕ್ಕಾಗಿ ದುಡಿದಿದ್ದಾರೆ. ಪಾಕಿಸ್ತಾನದೊಂದಿ ಗಿನ ಸಂಬಂಧವನ್ನು ತಮ್ಮದೇ ರೀತಿಯಲ್ಲಿ ವಿಮರ್ಶೆ ಮಾಡಿದ್ದ ಮೋದಿ ಅವರು, ಆರಂಭದಲ್ಲಿ ನೆರೆಹೊರೆ ರಾಷ್ಟ್ರಗಳ ಬಾಂಧವ್ಯ ಬಯಸಿದ್ದರು. ಆದರೆ ಪಾಕಿಸ್ತಾನದ ವರ್ತನೆ ಎಲ್ಲೆ ಮೀರಿದಾಗ ಸರ್ಜಿಕಲ್ ಸ್ಟ್ರೈಕ್ ಮೂಲಕ ಎಚ್ಚರಿಸಿದರು. ಪುಲ್ವಾಮಾ ದಾಳಿಯಲ್ಲಿ ಯೋಧರು ಹುತಾತ್ಮರಾದಾಗ ದೇಶದ ಜನರಿಗೆ ಮಾತು ಕೊಟ್ಟಂತೆ 11 ದಿನದಲ್ಲಿ ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಿದರು. ವಿಶ್ವದ ದೊಡ್ಡ ಸಮಸ್ಯೆಯಾಗಿರುವ ಭಯೋತ್ಪಾದನೆ ನಿರ್ಮೂಲನೆಗೆ ಒಟ್ಟಾಗಬೇಕೆಂಬ ಮೋದಿ ಅವರ ಕರೆಯನ್ನು ಹಲವು ರಾಷ್ಟ್ರಗಳು ಬೆಂಬಲಿಸಿದವು. ಈ ಮಹಾನ್ ನಾಯಕ ಇನ್ನೂ 5 ವರ್ಷ ದೇಶವನ್ನು ಮುನ್ನಡೆಸಬೇಕು. ಇದಕ್ಕೆ ಬೇಕಾದ ಅರ್ಹತೆ, ಯೋಗ್ಯತೆ, ಹೃದಯ ಶ್ರೀಮಂತಿಕೆ ಮೋದಿ ಅವರಿಗಿದೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮೋದಿ ಅವರಿಗೆ ಶಕ್ತಿ ತುಂಬಬೇಕೆಂದು ಮನವಿ ಮಾಡಿದರು.

ದೇಶದ ರಾಜಕಾರಣವನ್ನು ಸೂಕ್ಷ್ಮಗತಿಯಲ್ಲಿ ನೋಡಿದವರು ಮೋದಿ ಅವರು 3 ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಮಾಡಿದ ಜಾದೂವನ್ನು ಗಮನಿಸಿ, ಮುಂದೊಂದು ದಿನ ರಾಷ್ಟ್ರ ನಾಯಕರಾಗುತ್ತಾರೆಂದು ಎಣಿಸಿದ್ದರು. ಅದರಂತೆ 2014ರಲ್ಲಿ ದೇಶದ ರಾಜಕಾರಣದಲ್ಲಿ ಹೊಸ ಭಾಷ್ಯ ಬರೆದ ಅನುಭವವಾಯಿತು. ಮೋದಿ ಪ್ರಧಾನಿಯಾಗಿ ದೊಡ್ಡ ರೂಟ್ ಮ್ಯಾಪ್ ಹಾಕಿದರು. ರಾಜಕೀಯ ದಿಕ್ಕನ್ನು ಬದಲಿಸಿದ ಮೋದಿ ಅವರ ಹಲವು ಹೆಜ್ಜೆಗಳನ್ನು ನಾನು ಸಮರ್ಥಿಸಿಕೊಂಡು ಬಂದಿದ್ದೇನೆ. ಅಧಿಕ ಮುಖಬೆಲೆ ನೋಟುಗಳ ಚಲಾವಣೆ ರದ್ದು ಮಾಡಿದಾಗ ನಾನು ಕಾಂಗ್ರೆಸ್‍ನಲ್ಲಿದ್ದೂ ಸ್ವಾಗತಿಸಿದ್ದೇನೆ. ಇದರ ಉದ್ದೇಶ ಸಂಪೂರ್ಣ ಈಡೇರದಿದ್ದರೂ ಬಚ್ಚಿಟ್ಟಿದ್ದ ಹಣ ಬ್ಯಾಂಕ್ ಸೇರಿತೆಂದು ಎಸ್.ಎಂ.ಕೃಷ್ಣ ಅವರು ಸ್ಮರಿಸಿಕೊಂಡರು.

Translate »