ಅರಕಲಗೂಡು: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಜಮೀನಿಗೆ ನುಗ್ಗಿ, ಮಗುಚಿ ಬಿದ್ದ ಪರಿಣಾಮ 30ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಅರಕಲಗೂಡು ಸಮೀಪದ ಉಳ್ಳೇನಹಳ್ಳಿ ಸೇತುವೆ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ.
ಕೆಲ ದಿನಗಳ ಹಿಂದೆ ಮದುವೆಯಾಗಿದ್ದ ವಧುವನ್ನು ಕರೆತರಲು ವರನ ಕಡೆಯವರು ಕುಶಾಲನಗರದಿಂದ ಖಾಸಗಿ ಬಸ್ ಬಾಡಿಗೆಗೆ ಪಡೆದು ಅರಿಯೂರಿನಿಂದ ಸೋಮವಾರ ಬೆಳಿಗ್ಗೆ ಹೊರಟಿದ್ದರು. ಬಸ್ ಅರಕಲಗೂಡು ಬಳಿ ಇರುವ ಹೆಬ್ಬಾಲೆ ಅತ್ನಿ ಕಡೆಗೆ ತೆರಳುತ್ತಿದ್ದಾಗ ಹುಲ್ಲೇನಹಳ್ಳಿ ಸಮೀಪ ಬೈಕ್ ಅನ್ನು ಓವರ್‍ಟೇಕ್ ಮಾಡಲು ಪ್ರಯತ್ನಿಸಿದಾಗ ಬಸ್ ಚಾಲಕನ ನಿಯಂತ್ರಣ ತಪ್ಪಿ ಜಮೀನಿಗೆ ನುಗ್ಗಿ ಮಗುಚಿ ಬಿದ್ದಿದೆ.
ಈ ವೇಳೆ ಬಸ್‍ನಲ್ಲಿ 50ಕ್ಕೂ ಹೆಚ್ಚು ಜನರಿದ್ದರೆಂದು ಹೇಳಲಾಗಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಗ್ರಾಮಸ್ಥರು ನೆರವಿಗೆ ಧಾವಿಸಿ ಬಸ್‍ನಿಂದ ಗಾಯಾಳುಗಳನ್ನು ಹೊರತೆಗೆದು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಕೊಣನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.