ಮೈಸೂರು ರೇಸ್ ಕೋರ್ಸ್‍ನಲ್ಲಿ 60 ಸಾವಿರಕ್ಕೂ ಅಧಿಕ ಮಂದಿ ಯೋಗ ಪ್ರದರ್ಶನ
ಮೈಸೂರು

ಮೈಸೂರು ರೇಸ್ ಕೋರ್ಸ್‍ನಲ್ಲಿ 60 ಸಾವಿರಕ್ಕೂ ಅಧಿಕ ಮಂದಿ ಯೋಗ ಪ್ರದರ್ಶನ

June 22, 2018
  • ಅಗತ್ಯ ಮುನ್ನೆಚ್ಚರಿಕೆಯಿಂದ ಸಾಂಗವಾಗಿ ನೆರವೇರಿದ ಮೆಗಾ ಕಾರ್ಯಕ್ರಮ
  • ದೇಶದ ಸಂಸ್ಕೃತಿ ಪ್ರತೀಕವಾದ ಯೋಗಕ್ಕೆ ಮೈಸೂರಿಗರಿಂದ ಸಿಕ್ಕಿತು ಮೆರಗು

ಮೈಸೂರು:  ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯ ಚಾಮುಂಡಿ ಬೆಟ್ಟದ ತಪ್ಪಲು, ಕಂಗೊಳಿಸುತ್ತಿದ್ದ ಹಸಿರು ವಲಯ ಮೋಡ ಕವಿದ ವಾತಾವರಣ ಹಾಗೂ ಚುಮು ಚುಮು ಚಳಿಯ ನಡುವೆ ಮೈಸೂರಿನ ರೇಸ್ ಕೋರ್ಸ್‍ನಲ್ಲಿ ಸಾವಿರಾರು ಮಂದಿಯಿಂದ ಯೋಗ ಪ್ರದರ್ಶನ. ಗುರುವಾರ ನಡೆದ ನಾಲ್ಕನೇ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ 60 ಸಾವಿರಕ್ಕೂ ಹೆಚ್ಚು ಮಂದಿ ಸಾಮೂಹಿಕ ಯೋಗ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು.

ಕಳೆದ ವರ್ಷ 55,506 ಮಂದಿ ಬೃಹತ್ ಸಾಮೂಹಿಕ ಯೋಗ ಪ್ರದರ್ಶನದ ಮೂಲಕ ನೀಡಿ, ಗಿನ್ನಿಸ್ ದಾಖಲೆ ಬರೆದಿದ್ದರು. ಈ ಬಾರಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಯೋಗ ನಗರಿ ಮೈಸೂರಿನಲ್ಲಿ ಯೋಗಕ್ಕೆ ಹೆಚ್ಚಿನ ಮಹತ್ವವಿದೆ ಎಂಬ ಸಂದೇಶ ಸಾರಿದರು. ಮೈಸೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಯುಷ್ ಇಲಾಖೆ, ನೆಹರು ಯುವ ಕೇಂದ್ರ, ಎಸ್‍ಪಿವೈಎಸ್‍ಎಸ್, ಜಿಎಸ್‍ಎಸ್ ಯೋಗಿಕ್ ಫೌಂಡೇಶನ್, ಪತಂಜಲಿ ಸಂಸ್ಥೆ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್, ಚಿರಾಗ್ ಆಡ್ಸ್ ಸಂಸ್ಥೆ, ಮೈಸೂರು ಯೋಗ ಒಕ್ಕೂಟ, ಮೈಸೂರು ಯೋಗ ಸ್ಪೋಟ್ರ್ಸ್ ಫೌಂಡೇಷನ್, ಜೆಎಸ್‍ಎಸ್ ಸಂಸ್ಥೆ, ಯೋಗ ಕಾಲೇಜು ಹಾಗೂ ವಿವಿಧ ಯೋಗ ಸಂಘ ಸಂಸ್ಥೆಗಳ ಹಾಗೂ ಸಂಯುಕ್ತಾಶ್ರಯದಲ್ಲಿ ನಡೆದ ಬೃಹತ್ ಯೋಗ ಪ್ರದರ್ಶನದಲ್ಲಿ ಮೈಸೂರು ನಗರ ಮಾತ್ರವಲ್ಲದೆ, ತಾಲೂಕಿನ ವಿವಿಧ ಶಾಲೆಗಳಿಂದಲೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮುಂಜಾನೆಯಿಂದಲೇ ಆಗಮನ: ಮೈಸೂರು ರೇಸ್‍ಕೋರ್ಸ್ ಆವರಣ ಮುಂಜಾನೆ 4ರಿಂದಲೇ ಚಟುವಟಿಕೆ ತಾಣವಾಗಿತ್ತು. ಯೋಗ ಪ್ರದರ್ಶನ ಬೆಳಿಗ್ಗೆ 6.30ಕ್ಕೆ ಆರಂಭವಾಗ ಲಿದೆ ಎಂದು ಮುಂಜಾನೆ 4 ಗಂಟೆಯಿಂದಲೇ ಉತ್ಸಾಹಿ ಯೋಗಪಟುಗಳು ರೇಸ್‍ಕೋರ್ಸ್ ಆವರಣಕ್ಕೆ ಆಗಮಿಸ ತೊಡಗಿದ್ದರು. ಬೆಳಿಗ್ಗೆ 6.30ರ ವೇಳೆಗೆ ಮೈದಾನ ಜನರಿಂದ ತುಂಬ ತೊಡಗಿತ್ತು. ಸಭಾ ಕಾರ್ಯಕ್ರಮ 7.45ಕ್ಕೆ ಆರಂಭವಾಗಿ ತ್ತಾದರೂ ವಿವಿಧೆಡೆಯಿಂದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ತಂಡೋಪ ತಂಡವಾಗಿ ಮೈದಾನಕ್ಕೆ ಬರುತ್ತಲೇ ಇದ್ದರು. ಅಂತಿಮವಾಗಿ ಬೆಳಿಗ್ಗೆ 7.15ಕ್ಕೆ ಶಿಷ್ಟಾಚಾರದಂತೆ ಯೋಗ ಪ್ರದರ್ಶನ ಆರಂಭವಾಯಿತು.

ಉತ್ಸಾಹದ ಚಿಲುಮೆ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ನಡೆದ ಯೋಗ ಪ್ರದರ್ಶನದಲ್ಲಿ ಚಿಣ್ಣರಿಂದ ವೃದ್ಧರವರೆಗೂ ಪಾಲ್ಗೊಂಡು ಗಮನ ಸೆಳೆದರು. ಮೈಸೂರಿನಲ್ಲಿರುವ ಹಲವಾರು ಯೋಗ ಶಾಲೆಗಳಲ್ಲಿ ತರಬೇತಿ ಪಡೆಯುತ್ತಿರುವ ಯೋಗಪಟುಗಳು, ಸರ್ಕಾರಿ, ಖಾಸಗಿ ಸಂಸ್ಥೆಗಳ ನೌಕರರು, ಶಿಕ್ಷಕರು, ಉಪನ್ಯಾಸಕರು, ಐಟಿ ಸಂಸ್ಥೆಯ ಉದ್ಯೋಗಿಗಳು, ಸರ್ಕಾರಿ, ಖಾಸಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ವಿದ್ಯಾರ್ಥಿನಿಲಯಗಳಲ್ಲಿರುವ ವಿದ್ಯಾರ್ಥಿಗಳು, ಎನ್‍ಸಿಸಿ ಕೆಡೆಟ್‍ಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರು, ವಿವಿಧ ಪಕ್ಷಗಳ ಕಾರ್ಯಕರ್ತರು ಇಂದು ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿಯೂ ಮಕ್ಕಳಾದಿಯಾಗಿ ವೃದ್ಧರವರೆಗೂ ಪ್ರದರ್ಶನದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡು, ಗಮನ ಸೆಳೆದರು.

ಆಸನಗಳು: ಆರಂಭದಲ್ಲಿ ಸಾಮೂಹಿಕ ಪ್ರಾರ್ಥನೆ. ನಂತರ ಯೋಗ ಪ್ರದರ್ಶನಕ್ಕೆ ಪೂರಕವಾದ 17 ಬಗೆಯ ವ್ಯಾಯಾಮ ಮಾಡಿದರು. ಸಮಸ್ಥಿತಿ, ಕುತ್ತಿಗೆ ಭುಜ, ಸೊಂಟ ಹಾಗೂ ಮಂಡಿಗಳಿಗೆ ಸಂಬಂದಿಸಿದ ವ್ಯಾಯಾಮ ಮಾಡಿ ಯೋಗ ಪ್ರದರ್ಶನಕ್ಕೆ ಸಜ್ಜಾದರು. ನಂತರ 30 ನಿಮಿಷಗಳ ಕಾಲ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಖಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಶಲಭಾಸನ, ಅರ್ಧ ಹಲಾಸನ, ಪವನ ಮುಕ್ತಾಸನ, ಶವಾಸನ ಸೇರಿದಂತೆ ಇನ್ನಿತರ 19 ಆಸನಗಳನ್ನು ಪ್ರದರ್ಶಿಸಿದರು. ಪ್ರದರ್ಶನ ಅಂತಿಮ ಹಂತದಲ್ಲಿ 14 ನಿಮಿಷಗಳ ಕಾಲ ಕಪಾಲಭಾತಿ, ನಾಡಿಶೋಧನ ಪ್ರಾಣಾಯಾಮ, ಶೀಥಲೀ ಪ್ರಾಣಾಯಾಮ, ಭ್ರ್ರಮರಿ ಪ್ರಾಣಾಯಾಮ ಹಾಗೂ ಧ್ಯಾನ ಮಾಡುವ ಮೂಲಕ ಶಾಂತಿಮಂತ್ರದೊಂದಿಗೆ ಬೆಳಗ್ಗೆ 8.20ಕ್ಕೆ ಯೋಗ ಪ್ರದರ್ಶನ ತೆರೆ ಎಳೆದರು.

ಮಾರ್ಗದರ್ಶಕರ ಮಾರ್ಗಸೂಚಿ: ರೇಸ್‍ಕೋರ್ಸ್‍ನಲ್ಲಿ ಇಂದು ನಡೆದ ಯೋಗ ಪ್ರದರ್ಶನದಲ್ಲಿ ಒಂದು ಲಕ್ಷ ಯೋಗಪಟುಗಳನ್ನು ಸೇರಿಸಲೇಬೇಕೆಂದು ಯೋಗ ಸಂಸ್ಥೆಗಳು ಉದ್ದೇಶಿಸಿದ್ದವು. ಈ ಹಿನ್ನೆಲೆಯಲ್ಲಿ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ಯೋಗ ಶಾಲೆಗಳಿಗೆ ಮನವಿ ಮಾಡಿ ಕಡ್ಡಾಯವಾಗಿ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳನ್ನು ಕಳಿಸಿಕೊಡುವಂತೆ ಕೋರಿತ್ತು. ಇದಕ್ಕೆ ಸಮಿತಿಯೊಂದನ್ನು ರಚಿಸಿ, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿತ್ತು. ಮೈಸೂರಿನ ರೇಸ್‍ಕೋರ್ಸ್‍ನಲ್ಲಿ ಯೋಗಾಸನ ಮಾಡುವುದಕ್ಕಾಗಿ 72 ಬ್ಲಾಕ್‍ಗಳನ್ನು ನಿರ್ಮಿಸಲಾಗಿತ್ತು. ಪ್ರತಿಯೊಂದ ರಲ್ಲಿ 1200 ಜನ ಯೋಗ ಪ್ರದರ್ಶಸಿದರು. ಸಭಾ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಹಾಗೂ ಯೋಗಾಸನ ಮಾರ್ಗದರ್ಶನಕ್ಕಾಗಿ ಮುಂಭಾಗದಲ್ಲಿ ಮತ್ತೊಂದು ವೇದಿಕೆ ಜೊತೆಗೆ 72 ಬ್ಲಾಕ್‍ಗಳಿಗೂ ಸಣ್ಣ ಸಣ್ಣ ವೇದಿಕೆಯನ್ನು ನಿರ್ಮಿಸಿ ಇಬ್ಬರು ಮಾರ್ಗದರ್ಶಕರು, ಯೋಗಾಸನ ಹೇಳಿಕೊಡಲು ವ್ಯವಸ್ಥೆ ಮಾಡಲಾಗಿತ್ತು.

ವಿಶೇಷ ಮಕ್ಕಳು ಬಾಗಿ: ಯೋಗ ಪ್ರದರ್ಶನದಲ್ಲಿ ಕರುಣಾಮಯಿ ಫೌಂಡೇಷನ್‍ನ ಬುದ್ಧಿಮಾಂದ್ಯ ಮಕ್ಕಳು ಪಾಲ್ಗೊಂಡಿದ್ದರು. ವಿಶೇಷ ಮಕ್ಕಳಿಗಾಗಿಯೇ ಪ್ರತ್ಯೇಕ ಬ್ಲಾಕ್ ನೀಡಲಾಗಿತ್ತು. ಮಾರ್ಗದರ್ಶಕರ ಸೂಚನೆಯನ್ನು ಗಮನಿಸುತ್ತಾ ಯೋಗ ಪ್ರದರ್ಶಿಸಿದರು.

ವಿದೇಶಿಗರಿಂದಲೂ ಯೋಗ: ಮೈಸೂರಿನ ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹಾಗೂ ವಿವಿಧ ಯೋಗ ಶಾಲೆಗಳಲ್ಲಿ ಯೋಗ ಕಲಿಯುತ್ತಿರುವ ವಿದೇಶಿಗರು ರೇಸ್‍ಕೋರ್ಸ್ ಮೈದಾನದಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ ಭಾಗವಹಿಸಿ ಯೋಗಾಸನ ಮಾಡಿದರು.

ಪಾಲ್ಗೊಂಡಿದ್ದ ಪ್ರಮುಖರು: ಇಂದಿನ ಯೋಗ ಪ್ರದರ್ಶನದಲ್ಲಿ ಸಚಿವ ಸಾ.ರಾ. ಮಹೇಶ್, ಶಾಸಕರುಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂಸದ ಪ್ರತಾಪ ಸಿಂಹ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸುತ್ತೂರು ಕ್ಷೇತ್ರದ ಕಿರಿಯ ಸ್ವಾಮಿಜಿ ಶ್ರೀ ಜಯರಾಜೇಂದ್ರ ಸ್ವಾಮಿಜಿ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಉಪವಿಭಾಗಾಧಿಕಾರಿ ಹೆಚ್.ಎನ್.ಶಿವೇಗೌಡ, ಮೈಸೂರು ಮಾಜಿ ಜಿಲ್ಲಾಧಿಕಾರಿ ಡಿ.ರಂದೀಪ್, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಜಿ.ಪಂ ಅಧ್ಯಕ್ಷೆ ನಯೀಮಾ ಸುಲ್ತಾನ್, ಉಪಮೇಯರ್ ಇಂದಿರಾ ಮಹೇಶ್, ಪಾಲಿಕೆ ಆಯುಕ್ತ ಜಗದೀಶ್, ಮುಡಾ ಆಯುಕ್ತ ಕಾಂತರಾಜು, ಆಯೂಷ್ ಇಲಾಖೆಯ ನಿರ್ದೇಶಕಿ ಡಾ.ಬಿ.ಎಸ್.ಸೀತಾಲಕ್ಷ್ಮೀ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ರಾಜು, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಹೆಚ್.ಪಿ.ಮಂಜುನಾಥ್, ಕಾಡ ಸಾರ್ವಜನಿಕ ಸಂಪರ್ಕಾಧಿಕಾರಿ ರವಿಕುಮಾರ್, ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಕಾರ್ಯದರ್ಶಿ ಎ.ಸಿ.ರವಿ, ಎಸ್‍ಪಿವೈಎಸ್ ಮುಖ್ಯಸ್ಥ ಡಾ.ಮಾರುತಿ, ಜಿಎಸ್‍ಎಸ್ ಯೋಗಿಕ್ ಶ್ರೀಹರಿ, ರಂಗನಾಥ್, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಮೈಸೂರು ಯೋಗ ಒಕ್ಕೂಟದ ಬಿ.ಪಿ.ಮೂರ್ತಿ, ಶಾಂತರಾಮು, ಮೈಸೂರು ಯೋಗ ಸ್ಪೋಟ್ರ್ಸ್ ಕ್ಲಬ್‍ನ ಮುಖ್ಯಸ್ಥರು ಡಾ.ಗಣೇಶ್ ಕುಮಾರ್, ಪತಂಜಲಿಯ ಸಂಸ್ಥೆಯ ರತ್ನರಾವ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

177 ಕೆಜಿ ಪ್ಲಾಸ್ಟಿಕ್ ಬಾಟಲ್, 40 ಕೆಜಿ ಇತರೆ ಕಸ ಸಂಗ್ರಹ

ಮೈಸೂರು: ಮೈಸೂರಿನ ರೇಸ್‍ಕೋರ್ಸ್‍ನಲ್ಲಿ ಗುರುವಾರ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 60 ಸಾವಿರಕ್ಕೂ ಹೆಚ್ಚು ಯೋಗಪಟುಗಳು ಪ್ರದರ್ಶನದ ಬಳಿಕ ಎಸೆದು ಹೋಗಿದ್ದ 177 ಕೆಜಿ ಪ್ಲಾಸ್ಟಿಕ್ ಬಾಟಲ್ ಹಾಗೂ 40 ಕೆಜಿ ಪೇಪರ್ ಪ್ಲೇಟ್ ಸೇರಿದಂತೆ ಇತರೆ ಕಸವನ್ನು 40 ಮಂದಿ ಪೌರಕಾರ್ಮಿಕರು ಕೆಲವು ಸ್ವಯಂ ಸೇವಕರೊಂದಿಗೆ ಸಂಗ್ರಹಿಸಿದ್ದಾರೆ.

ಬೃಹತ್ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಯೋಗಪಟುಗಳಿಗೆ ಜಿಲ್ಲಾಡಳಿತ ಹಾಗೂ ವಿಜಯ ಬ್ಯಾಂಕ್ ವತಿಯಿಂದ ಅರ್ಧ ಲೀಟರ್ ಕುಡಿಯುವ ನೀರಿನ ಬಾಟಲ್ ಪೂರೈಸಿತ್ತು. ಅಲ್ಲದೆ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಮಾಡಿತ್ತು. ಉಪಹಾರದ ಪೊಟ್ಟಣಕ್ಕೆ ಅಲ್ಯೂಮಿನಿಯಂ ಹಾಳೆಯ ಬಾಕ್ಸ್ ಬಳಸಲಾಗಿತ್ತು. ಯೋಗ ಪ್ರದರ್ಶನದ ನಡುವೆ ನೀರು ಕುಡಿದು, ಉಪಹಾರ ಸೇವಿಸಿ ಖಾಲಿ ಬಾಟಲ್ ಹಾಗೂ ಉಪಹಾರದ ಪೊಟ್ಟಣಗಳನ್ನು 40 ಮಂದಿ ಪೌರಕಾರ್ಮಿಕರ ತಂಡ ಬೆಳಗ್ಗೆ 9.30ರಿಂದ 12.30ರವರೆಗೆ ಸ್ವಚ್ಛತಾ ಕಾರ್ಯ ನಡೆಸಿ 177 ಕೆಜಿ ಪ್ಲಾಸ್ಟಿಕ್ ಬಾಟಲ್ ಹಾಗೂ ವಿವಿಧ ರೀತಿಯ ತಟ್ಟೆ, ಆಲ್ಯೂಮಿನಿಯಂ ಪೇಪರ್ ಸೇರಿದಂತೆ ಇನ್ನಿತರೆ 40 ಕೆಜಿ ಸಂಗ್ರಹಿಸಿ ನಾಲ್ಕು ಆಟೋಗಳಲ್ಲಿ ವಿಲೇವಾರಿ ಮಾಡಿದರು.

ವಿಶೇಷ ಚೇತನರಿಂದಲೂ ಯೋಗ

ಮೈಸೂರಿನ ರಂಗ ರಾವ್ ಸ್ಮಾರಕ ವಿಕಲಚೇತನರ ಶಾಲೆಯ 25 ವಿಶೇಷ ಚೇತನ ವಿದ್ಯಾರ್ಥಿನಿಯರು ಅಂತರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೈ ಎನಿಸಿಕೊಂಡರು. ಧ್ವನಿವರ್ಧಕದಲ್ಲಿ ವಿವಿಧ ಯೋಗಾಸನದ ಬಗ್ಗೆ ನೀಡುತ್ತಿದ್ದ ಸೂಚನೆಯನ್ನು ಗಮನಿಸಿ ಹಾಗೂ ಸಮೀಪದಲ್ಲಿಯೇ ಇದ್ದ ತಮ್ಮ ಶಿಕ್ಷಕರ ಮಾರ್ಗದರ್ಶನದಂತೆ ಗಮನಿಸಿ ವಿವಿಧ ಆಸನಗಳನ್ನು ಮಾಡಿ, ಗಮನ ಸೆಳೆದರು.

ಮುಂದಿನ ವರ್ಷ ಪ್ರಧಾನಿ ನರೇಂದ್ರ ಮೋದಿ ಕರೆತರುವೆ…

ಕಳೆದ ಮೂರು ವರ್ಷದಿಂದ ವಿಶ್ವ ಯೋಗ ದಿನದಂದು ಇಡೀ ದೇಶವೇ ಮೈಸೂರಿನತ್ತ ದೃಷ್ಟಿ ಹಾಯಿಸುತ್ತಿದೆ. 10 ಸಾವಿರದಿಂದ 60 ಸಾವಿರ ಮಂದಿ ಯೋಗ ಪ್ರದರ್ಶನದವರೆಗೆ ಮೈಸೂರಿನ ಯೋಗಪಟುಗಳು ಸಾಥ್ ನೀಡಿದ್ದಾರೆ. ಜೂ.21ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನಾಗಿ ಆಚರಿಸುವುದಕ್ಕೆ 2015ರಲ್ಲಿ ಪ್ರದಾನಿ ನರೇಂದ್ರ ಮೋದಿ ಅವರು ವಿಶ್ವದ 172 ದೇಶಗಳನ್ನು ಒಪ್ಪಿಸಿದ್ದಾರೆ. ಇದರಿಂದ ಮೋದಿ ಅವರು ವಿಶ್ವದಲ್ಲಿ ಎಷ್ಟರ ಮಟ್ಟಿಗೆ ಪ್ರಭಾವ ಹೊಂದಿದ್ದಾರೆ ಎಂದು ತಿಳಿಯುತ್ತದೆ. ವಿಧಾನಸಭಾ ಚುನಾವಣೆಯ ವೇಳೆ ಮೈಸೂರಿಗೆ ಮೋದಿ ಅವರು ಬಂದಿದ್ದಾಗ ಕಳೆದ ವರ್ಷ ಮೈಸೂರಿನ ಯೋಗಪಟುಗಳು ಮಾಡಿದ ಗಿನ್ನಿಸ್ ದಾಖಲೆಯ ಮಾಹಿತಿ ಹಾಗೂ ಮೈಸೂರಿನಲ್ಲಿ ನಡೆಸಿದ ಯೋಗ ಪ್ರದರ್ಶನದ ಚಿತ್ರಗಳನ್ನು ತೋರಿಸಿ, ಈ ಬಾರಿ ಅಂತರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರಲ್ಲದೆ, ಶಾರ್ಟ್ ಲಿಸ್ಟ್ ಮಾಡಿ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಕಾರಣಾಂತರಗಳಿಂದ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಮುಂದಿನ ವರ್ಷ ನಡೆಯುವ ಕಾರ್ಯಕ್ರಮದ ವೇಳೆ ಲೋಕಸಭಾ ಚುನಾವಣೆ ನಡೆದಿರುತ್ತದೆ. ನರೇಂದ್ರ ಮೋದಿ ಅವರೇ ಮತ್ತೆ ಪ್ರದಾನಿಯಾಗಲಿದ್ದಾರೆ. ಮೈಸೂರಿನಲ್ಲಿ ನಡೆಯುವ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಮೋದಿ ಅವರನ್ನು ಕರೆತರುತ್ತೇನೆ. – ಪ್ರತಾಪಸಿಂಹ, ಸಂಸದ

ಖುಷಿಯಾಗಿದೆ…
ರೇಸ್‍ಕೋರ್ಸ್ ಆವರಣದಲ್ಲಿ ಇಂದು ನಡೆದ ಅಂತರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಸಂತೋಷದಿಂದ ಪಾಲ್ಗೊಂಡಿದ್ದೇನೆ. ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಯೋಗ ಮಾಡುವುದು ಅನಿವಾರ್ಯವಾಗಿದೆ. ಕಾಲು ನೋವಿದ್ದರೂ ಖುಷಿಯಿಂದ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದೇನೆ. – ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜವಂಶಸ್ಥ

ಮೈಸೂರಿಗೆ ಕೀರ್ತಿ

ಇಂದು ನಡೆದ ವಿಶ್ವ ಯೋಗ ಪ್ರದರ್ಶನದಲ್ಲಿ 60 ಸಾವಿರಕ್ಕೂ ಹೆಚ್ಚು ಯೋಗಪಟುಗಳು ಪಾಲ್ಗೊಳ್ಳುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಯೋಗಕ್ಕೆ ಪುನಶ್ಚೇತನ ನೀಡಿದ ಮೈಸೂರಿನ ಕೀರ್ತಿಯನ್ನು ಅಪಾರ ಸಂಖ್ಯೆಯ ಯೋಗಪಟುಗಳು ಸಾಮೂಹಿಕ ಯೋಗ ಪ್ರದರ್ಶನ ನೀಡುವುದರೊಂದಿಗೆ ಹೆಚ್ಚಿಸಿದ್ದಾರೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿರುವ ಯೋಗ ದೈನಂದಿನ ಬದುಕಿನಲ್ಲಿ ಪ್ರಭಾವ ಬೀರುತ್ತದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಮಾಡುವ ಅಗತ್ಯವಿದೆ. – ಎಸ್.ಎ.ರಾಮದಾಸ್, ಶಾಸಕ

ಕಳೆದ ಬಾರಿಗಿಂತ ಈ ಬಾರಿ ಹೆಚ್ಚು

ಇಂದು ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ 60 ಸಾವಿರಕ್ಕಿಂತ ಹೆಚ್ಚು ಯೋಗಪಟುಗಳು ಪಾಲ್ಗೊಂಡಿದ್ದರು. ಆರೋಗ್ಯವಂತ ಜೀವನ ನಡೆಸುವುದಕ್ಕೆ ಯೋಗ ಅನಿವಾರ್ಯವಾಗಿದೆ. ಇಂದು ಯಶಸ್ವಿ ಯೋಗ ಪ್ರದರ್ಶನಕ್ಕೆ ಟೀಮ್ ಮೈಸೂರು ಕಾರಣವಾಗಿದೆ. ಎಲ್ಲಾ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಯೋಗ ಒಕ್ಕೂಟಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೆ ಸಹಕರಿಸಿದ್ದಾರೆ. ವಿಧಾನಸಭಾ ಹಾಗೂ ವಿಧಾನ ಪರಿಷತ್ತಿನ ಚುನಾವಣೆಯ ಹಿನ್ನೆಲೆಯಲ್ಲಿ ಗಿನ್ನಿಸ್ ದಾಖಲೆಗೆ ಪ್ರಯತ್ನಿಸಲು ಸಾಧ್ಯವಾಗಲಿಲ್ಲ. ಚುನಾವಣಾ ಕೆಲಸಗಳು ಹೆಚ್ಚಾಗಿದ್ದರಿಂದ ಗ್ರೌಂಡ್ ವರ್ಕ್ ಮಾಡುವುದಕ್ಕೆ ಅವಕಾಶ ದೊರೆಯಲಿಲ್ಲ. ಮೈಸೂರಿನ ಹೆಸರಿನಲ್ಲಿರುವ ದಾಖಲೆ ಮುಂದುವರೆದಿದೆ. ಈ ಬಾರಿ ಡೆಹರಾಡೂನ್‍ನಲ್ಲಿ ನಡೆದ ಯೋಗ ಪ್ರದರ್ಶನ ದಾಖಲೆಯಾಗುತ್ತದಾ ಎಂದು ನೋಡಬೇಕು. ಒಂದು ವೇಳೆ ನಮ್ಮ ದಾಖಲೆಯನ್ನು ಯಾರಾದರು ಮುರಿದರೆ, ಮುಂದಿನ ವರ್ಷ ಮೈಸೂರಿನಲ್ಲಿಯೇ ಹೊಸ ದಾಖಲೆ ಮಾಡುವುದಕ್ಕೆ ಕ್ರಮ ಕೈಗೊಳ್ಳುತ್ತೇವೆ. – ಅಭಿರಾಮ್ ಜಿ.ಶಂಕರ್, ಜಿಲ್ಲಾಧಿಕಾರಿಗಳು

Translate »