ನಾಳೆಯಿಂದ ಮೈಸೂರಲ್ಲಿ ‘ಮೈ ರಿಯಾಲ್ಟಿ-2018’ ಸ್ಥಿರಾಸ್ತಿ ಸಂಬಂಧಿತ ಪ್ರದರ್ಶನ
ಮೈಸೂರು

ನಾಳೆಯಿಂದ ಮೈಸೂರಲ್ಲಿ ‘ಮೈ ರಿಯಾಲ್ಟಿ-2018’ ಸ್ಥಿರಾಸ್ತಿ ಸಂಬಂಧಿತ ಪ್ರದರ್ಶನ

August 23, 2018

ಮೈಸೂರು: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಮೈಸೂರು ಶಾಖೆ, ಕಾನ್ಫಿಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ (ಕ್ರೆಡಾಯ್) ಮೈಸೂರು ಶಾಖೆ ಹಾಗೂ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್‍ನ ಸಂಯುಕ್ತಾಶ್ರಯದಲ್ಲಿ ಆ.24ರಿಂದ 26ರವರೆಗೆ `ಮೈ ರಿಯಾಲ್ಟಿ-2018’ ಶೀರ್ಷಿಕೆಯಡಿ ಸ್ಥಿರಾಸ್ತಿ ಸಂಬಂಧಿತ ಬೃಹತ್ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಬಿಎಐ ಮೈಸೂರು ಶಾಖೆಯ ಕಾರ್ಯದರ್ಶಿ ಕೆ.ಅಜಿತ್ ನಾರಾಯಣ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಮಹಾತ್ಮ ಗಾಂಧಿ ರಸ್ತೆಯ ಮಾಲ್ ಆಫ್ ಮೈಸೂರ್ ವಾಣಿಜ್ಯ ಸಂಕೀರ್ಣದಲ್ಲಿರುವ ರ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ಈ ಬೃಹತ್ ಪ್ರದರ್ಶನ ಏರ್ಪಡಿಸಲಾಗಿದೆ. 24ರ ಸಂಜೆ 4.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಅತಿಥಿಗಳಾಗಿ ಸಿಐಐ ಕರ್ನಾಟಕ ರಾಜ್ಯ ಕೌನ್ಸಿಲ್ ಅಧ್ಯಕ್ಷ ಡಾ.ಎನ್.ಮುತ್ತುಕುಮಾರ್, ಕ್ರೆಡಾಯ್ ಕರ್ನಾಟಕ ರಾಜ್ಯ ಅಧ್ಯಕ್ಷ ಡಾ.ವಿ.ಕೆ.ಜಗದೀಶ್ ಬಾಬು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಖರೀದಿ ಹಾಗೂ ವ್ಯಾಪಾರಕ್ಕೆ ಈ ಪ್ರದರ್ಶನ ಸದವಕಾಶ ಕಲ್ಪಿಸಲಿದೆ. ಇಂತಹ ಪ್ರದರ್ಶನವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಆಯೋಜಿಸಲಾಗುತ್ತಿದೆ. ಇದು ನಮ್ಮ ಸಂಘಟನೆಗಳ ವತಿಯಿಂದ ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿರುವ ವಾರ್ಷಿಕ ಬೃಹತ್ ಕಾರ್ಯಕ್ರಮವಾಗಿದೆ. ಈ ಪ್ರದರ್ಶನದಲ್ಲಿ ಬಡಾವಣೆಗಳು, ಅಪಾರ್ಟ್‍ಮೆಂಟ್ಸ್, ಗುಂಪು ಮನೆಗಳ ಬಗ್ಗೆ ಸಮಗ್ರ ಮಾಹಿತಿ ಲಭ್ಯವಾಗಲಿದೆ. ಗೃಹ ಸಾಲ ಸೌಲಭ್ಯ ಒದಗಿಸುವ ಬ್ಯಾಂಕ್‍ಗಳ ಮಳಿಗೆಗಳು ಸೇರಿದಂತೆ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ಸಂಸ್ಥೆಗಳ ಮಳಿಗೆಗಳು ತಮ್ಮ ಯೋಜನೆಗಳನ್ನು ಪ್ರದರ್ಶಿಸಲಿವೆ. ಸುಮಾರು 40 ಮಳಿಗೆಗಳು ಕಟ್ಟಡ ನಿರ್ಮಾಣದ ಸಮಗ್ರ ನೋಟವನ್ನು ಅನಾವರಣಗೊಳಿಸಲಿವೆ ಎಂದು ವಿವರಿಸಿದರು.

ಬ್ರಿಡ್ಜ್ ಗ್ರೂಪ್, ಪ್ಯಾರಾಮೌಂಟ್ ಕನ್ಸ್‍ಟ್ರಕ್ಷನ್ಸ್, ಇಎಸ್‍ಎಸ್ ಅಂಡ್ ಇಎಸ್‍ಎಸ್ ಇನ್ವಾಸ್ಟ್ರರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಅನೇಕ ಕಂಪನಿ ಹಾಗೂ ಹಣಕಾಸು ಸಂಸ್ಥೆಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. ಆ.24ರಿಂದ 26ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಪ್ರದರ್ಶನಕ್ಕೆ ಸಾರ್ವಜನಿಕರು ಭೇಟಿ ನೀಡಬಹುದು ಎಂದರು. ಕ್ರೆಡಾಯ್ ಮೈಸೂರು ಶಾಖೆ ಅಧ್ಯಕ್ಷ ಚಿನ್ನಸ್ವಾಮಿ, ಮೈ ರಿಯಾಲ್ಟಿ-2018ರ ಅಧ್ಯಕ್ಷ ಜಿ.ಅಶೋಕ್, ಕಾರ್ಯದರ್ಶಿ ಎಸ್.ಶಶಿರಾಜ್ ಗೋಷ್ಠಿಯಲ್ಲಿದ್ದರು.

Translate »