ಕ್ಷಣಕ್ಷಣಕ್ಕೂ ಜೀವ ಭಯ…. ಬದುಕುಳಿಯುವ ನಂಬಿಕೆಯೂ ಇರಲಿಲ್ಲ… ಮಗು ಉಳಿಸಿಕೊಳ್ಳಲಾಗಿಲ್ಲ…
ಕೊಡಗು

ಕ್ಷಣಕ್ಷಣಕ್ಕೂ ಜೀವ ಭಯ…. ಬದುಕುಳಿಯುವ ನಂಬಿಕೆಯೂ ಇರಲಿಲ್ಲ… ಮಗು ಉಳಿಸಿಕೊಳ್ಳಲಾಗಿಲ್ಲ…

August 23, 2018

ನೂರು ನಿರಾಶ್ರಿತರೊಂದಿಗೆ ಪಾರಾಗಿ ಬಂದ ಜಿಪಂ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪರ ಕಹಿ ಅನುಭವ

ಮಡಿಕೇರಿ: ಕೊಡಗಿನಲ್ಲಿ ಜಲ ಪ್ರಳಯವನ್ನು ಸೃಷ್ಟಿಸಿದ ಮಹಾಮಳೆ ಯಿಂದ ಮುಕ್ಕೋಡ್ಲು, ಮಕ್ಕಂದೂರು, ಕಾಲೂರು ಗ್ರಾಮಗಳು ಅಪಾರ ಹಾನಿಗೆ ಒಳಗಾ ಗಿದ್ದು, ಈ ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಸಿಲುಕಿಕೊಂಡಿದ್ದ ಗ್ರಾಮಸ್ಥರು ಜಲ ದಿಗ್ಬಂಧನದಿಂದ ಬಿಡಿಸಿಕೊಂಡು ಬಂದ ಸಾಹಸವೇ ರೋಚಕ.

ಜೀವ ಉಳಿಸಿಕೊಳ್ಳುವುದಕ್ಕಾಗಿ ಗ್ರಾಮದ ಬೆಟ್ಟ, ಗುಡ್ಡಗಳಲ್ಲಿ ಪರಿಚಯದವರ ಸುರಕ್ಷಿತ ಮನೆಗಳಲ್ಲಿ ಆಶ್ರಯ ಪಡೆದರೂ ಕ್ಷಣ ಕ್ಷಣಕ್ಕೂ ಜೀವ ಭಯ ಕಾಡುತ್ತಿತ್ತು…. ಬದುಕಿ ಉಳಿಯುತ್ತೇವೆ ಎಂಬ ನಂಬಿಕೆಯೂ ಇರಲಿಲ್ಲ.. ಹೀಗೆ ಮರಣಕೂಪದಿಂದ 100ಕ್ಕೂ ಹೆಚ್ಚು ಜನರನ್ನು ತಮ್ಮೊಂದಿಗೆ ಸುರಕ್ಷಿತವಾಗಿ ಕರೆತಂದ ಜಿಲ್ಲಾ ಪಂಚಾ ಯಿತಿ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ತಮ್ಮ ಅನುಭವವನ್ನು ‘ಮೈಸೂರು ಮಿತ್ರ’ನೊಂದಿಗೆ ಹಂಚಿಕೊಂಡರು.

ಕಳೆದೆರಡು ದಿನಗಳಿಂದ ಜಿಲ್ಲಾಡಳಿತ ಹಾಗೂ ಸರ್ಕಾರದ ಕಾರ್ಯಾಚರಣೆ ತಂಡಗಳು ನೂರಾರು ಮಂದಿಯನ್ನು ರಕ್ಷಿಸಿದ್ದೇವೆ. ಸಿಲುಕಿಕೊಂಡವರನ್ನು ಹೊರ ತಂದಿದ್ದೇವೆ ಎಂದೆಲ್ಲ ಹೇಳಿಕೆಗಳನ್ನು ನೀಡು ತ್ತಿದ್ದಾರೆ. ಆದರೆ, ಮುಕ್ಕೋಡ್ಲು ಗ್ರಾಮಸ್ಥರು ಸ್ಮಶಾನದಂತಿದ್ದ ಗ್ರಾಮಗಳಿಂದ ಪಾರಾಗಿ ಬಂದ ರೀತಿಯೇ ಸಾಹಸಮಯ. ಪ್ರವಾಹದ ನಡುವಿನಲ್ಲಿ ತಮ್ಮ ಮನೆಯಲ್ಲಿ ಸುಮಾರು 100ಕ್ಕೂ ಅಧಿಕ ಗ್ರಾಮಸ್ಥರೊಂದಿಗೆ ಸಿಲುಕಿಕೊಂಡಿದ್ದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಅವರ ಪ್ರಕಾರ ಯಾರೂ ಕೂಡ ಅವರನ್ನು ರಕ್ಷಿಸಿಲ್ಲ. ತಮ್ಮ ತಮ್ಮ ಜೀವ ಉಳಿಸಿಕೊಳ್ಳುವುದ ಕ್ಕಾಗಿ ಗ್ರಾಮಸ್ಥರೆ ದುಸ್ಸಾಹಸದಿಂದ ಬೆಟ್ಟ ಗುಡ್ಡ, ಕಾಡು ಮೇಡುಗಳನ್ನು ದಾಟಿ ಡಾಂಬರು ರಸ್ತೆಗೆ ಬಂದು ತಲುಪಿದ ನಂತರವಷ್ಟೆ ಅಧಿಕಾರಿಗಳು ಹಾಗೂ ಕಾರ್ಯಾಚರಣೆ ತಂಡ ಭೇಟಿಯಾಗಿದೆ.

ಆ ದಿನ ಅಂದರೆ ಆಗಸ್ಟ್ 15 ರಿಂದ ಮಹಾ ಮಳೆ ಗ್ರಾಮವನ್ನು ಆವರಿಸುತ್ತಲೆ ಬಂದಿದೆ. ಇದು ಪ್ರತಿ ವರ್ಷ ಸುರಿಯುವ ಮಾಮೂಲಿ ಮಳೆಯೆಂದು ಗ್ರಾಮಸ್ಥರು ಸೇರಿದಂತೆ ನಾನು ಸುಮ್ಮನಾಗಿದ್ದೆ. ಆದರೆ ಗಂಟೆಗಂಟೆಗೂ ಮಳೆಯ ಪ್ರಮಾಣ ಹೆಚ್ಚುತ್ತಲೆ ಹೋಯಿತು. ಆಗಸ್ಟ್ 16 ಹಾಗೂ 17 ರಂದು ಮಳೆ ತೀವ್ರತೆಯನ್ನು ಪಡೆದುಕೊಂಡಾಗ ಗ್ರಾಮಕ್ಕೆ ಗ್ರಾಮವೇ ಜಲಾವೃತಗೊಳ್ಳಲು ಆರಂಭವಾಯಿತು. ಅಪಾಯವನ್ನು ಅರಿತ ಸುಮಾರು 74 ಮಂದಿ ತಂತಿಪಾಲದ ದೊಡ್ಡ ಗುಡ್ಡದ ಮೇಲೆ ಹತ್ತಿ ಕುಳಿತರು. ಜಿಲ್ಲಾಡಳಿತದಿಂದ ಕಾರ್ಯಾಚರಣೆ ಪಡೆ ಹೆಲಿಕಾಪ್ಟರ್ ಮೂಲಕ ಬರಲಿದೆ ಎಂದು ಗ್ರಾಮಸ್ಥರು ವಿಶ್ವಾಸದಲ್ಲಿ ಇರುವಾಗಲೆ ಪ್ರವಾಹ ಹೆಚ್ಚಾಗುತ್ತಲೆ ಹೋಯಿತು. ಅಪಾಯ ಅರಿತ ಗ್ರಾಮಸ್ಥರು ಇನ್ನು ಕಾಯುವುದು ಬೇಡವೆಂದು ರವಿಕುಶಾಲಪ್ಪ ಅವರ ಮನೆಗೆ ಆಶ್ರಯ ಕೋರಿ ತೆರಳಿದ್ದಾರೆ.

ಪ್ರವಾಹ ಏರಿಕೆಯಾಗುತ್ತಿದ್ದಂತೆಯೇ ಮೇಘತ್ತಾಳು ಭಾಗದಲ್ಲಿ ಬೃಹತ್ ಗುಡ್ಡ ಕುಸಿದು 10 ಏಕರೆಯಷ್ಟು ಪ್ರದೇಶವನ್ನು ಆವರಿಸಿತು. ನೋಡು ನೋಡುತ್ತಿದ್ದಂತೆಯೇ ತಂತಿಪಾಲ ಗ್ರಾಮ ಸಂಪೂರ್ಣ ಜಲಾ ವೃತಗೊಂಡು ವಾಹನಗಳು ನೀರಿನಲ್ಲಿ ತೇಲತೊಡಗಿದವು. ಹಾಲು ಕುಡಿಯುವ ಮಕ್ಕಳು, ರೋಗದಿಂದ ಬಳಲುತ್ತಿರುವ ವಯೋವೃದ್ಧರು ಕಾಪಾಡಿ ಎಂದು ರವಿಕುಶಾಲಪ್ಪ ಅವರ ಬಳಿ ಗೋಗರೆ ದರು. ಎಲ್ಲರನ್ನು ಕರೆದುಕೊಂಡು ಮುಕ್ಕೋಡ್ಲುವಿನ ತಮ್ಮ ಮನೆಗೆ ಬಂದ ರವಿ ಕುಶಾಲಪ್ಪ, ಅಲ್ಲಿಯೇ ಎಲ್ಲರಿಗೆ ಊಟದ ವ್ಯವಸ್ಥೆಯನ್ನು ಮಾಡಿದರು. ಆದರೆ, ಮಳೆ ನಿಲ್ಲದೆ, ಗ್ರಾಮ ಕೆಸರು ನೀರಿನಿಂದ ದ್ವೀಪ ದಂತಾದಾಗ ಇನ್ನು ಜಿಲ್ಲಾಡಳಿತವನ್ನು ಕಾಯುವುದು ಬೇಡವೆಂದು ಬದುಕಿದರೆ ಊರು ಸೇರುತ್ತೇವೆ, ಇಲ್ಲದಿದ್ದರೆ ಎಲ್ಲರು ಸಾಯೋಣವೆಂದು ಧೈರ್ಯ ಮಾಡಿ ಗ್ರಾಮವನ್ನು ತೊರೆಯೋಣವೆಂದು ನಿರ್ಧಾರ ಕೈಗೊಂಡು ಕಾಡು ಹಾದಿಯಲ್ಲಿ ಪ್ರಯಾಣ ಬೆಳೆಸುತ್ತಾರೆ. ಆದರೆ ಇಲ್ಲಿಂದ ಮುಂದಿನ ಹಾದಿ ಘನಘೋರ..

ಹಗ್ಗ ಹಾಗೂ ಮರ ಕತ್ತರಿಸುವ ಯಂತ್ರ ದೊಂದಿಗೆ ಉಟ್ಟ ಬಟ್ಟೆಯಲ್ಲೆ ಎಲ್ಲರು ಹೊರಟೆವು. ಪ್ರವಾಹದಲ್ಲಿ ಸಂಪರ್ಕ ಸೇತುವೆ ಮುಳುಗಿದ್ದರಿಂದ ಹಗ್ಗದ ಮೂಲಕ ಸೇತುವೆಯನ್ನು ದಾಟಿ 3 ಕಿ.ಮೀ. ದೂರ ನಡೆದೆವು. ಆ ಮಾರ್ಗದಲ್ಲಿ ದೊಡ್ಡ ಪ್ರವಾಹ ಹರಿಯುತ್ತಿದ್ದುದರಿಂದ ಮರವೊಂದನ್ನು ಬೀಳಿಸಿ ಆ ಮರದ ಮೂಲಕ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕಾಯಿಲೆಯಿಂದ ಬಳಲುತ್ತಿದ್ದವರನ್ನು ಹೆಗಲಿನ ಮೇಲೆ ಹೊತ್ತುಕೊಂಡು ದಾಟಿದೆವು. ನಂತರ ಕೋಟೆ ಬೆಟ್ಟವನ್ನು ಏರಲು ಆರಂಭಿಸಿದೆವು. ಕೋಟೆ ಬೆಟ್ಟಕ್ಕೆ ಬಡಿಯುತ್ತಿದ್ದ ಗಾಳಿಯ ದಾಳಿಯನ್ನು ಸಹಿಸಿಕೊಂಡು ನೂರಕ್ಕೂ ಅಧಿಕ ಮಂದಿ ಬೆಟ್ಟವೇರಿ ಎರಡು ಹೊಳೆಗಳನ್ನು ದಾಟಿ ಹೇಗೋ ಮಾದಾಪುರ -ಸೋಮ ವಾರಪೇಟೆಯ ಇಗ್ಗೋಡ್ಲು ಗ್ರಾಮದ ಡಾಂಬರಿನ ರಸ್ತೆಗೆ ಬಂದು ತಲುಪಿದೆವು.

ಅಲ್ಲಿ ತಲುಪುತ್ತಿದ್ದಂತೆಯೇ ನಮ್ಮನ್ನು ಸ್ವಾಗತಿ ಸಲು ನಿಂತಿರುವಂತೆ ಕಾರ್ಯಾಚರಣೆ ತಂಡಗಳು ಗೋಚರಿಸಿದವು ಎಂದು ರವಿ ಕುಶಾಲಪ್ಪ ತಮ್ಮ ಕರಾಳ ಅನುಭವವನ್ನು ಹಂಚಿಕೊಂಡರು. ಇಷ್ಟೆಲ್ಲ ಕಷ್ಟಪಟ್ಟು ನಾವು ಸಾವಿನ ದವಡೆಯಿಂದ ಪಾರಾಗಿದ್ದೇವೆ. ಆದರೆ, ಕಾರ್ಯಾಚರಣೆ ಪಡೆಗಳು ನಾವೇ ಗ್ರಾಮಸ್ಥರನ್ನು ರಕ್ಷಿಸಿದ್ದೇವೆಂದು ಹೇಳಿಕೊಳ್ಳುತ್ತಿರುವುದು ಬೇಸರ ತಂದಿದೆ ಯೆಂದು ರವಿಕುಶಾಲಪ್ಪ ವಿಷಾದಿಸಿದರು. ಆಸ್ತಿ ಹೋದರು ಪರವಾಗಿಲ್ಲ, ಗ್ರಾಮಸ್ಥರ ಜೀವವನ್ನು ಉಳಿಸಬೇಕೆಂದು ಹರ ಸಾಹಸಪಟ್ಟಿದೇವೆ. ಯಾವುದೇ ಜೀವ ಹಾನಿಯಾಗದಿರುವುದು ಸಮಾಧಾನ ತಂದಿದ್ದರೂ ಪುಟ್ಟ ಮಗುವೊಂದು ಅಸುನೀಗಿ ರುವುದು ನೋವು ತಂದಿದೆ ಎಂದು ರವಿಕುಶಾಲಪ್ಪ ಕಣ್ಣೀರು ಹಾಕಿದರು.

ನನ್ನ ಮನೆಯ ಅಂಗಳದಲ್ಲಿ 14 ವಾಹನಗಳು ನಿಂತಿದ್ದು, ಇವುಗಳ ಸ್ಥಿತಿಗತಿ ನನ್ನ ಮನೆಯ ಸ್ಥಿತಿ ಗತಿ ಹೇಗಿದೆ ಎನ್ನುವುದೇ ಇಂದಿಗೂ ತಿಳಿದಿಲ್ಲವೆಂದು ನೋವನ್ನು ತೋಡಿಕೊಂಡರು.

ಮಕ್ಕಂದೂರು, ಮುಕ್ಕೋಡ್ಲು, ಶಾಂತಳ್ಳಿ ಗ್ರಾಮಗಳು ಸಂಪೂರ್ಣವಾಗಿ ನಾಶವಾ ಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಅವರು ಮನವಿ ಮಾಡಿದರು.

Translate »