ಸಂತ್ರಸ್ತರಿಗೆ 42 ಎಕರೆ ಪ್ರದೇಶದಲ್ಲಿ ಶೀಘ್ರ ಮಾದರಿ ಮನೆಗಳ ನಿರ್ಮಾಣ
ಮೈಸೂರು

ಸಂತ್ರಸ್ತರಿಗೆ 42 ಎಕರೆ ಪ್ರದೇಶದಲ್ಲಿ ಶೀಘ್ರ ಮಾದರಿ ಮನೆಗಳ ನಿರ್ಮಾಣ

August 24, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಗ್ರಾಮಸ್ಥರಿಗೆ ಮಡಿಕೇರಿ, ಸೋಮವಾರಪೇಟೆ ತಾಲೂಕಿನ ವಿವಿಧೆಡೆ 42 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಸಮರೋಪಾದಿಯಲ್ಲಿ ನವ ತಂತ್ರಜ್ಞಾನ ಬಳಸಿ ಮಾದರಿ ಮನೆಗಳನ್ನು ಸರ್ಕಾರ ನಿರ್ಮಿಸಿಕೊಡಲಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಈಗಾಗಲೇ 42 ಎಕರೆ ಜಾಗವನ್ನು ಮಡಿಕೇರಿ ತಾಲೂಕಿನ ಕೆ.ನಿಡುಗಣೆ, 1ನೇ ಮೊಣ್ಣಂಗೇರಿ, ಕರ್ಣಂಗೇರಿ, ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮಗಳಲ್ಲಿ ಗುರುತಿಸಲಾಗಿದೆ. ಪ್ರತಿ ಪಂಚಾಯತ್ ನಿಂದಲೂ ಲಭ್ಯವಿರುವ ಜಮೀನಿನ ಮಾಹಿತಿ ತರಿಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸೂಕ್ತ ನಿವೇಶನಗಳನ್ನು ಗುರುತಿಸಿ ನಿರಾಶ್ರಿತರಿಗೆ ಸೂಕ್ತ ಮನೆಗಳನ್ನು ನಿರ್ಮಿಸಿಕೊಡಲಾಗುತ್ತದೆ ಎಂದರು. ಕೊಡಗಿನಲ್ಲಿ ಲಭ್ಯವಿರುವ ಜಾಗಗಳನ್ನು ಗುರುತಿಸಿ ಪರಿಶೀಲನೆ ನಡೆಸಲೆಂದೇ ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಎಂ.ಕೆ.ಜಗದೀಶ್ ಅವರನ್ನು ನೇಮಿಸಲಾಗಿದೆ ಎಂದು ಹೇಳಿದರು. ಪ್ರಕೃತಿ ವಿಕೋಪದ ಸ್ಥಿತಿಯನ್ನು ರಾಜ್ಯ ಸರಕಾರ, ಸಮರ್ಥವಾಗಿ ಎದುರಿಸಿ, ಉತ್ತಮ ರೀತಿಯಲ್ಲಿ ಸಂತ್ರಸ್ತರಿಗೆ ನೆರವು ನೀಡುತ್ತಿದೆ ಎಂದು ದೇಶಕ್ಕೆ ತೋರಿಸಿದೆ.

ಕೊಡಗಿನ ಪ್ರಕೃತಿ ವಿಕೋಪ ಪರಿಸ್ಥಿತಿಯ ನಿರ್ವಹಣೆಯಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಖಾದರ್ ವಿಶ್ವಾಸದಿಂದ ನುಡಿದರು. ಎಲ್ಲವನ್ನೂ ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ. ಆದರೆ ಕೊಡಗಿನ ಸಂತ್ರಸ್ತರಿಗೆ ನಿವೇಶನ, ಮನೆ ನಿರ್ಮಾಣ ಕಾರ್ಯವನ್ನು ನಿರೀಕ್ಷೆಗೂ ಮೀರಿದ ವೇಗದಲ್ಲಿ ಸರ್ಕಾರ ಮಾಡಲು ಮುಂದಾಗಿದೆ ಎಂದೂ ತಿಳಿಸಿದರು.

ರಾಜ್ಯ ಸರಕಾರದ ಪಾಲಿಗೆ ಕೊಡಗಿನ ಪ್ರಕೃತಿ ವಿಕೋಪ ನಿರ್ವಹಣೆ ಪರೀಕ್ಷೆಯಂತಿದೆ. ಇದನ್ನು ಸಮರ್ಥವಾಗಿ ನಿರ್ವಹಿಸಲು ರಾಜ್ಯ ಸರಕಾರ ಬದ್ದವಾಗಿದೆ ಎಂದು ಹೇಳಿದ ಖಾದರ್, ಸರಕಾರ ಇರುವುದೇ ಜನರಿಗಾಗಿ. ಹೀಗಿರುವಾಗ ಸಂಕಷ್ಟದಲ್ಲಿರುವ ಜನತೆಯ ಸಮಸ್ಯೆ ಪರಿಹಾರಕ್ಕೆ ಎಷ್ಟು ಖರ್ಚಾದರೂ ನಿಭಾಯಿಸಲು ಸರಕಾರ ಸಿದ್ದವಿದೆ ಎಂದು ಹೇಳಿದರು. ಜಿಲ್ಲೆಯಾದ್ಯಂತ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರ ಪಟ್ಟಿ ತಯಾರಿಸುವ ಕಾರ್ಯಕ್ಕೆ ಚಾಲನೆ ದೊರೆತಿದ್ದು ಆಗ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಹೇಳಿದ ಸಚಿವರು, ಫಲಾನುಭವಿಗಳಿಗೆ ಯೋಗ್ಯ ಜೀವನ ನಿರ್ವಹಣೆ ಕಲ್ಪಿಸಲು ಸರಕಾರ ಮುಂದಾಗಲಿದೆ ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ 1120 ಮನೆಗಳು ಹಾನಿಗೊಳಗಾಗಿದ್ದು 186 ಮನೆಗಳು ಸಂಪೂರ್ಣ ನಾಶವಾಗಿವೆ ಎಂದೂ ಖಾದರ್ ಮಾಹಿತಿ ನೀಡಿದರು. ಕುಶಾಲನಗರದಲ್ಲಿ ಕಾವೇರಿ ನದಿ ತೀರದಲ್ಲಿನ 16 ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲಾಗುತ್ತದೆ ಎಂದವರು ತಿಳಿಸಿದರು. ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ರಾಜ್ಯ ಕಂದಾಯ ಇಲಾಖೆಯ ಕಾರ್ಯದರ್ಶಿ ಅನ್ಬುದಾಸ್ ಸುದ್ದಿಗೋಷ್ಟಿಯಲ್ಲಿದ್ದರು.

Translate »