ಕೊಡಗು ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರ್ಧಾರ
ಮೈಸೂರು

ಕೊಡಗು ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರ್ಧಾರ

August 24, 2018
  • ಹೈದರಾಬಾದ್ ಭೂ ವಿಜ್ಞಾನಿಗಳ ವರದಿ ಅನ್ವಯ ಕ್ರಮ
  • ತಕ್ಷಣದಿಂದಲೇ ಭೂ ಪರಿವರ್ತನೆ ನಿಷೇಧ
  • ಪುನರ್ ನಿರ್ಮಾಣ ಸಂಬಂಧ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿಉನ್ನತ ಸಮಿತಿ ರಚನೆ
  • 6 ತಿಂಗಳಲ್ಲಿ ಪುನರ್ ನಿರ್ಮಾಣ, ಇದಕ್ಕೆ ಕೇಂದ್ರದ ನೆರವು ನಿರೀಕ್ಷೆ

ಬೆಂಗಳೂರು: ಭಾರೀ ಮಳೆ, ಪ್ರವಾಹದಿಂದ ತನ್ನ ಸ್ವಾಭಾವಿಕ ಸ್ವರೂಪವನ್ನೇ ಕಳೆದುಕೊಂಡಿರುವ ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕಾರ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ನಿಷೇಧ ಮಾಡಿರುವುದಲ್ಲದೆ, ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಸಮಿತಿ ಅಲ್ಪಾವಧಿಯಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ವರದಿ ಬಂದ ಆರು ತಿಂಗಳಲ್ಲಿ ಪುನರ್ ನಿರ್ಮಾಣ ಕಾರ್ಯ ಮುಗಿಸಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ನಿರ್ಧರಿಸಿದ್ದಾರೆ.

ಪುನರ್ ನಿರ್ಮಾಣಕ್ಕಾಗುವ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸ ಬೇಕೆಂದು ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ. ಈ ಮಧ್ಯೆ ಕೊಡಗು ಇಂತಹ ಪರಿಸ್ಥಿತಿಗೆ ಬರಲು ಕಾರಣ ಏನು ಎಂಬುದರ ಬಗ್ಗೆ ಹೈದರಾಬಾದ್ ನಿಂದ ಬಂದಿರುವ ಭೂ ವಿಜ್ಞಾನಿಗಳು, ಅಧ್ಯಯನ ನಡೆಸಿ, ಜಿಲ್ಲಾ ವ್ಯಾಪ್ತಿಯಲ್ಲಿ ಭೂಕಂಪ ನಡೆದೇ ಇಲ್ಲ. ಯಥೇಚ್ಛ ಮಳೆ ಹಾಗೂ ಕೆಲವೇ ಭಾಗದಲ್ಲಿ ಮಳೆಯ ನೀರು ಮಣ್ಣಿನೊಂದಿಗೆ ಮಿಶ್ರಿತ ಗೊಂಡು ಝರಿಯಾಗಿ ಹರಿದು ಭೂ ಕುಸಿತ ಉಂಟಾಗಿದೆ ಎಂದು ಇಂದು ಬೆಳಿಗ್ಗೆ ಮುಖ್ಯಮಂತ್ರಿ ಅವರನ್ನು ಸಂಪರ್ಕಿಸಿ ಪ್ರಾಥಮಿಕ ವರದಿ ನೀಡಿದ್ದಾರೆ.

ವರದಿ ಆಧರಿಸಿ ಕೊಡಗಿನ ಪುನರ್ ನಿರ್ಮಾಣದ ಕ್ರಿಯಾ ಯೋಜನೆ ಜೊತೆಗೆ ಪ್ರತ್ಯೇಕ ನೀತಿ ಅನುಷ್ಠಾನಗೊಳ್ಳಲಿದ್ದು, ಮನಸೋಇಚ್ಛೆ ಗುಡ್ಡ ಕಡಿದು ಮನೆ ಹಾಗೂ ಐಷಾರಾಮಿ ಕಟ್ಟಡಗಳನ್ನು ನಿರ್ಮಿಸು ವಂತಿಲ್ಲ. ಜೊತೆಗೆ ಗದ್ದೆ ಬಯಲಿನಲ್ಲೂ ಮನೆಗಳ ನಿರ್ಮಾಣಕ್ಕೆ ನಿಷೇಧ ವಿಧಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆಂದೇ ಹೊಸ ನೀತಿ ಅನುಷ್ಠಾನಗೊಳ್ಳುವ ಮುನ್ನವೇ ಇಡೀ ಜಿಲ್ಲೆಯಲ್ಲಿ ಯಾವುದೇ ಭೂ ಪರಿವರ್ತನೆ ಮಾಡಬಾರದೆಂದು ಜಿಲ್ಲಾಡಳಿತಕ್ಕೆ ಕಟ್ಟಾದೇಶ ಮಾಡಿದೆ. ಕೊಡಗಿನ ಯಾವ ಭಾಗದಲ್ಲಿ ಮಳೆ-ನೆರೆಯಿಂದ ನಾಶ ಸಂಭವಿಸಿದೆಯೋ ಅಂತಹ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳನ್ನು ಮಾದರಿ ಗ್ರಾಮ ಹಾಗೂ ಪ್ರದೇಶಗಳನ್ನಾಗಿ ಪುನರ್ ನಿರ್ಮಿಸಲಾಗುತ್ತದೆ. ಈ ಮನೆ ಮತ್ತು ಗ್ರಾಮಗಳನ್ನು ವಿಜ್ಞಾನಿಗಳು ನೀಡುವ ವರದಿ ಆಧಾರದ ಮೇಲೆ ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ವಾಣಿಜ್ಯ ಚಟುವಟಿಕೆಗಳು ಮತ್ತು ಹೋಂ ಸ್ಟೇಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ತಕ್ಷಣದಿಂದ ಜಾರಿಗೆ ಬರುವಂತೆ ಭೂ ಪರಿವರ್ತನೆ ಕಾರ್ಯ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಮಳೆಯಿಂದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ತಾತ್ಕಾಲಿಕ ವರದಿ ಸಿದ್ಧಗೊಂಡಿದ್ದು, ಇದರಲ್ಲಿ ಬೆಳೆ ನಷ್ಟ ಹೊರತುಪಡಿಸಿ 4000 ಕೋಟಿ ರೂ.ವರೆಗೆ ಹಾನಿ ಸಂಭವಿಸಿದೆ. ಇದರಲ್ಲೇ ಪೂರ್ಣ ಹಾಗೂ ಭಾಗಶಃ ನಾಶವಾಗಿರುವ ಮನೆಗಳು, ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳು ಸೇರಿವೆ. ಈ ನಡುವೆ ಸ್ಥಳೀಯ ಕೆಲವು ಜನರು ನಮಗೆ ಮನೆಗಳನ್ನು ಪುನರ್ ನಿರ್ಮಿಸುವುದು ಬೇಡ, ನಾವೇ ನಮ್ಮ ಮನೆಗಳನ್ನು ದುರಸ್ತಿಗೊಳಿಸಿಕೊಳ್ಳುತ್ತೇವೆ, ಇದಕ್ಕಾಗಿ ಬಣ್ಣ ಬಳಿಯುವವರು, ಮರಗೆಲಸದವರು, ಕೊಳಾಯಿ ಕೆಲಸಗಾರರು, ವಿದ್ಯುತ್ ಸಂಪರ್ಕ ಕಲ್ಪಿಸುವ ಕೌಶಲ್ಯಭರಿತ ಸಿಬ್ಬಂದಿಯನ್ನು ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಬೇಡಿಕೆಗೆ ಮಣಿದಿರುವ ಸರ್ಕಾರ ರಾಜ್ಯಾದ್ಯಂತ ಇಂತಹ ಪರಿಣತರನ್ನು ಹುಡುಕಿ ತನ್ನ ವೆಚ್ಚದಲ್ಲಿ ಜಿಲ್ಲೆಗೆ ಕಳುಹಿಸಲು ಮುಂದಾಗಿದೆ.

Translate »