ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹಣ್ಣು, ಹೂವು, ತರಕಾರಿ ಮಾರಾಟ ಬಲು ಜೋರು
ಮೈಸೂರು

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹಣ್ಣು, ಹೂವು, ತರಕಾರಿ ಮಾರಾಟ ಬಲು ಜೋರು

August 24, 2018

ಮೈಸೂರು:  ಶುಕ್ರವಾರದ ವರ ಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮೈಸೂರಿನ ದೇವರಾಜ ಮಾರುಕಟ್ಟೆ, ವಾಣಿ ವಿಲಾಸ ಮಾರುಕಟ್ಟೆ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಗುರುವಾರ ಹೂವು, ಹಣ್ಣು, ತರಕಾರಿ ವ್ಯಾಪಾರ ಬಲು ಜೋರಾಗಿತ್ತು.

ಶ್ರಾವಣ ಶುಕ್ಲ ಪೂರ್ಣಿಮೆಯ ಹಿಂದಿನ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಮಹಿಳೆಯರು ಶ್ರದ್ಧಾ ಭಕ್ತಿಗಳಿಂದ ಆಚರಿಸುತ್ತಾರೆ. ಇದರ ಅಂಗವಾಗಿ ಮಹಿಳೆಯರು ಹೂವು, ಹಣ್ಣು, ತರಕಾರಿ, ಸೀರೆ ಮತ್ತಿತರ ಉಡುಪುಗಳ ಖರೀದಿಯಲ್ಲಿ ತೊಡಗುವುದು ಸಾಮಾನ್ಯ. ಅಂತೆಯೇ ಗುರುವಾರ ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಪೂಜೆಗೆ ಅಗತ್ಯ ಪದಾರ್ಥಗಳನ್ನು ಮಹಿಳೆಯರು ಮುಗಿಬಿದ್ದು ಖರೀದಿಸುತ್ತಿದ್ದರು.

ದೇವರಾಜ ಮಾರುಕಟ್ಟೆ ಮತ್ತು ಸುತ್ತಮುತ್ತ ಹಣ್ಣು, ಹೂವುಗಳ ಮಾರಾಟದ ಭರಾಟೆ ನಡೆದಿತ್ತು. ಹೂವು, ಹಣ್ಣು, ತರಕಾರಿ ಜೊತೆಗೆ ಅರಿಶಿನ, ಕುಂಕುಮ, ಗಾಜಿನ ಬಳೆ ಖರೀದಿಸಿದರು.

ಹಬ್ಬದ ಪ್ರಯುಕ್ತ ಹೂವು ಮತ್ತು ತರಕಾರಿ, ಹಣ್ಣುಗಳ ಬೆಲೆಯಲ್ಲಿ ಅಷ್ಟೇನೂ ಏರಿಕೆ ಕಂಡು ಬರದಿದ್ದರೂ ವ್ಯಾಪಾರಿಗಳು ಹಬ್ಬದ ಸಂದರ್ಭದಲ್ಲಿ ಕೊಂಚ ಬೆಲೆ ಏರಿಸುವುದು ಸಾಮಾನ್ಯ. ಇಂದು ಸೇವಂತಿಗೆ ಹೂವು ಮಾರಿಗೆ 50ರಿಂದ 60 ರೂ., ಬಟನ್ ಗುಲಾಬಿ- ಕಾಲು ಕೆಜಿಗೆ ರೂ.80, ಕಮಲದ ಹೂವು- 2ಕ್ಕೆ ರೂ.40ರಿಂದ 50, ಚೆಂಡು ಹೂವು- ಕೆಜಿಗೆ ರೂ.40, ಮಲ್ಲಿಗೆ ಮೀಟರ್‍ಗೆ ರೂ.50ರಿಂದ 70ಕ್ಕೆ ಮಾರಾಟವಾಗುತ್ತಿತ್ತು.

ಹಣ್ಣುಗಳಲ್ಲಿ ಸೇಬು ಕೆಜಿಗೆ 80ರಿಂದ 160, ಮರಸೇಬು- ರೂ.60, ಏಲಕ್ಕಿ ಬಾಳೆ- ಕೆಜಿಗೆ 100ರಿಂದ 120, ದಾಳಿಂಬೆ- ರೂ.50-60, ಅನಾನಸ್ ಸಣ್ಣದು 1ಕ್ಕೆ ರೂ.20, ಬಾಳೆಕಂದು- ಚಿಕ್ಕದು 2ಕ್ಕೆ ರೂ.50, ಸ್ವಲ್ಪ ದೊಡ್ಡದು 2ಕ್ಕೆ 60 ರೂ.ಗಳಿವೆ ಮಾರಾಟವಾಗುತ್ತಿತ್ತು. ತೋರಣಕ್ಕೆ ಬೇಕಾದ ಮಾವಿನ ಸೊಪ್ಪು ಸಣ್ಣ ಗೊಂಚಲಿಗೆ ರೂ.10ಕ್ಕೆ ಮಾರಾಟವಾಗುತ್ತಿತ್ತು.

ವಿವಿಧ ಅಳತೆಯ ಲಕ್ಷ್ಮಿ ವಿಗ್ರಹUಳ ಮಾರಾಟವೂ ಜೋರಾಗಿಯೇ ಇತ್ತು. ಇನ್ನು ಸೀರೆಗಳ ಅಂಗಡಿಗಳಂತು ಮಹಿಳೆಯರಿಂದ ತುಂಬಿ ಗಿಜಿಗುಡುತ್ತಿತ್ತು. ಗಾಂಧಿ ವೃತ್ತ, ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಮೃಗಾಲಯ ರಸ್ತೆಗಳಲ್ಲಿರುವ ಸೀರೆ ಅಂಗಡಿಗಳು ಮಹಿಳೆಯರ ಖರೀದಿ ಜೋರಾಗಿಯೇ ಕಂಡು ಬಂದಿತು. ಪ್ರತಿಯೊಬ್ಬರೂ ಕನಿಷ್ಟ 500 ರೂ., ಗರಿಷ್ಟ 5000 ರೂ.ಗಳವರೆಗೂ ಸೀರೆಗಳ ಖರೀದಿ ಮಾಡುತ್ತಿದ್ದುದು ಕಂಡು ಬಂದಿತು.

ಮಹಿಳೆಯರ ಶೃಂಗಾರ ಸಾಧನಗಳ ಮಾರಾಟದ ಅಂಗಡಿಗಳಿಗೂ ಮಹಿಳೆಯರು, ಯುವತಿಯರು ಲಗ್ಗೆ ಇಟ್ಟಿದ್ದರು. ತಮಗೆ ಬೇಕಾದ ಶೃಂಗಾರ ಸಾಧನಗಳನ್ನು ಖರೀದಿಸಿದರು.

Translate »