ಎಲ್ಲೆಡೆ ಸಂಭ್ರಮದ ಶ್ರೀ ವರಮಹಾಲಕ್ಷ್ಮಿ ವ್ರತ
ಹಾಸನ

ಎಲ್ಲೆಡೆ ಸಂಭ್ರಮದ ಶ್ರೀ ವರಮಹಾಲಕ್ಷ್ಮಿ ವ್ರತ

August 25, 2018

ಹಾಸನ: ನಗರ ಸೇರಿದಂತೆ ಜಿಲ್ಲೆಯೆಲ್ಲೆಡೆ ಶ್ರಾವಣ ಮಾಸದ ಮೊದಲ ಹಬ್ಬವಾದ ಶ್ರೀ ವರಮಹಾಲಕ್ಷ್ಮಿ ವ್ರತವನ್ನು ಶದ್ಧಾ ಭಕ್ತಿಯಿಂದ ಆಚರಿಸಲಾಯಿತು.

ನಗರದ ಪ್ರತಿ ಮನೆ-ಮನೆಗಳಲ್ಲೂ ವಿಜೃಂಭಣೆಯಿಂದ ಶ್ರೀ ವರಮಹಾಲಕ್ಷ್ಮಿ ವ್ರತ ನೆರವೇರಿತು. ವ್ರತದ ಹಿನ್ನೆಲೆ ನಗರದ ಎಲ್ಲಾ ಬಡಾವಣೆಗಳಲ್ಲಿಯೂ ಸಂಭ್ರಮ-ಸಡಗರ ಮನೆ ಮಾಡಿತ್ತು. ಹಬ್ಬದ ಅಂಗವಾಗಿ ಹಿಂದಿನ ದಿನದಂದೇ ಮನೆ ಶುಚಿಗೊಳಿಸಿ ವರಮಹಾಲಕ್ಷ್ಮಿ ಆಹ್ವಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬೆಲೆ ಏರಿಕೆ ನಡುವೆಯೂ ಅಗತ್ಯ ವಸ್ತುಗಳನ್ನು ಖರೀದಿಸಿ ವಿವಿಧ ಸಿದ್ಧತೆ ಮಾಡಿಕೊಳ್ಳ ಲಾಗಿತ್ತು. ಮುಂಜಾನೆಯಿಂದಲೇ ನಗರದ ವಿವಿಧ ಬಡಾವಣೆಯ ಮನೆಗಳಲ್ಲಿ ಮಹಿಳೆಯರು ಕಳಸ ಪ್ರತಿಷ್ಠಾಪಿಸಿ, ಸೀರೆ, ಹೂವು, ಆಭರಣಗಳಿಂದ ಸಿಂಗರಿಸಿ, ವಿವಿಧ ಸಿಹಿತಿನಿಸು-ನೈವೇದ್ಯಗಳು, ಬಗೆಬಗೆಯ ಫಲ-ತಾಂಬೂಲವನ್ನಿರಿಸಿ ವರ ಮಹಾಲಕ್ಷ್ಮಿಗೆ ಪೂಜೆ ಸಲ್ಲಿಸಲಾಯಿತು.

ಪೂಜೆ, ಕಥೆ, ಭಜನೆ: ನಗರದ ಲಕ್ಷ್ಮೀ ಪುರಂ ಬಡಾವಣೆ, ಜವೇನಹಳ್ಳಿ ಮಠದ ಸಮೀಪದ ವಾಸಿ ಶಿಕ್ಷಕರು, ಪತಂಜಲಿ ಸಮಿತಿ ಪ್ರಭಾರಿಯೂ ಆದ ಗಿರೀಶ್, ಪಲ್ಲವಿ ದಂಪತಿ ಮನೆಯಲ್ಲಿ ಭಕ್ತಿಪೂರ್ವಕವಾಗಿ ವರಮಹಾಲಕ್ಷ್ಮಿ ವ್ರತ ಆಚರಿಸಿದರು. ಬೆಳಗಿನಿಂದಲೇ ವಿವಿಧ ರೀತಿಯ ಪೂಜೆ, ಕಥೆ, ಭಜನೆಗಳನ್ನು ಏರ್ಪಡಿಸಲಾಗಿತ್ತು. ನೆರೆಹೊರೆಯವರನ್ನು ಆಹ್ವಾನಿಸಿ ಅರಿಶಿನ -ಕುಂಕುಮ, ತಾಂಬೂಲ ವಿತರಿಸಿ, ಆಶೀರ್ವಾದ ಪಡೆದರು. ಸುಮಂಗಲಿಯರು ದೇವರ ನಾಮ ಹಾಡಿ ಭಕ್ತಿ ಸಮರ್ಪಿಸಿದರು.
ಬೇಲೂರು ವರದಿ: ಪಟ್ಟಣದ ದೇವಾಂಗ ಬೀದಿಯ ಶ್ರೀ ಚೌಡೇಶ್ವರಿ ದೇಗುಲದಲ್ಲಿ ಅಮ್ಮನವರಿಗೆ ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು.

ಹೋಮ-ಹವನ: ವ್ರತದ ಅಂಗವಾಗಿ ಹವನ-ಹೋಮ, ಪೂರ್ಣಾಹುತಿ ನಡೆ ಯಿತು. ಬೆಳಿಗ್ಗಿನಿಂದ ಸಂಜೆ ತನಕ ವಿಶೇಷ ಅಲಂಕಾರದೊಂದಿಗೆ ಪೂಜೆ ಅರ್ಚನೆ ಗಳು ನಡೆದವು. ಬೆಳಿಗ್ಗೆ 7 ಗಂಟೆಗೆ ಸರಿ ಯಾಗಿ ವಿವಿಧ ಅಭಿಷೇಕಗಳಾದ ಪಂಚಾ ಮೃತ ಅಭಿಷೇಕ ಬಳಿಕ ವಿವಿಧ ಹೂವು ಗಳಿಂದ ವಿಶೇಷ ಅಲಂಕಾರ ಮಾಡ ಲಾಯಿತು. ಇದರೊಂದಿಗೆ ದೇಗುಲದ ಉಳಿದ ದೇವಾನುದೇವತೆಗಳಿಗೆ ಯಾಥಾ ಪ್ರಕಾರ ಇಲ್ಲಿನ ಅರ್ಚಕರು ಪೂಜೆ ಕೈಗೊಂಡರು. ಜಗತ್ತಿಗೆ ಮಂಗಳ ಉಂಟು ಮಾಡುವ ಹಿನ್ನೆಲೆಯಲ್ಲಿ ದೇಗುಲದ ಅವರಣದಲ್ಲಿ ಹೋಮ-ಹವನಗಳು ಜರುಗಿದವು. ಬಳಿಕ ದೇವಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ದೇಗುಲ ಪ್ರಧಾನ ಅರ್ಚಕರು, ಭಕ್ತರಾದ ತೀರ್ಥಂಕರ್, ಗಿರಿಯಪ್ಪ, ಲೋಕೇಶ್, ರಂಗನಾಥ್ ಇನ್ನು ಮುಂತಾದರಿದ್ದರು.ಪಟ್ಟಣದ ದೇವಸ್ಥಾನ ರಸ್ತೆಯಲ್ಲಿರುವ ಮಲ್ಲಿಕಾರ್ಜುನ ಗ್ರೂಪ್ಸ್ ನಿವಾಸದಲ್ಲಿ ಅದ್ಧೂರಿಯಾಗಿ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಯಿತು. ಮಹಿಳೆಯರಿಗೆ ಬಾಗಿನ ಮತ್ತು ಫಲ-ತಾಂಬೂಲ, ಪ್ರಸಾದ ವಿತರಿಸಲಾಯಿತು.

ದೇವಾಂಗ ಸಂಘ:ವರಮಹಾಲಕ್ಷ್ಮಿ ವ್ರತದ ಅಂಗವಾಗಿ ಬೇಲೂರು ನಗರದ ಶ್ರೀ ಚೌಡೇಶ್ವರಿ ಅಮ್ಮನವರಿಗೆ ದೇವಾಂಗ ಸಂಘದ ವತಿಯಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ತೀರ್ಥ-ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಜರುಗಿತು. ಈ ವೇಳೆ ಹಾಸನ ಶಾಸಕ ಪ್ರೀತಮ್ ಜೆ.ಗೌಡ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೆಚ್.ಕೆ.ಸುರೇಶ್ (ಹುಲ್ಲಳ್ಳಿ ಸುರೇಶ್) ಅವರು ಪಾಲ್ಗೊಂಡು ಅಮ್ಮನವರ ದರ್ಶನ ಪಡೆದರು. ನಂತರ ಅವರನ್ನು ದೇವಾಂಗ ಸಂಘದಿಂದ ಸನ್ಮಾನಿಸಲಾಯಿತು. ಇದೇ ವೇಳೆ ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾ ವಂತರನ್ನು ಪುರಸ್ಕರಿಸಲಾಯಿತು.

ರಾಮನಾಥಪುರ ವರದಿ: ಹೋಬಳಿ ಯಲ್ಲಿ ಕಳೆದರಡು ತಿಂಗಳಿಂದ ಸತತವಾಗಿ ಸುರಿಯುತ್ತಿದ್ದ ಮಳೆ ಮೂರು ದಿನಗಳಿಂದ ಬಿಡುವು ನೀಡಿರುವುದರಿಂದ ಸುಮಂಗಲಿ ಯರು ಸಂಭ್ರಮದಿಂದ ವರಮಹಾಲಕ್ಷ್ಮಿ ವ್ರತ ಆಚರಿಸಿದರು. ಕೆಲವು ಮನೆಗಳಲ್ಲಿ ತಳಿರು ತೋರಣಗಳಿಂದ ಸಿಂಗರಿಸಿದ ಮಂಟಪದಲ್ಲಿ ಕಲಶ ಹಾಗೂ ಶ್ರೀವರ ಮಹಾಲಕ್ಷ್ಮೀ ವಿಗ್ರಹಗಳನ್ನು ಪ್ರತಿಸ್ಥಾಪಿಸಿ ಮಹಿಳೆಯರು ಕುಟುಂಬ ಸಮೇತ ಪೂಜೆ ಸಲ್ಲಿಸಿದರು. ಕೆಲವರು ಮಂಟಪದಲ್ಲಿ ಕಳಸ ಇಟ್ಟು ಚಿನ್ನದ ಅಭರಣಗಳು ಹೂವುಗಳು, ಹಾಗೂ ನೋಟುಗಳನ್ನು ಧರಿಸಿ ಗಮನ ಸೆಳೆಯುವಂತೆ ಅಲಂಕರಿಸಿದ್ದರು. ಮಹಿಳೆಯರು ಶ್ರೀ ವರಮಹಾ ಲಕ್ಷ್ಮಿಗೆ ಆರತಿ ಬೆಳಗಿ ಅಕ್ಕಪಕ್ಕದ ಮನೆಯವರನ್ನು ಅಹ್ವಾನಿಸಿ, ಅರಿಶಿನ-ಕುಂಕುಮ, ಬಳೆ, ಫಲ-ತಾಂಬೂಲ ನೀಡಿ ಆಶೀರ್ವಾದ ಪಡೆದರು.

ದೇಗುಲಗಳಲ್ಲಿ ವಿಶೇಷ ಪೂಜೆ: ಅಲ್ಲದೆ ಹಬ್ಬದ ಪ್ರಯುಕ್ತ ಪಟ್ಟಣದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಬ್ಬವನ್ನು ಅಚರಿಸಿದರು. ಇಲ್ಲಿಯ ಶ್ರೀ ಸುಬ್ರಹ್ಮಣ್ಯಸ್ವಾಮಿ, ಅಗಸ್ತ್ಯೇಸ್ವರ ಸ್ವಾಮಿ, ರಾಮೇಶ್ವರಸ್ವಾಮಿ, ಪಟ್ಟಾಭಿ ರಾಮಸ್ವಾಮಿ, ವರದಾನ ಬಸವೇಶ್ವರ ಸ್ವಾಮಿ, ಆಂಜನೇಯಸ್ವಾಮಿ, ರಾಘವೇಂದ್ರ ಮಠ, ಶ್ರೀ ಕಾಲುವೆ ಅಮ್ಮ ಮುಂತಾದ ದೇವಾಲಯಗಳಲ್ಲಿ ಅಭಿಷೇಕ, ಅಲಂಕಾರ ನೆರವೇರಿದವು. ನೈವೇದ್ಯ, ಮಹಾ ಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

Translate »