ಕೊಡಗಿನ ನೆರೆ ಸಂತ್ರಸ್ತರಿಗೆ ಮೈಸೂರಿನ  ಕೊಡವ ಸಮಾಜದಲ್ಲಿ ನೆರವು
ಮೈಸೂರು

ಕೊಡಗಿನ ನೆರೆ ಸಂತ್ರಸ್ತರಿಗೆ ಮೈಸೂರಿನ  ಕೊಡವ ಸಮಾಜದಲ್ಲಿ ನೆರವು

August 23, 2018

ಮೈಸೂರು: -ನೆರೆ ಹಾವಳಿಯಿಂದ ಸಂತ್ರಸ್ತರಾದವರಿಗೆ ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಕೊಡವ ಸಮಾಜದಲ್ಲಿ ನೆರವು ನೀಡಲಾಗುತ್ತಿದೆ.

ಮೈಸೂರು ಕೊಡವ ಸಮಾಜದ ಅಧ್ಯಕ್ಷ ಬಿ.ಎಂ.ನಾಣಯ್ಯ, ಉಪಾಧ್ಯಕ್ಷ ಕಂಬೆಯಂಡ ಬೆಳ್ಳಿಯಪ್ಪ ಅವರ ನೇತೃತ್ವದಲ್ಲಿ ಕಾರ್ಯದರ್ಶಿ ಮಲಚೀರ ಪೊನ್ನಪ್ಪ, ಜಂಟಿ ಕಾರ್ಯದರ್ಶಿ ಜ್ಯೋತಿ ಕಾಶಿಯಪ್ಪ, ಖಜಾಂಚಿ ಮುಕ್ಕಾಟಿರ ಜೀವನ್ ಹಾಗೂ ಮ್ಯಾನೇಜ್‍ಮೆಂಟ್ ಕಮಿಟಿಯ ಎಲ್ಲಾ ಸದಸ್ಯರು ಕೊಡವ ಸಮಾಜದಲ್ಲಿ ಹಾಜರಿದ್ದು, ಕೊಡಗು ಭಾಗದಿಂದ ಬರುವ ಸಂತ್ರಸ್ತರಿಗೆ ಬೇಕಾದ ಸಾಮಗ್ರಿ, ಉಡುಪುಗಳನ್ನು ನೀಡಿ ತಾತ್ಕಾಲಿಕ ಪರಿಹಾರ ಒದಗಿಸುತ್ತಿದ್ದಾರೆ.

ಕೊಡಗಿನಲ್ಲಿ ಜಲಪ್ರಳಯ ಉಂಟಾಗಿ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಂತೆಯೇ ಅವರ ಸಂಕಷ್ಟಕ್ಕೆ ಸ್ಪಂದಿಸಲು ಕೊಡವ ಸಮಾಜವು ನಿರ್ಧರಿಸಿ ಆಗಸ್ಟ್ 18ರಿಂದ ವಿಜಯನಗರ 1ನೇ ಹಂತದ ಕೊಡವ ಸಮಾಜದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಭವನದಲ್ಲಿ ಸಾಮಗ್ರಿಗಳನ್ನು ಇರಿಸಿ ಅಲ್ಲಿಗೆ ಬಂದವರಿಗೆ ವಿತರಣೆ ಮಾಡುತ್ತಿದ್ದಾರೆ.

ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೂ ಪದಾಧಿಕಾರಿಗಳು ಹಾಗೂ ಸ್ವಯಂಸೇವಕರು ಕೊಡವ ಸಮಾಜದಲ್ಲಿದ್ದು, ಕೊಡಗು ನೆರೆ ಹಾವಳಿ ಪೀಡಿತ ಪ್ರದೇಶಗಳಿಂದ ಬರುವ ನಿರಾಶ್ರಿತರಿಗೆ ಬಟ್ಟೆ, ಹೊದಿಕೆ, ಚಪ್ಪಲಿ, ಆಹಾರ ಪದಾರ್ಥಗಳು, ನೀರಿನ ಬಾಟಲಿಗಳು, ತಿನ್ನಲು ಸಿದ್ಧವಿರುವ ಆಹಾರದ ಪ್ಯಾಕೆಟ್‍ಗಳು, ಹಾಲಿನಪುಡಿ, ಟೂತ್‍ಪೇಸ್ಟ್, ಸೋಪು ಮುಂತಾದ ನಿತ್ಯ ಬಳಕೆ ವಸ್ತುಗಳನ್ನು ಕೊಟ್ಟು ಕಳುಹಿಸಲಾಗುತ್ತಿದೆ.

ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ್ದ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಕೊಡವ ಸಮಾಜ ಖಜಾಂಚಿ ಮುಕ್ಕಾಟಿರ ಜೀವನ್ ಅವರು, ಕೊಡಗು ಕಡೆಯಿಂದ ಯಾರೇ ನಿರಾಶ್ರಿತರು ಬಂದರೂ ಅವರಿಗೆ ನೆರವಿನ ಸಾಮಗ್ರಿಗಳನ್ನು ಕೊಡುತ್ತೇವೆ. ಆದರೆ ಅವರು ಅಲ್ಲಿನ ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಅವರು ಸಂತ್ರಸ್ತರು ಎಂಬುದರ ಗುರುತಿಗಾಗಿ ಪತ್ರವನ್ನು ತರಬೇಕು ಎಂದರು.
ಒಂದು ವೇಳೆ ಮೈಸೂರಿಗೆ ಬಂದವರನ್ನು ಮೈಸೂರು ಕೊಡವ ಸಮಾಜದ ಯಾರಾದರೂ ಸದಸ್ಯರು ಅಥವಾ ಇಲ್ಲಿರುವ ಸಂಬಂಧಿಕರು ಗುರ್ತಿಸಿದರೂ ಸಾಕು ನೆರವು ನೀಡುತ್ತೇವೆ ಎಂದೂ ಅವರು ತಿಳಿಸಿದರು.

ಈಗಾಗಲೇ ಮಡಿಕೇರಿ, ಗರ್ವಾಲೆ, ಮಕ್ಕಂದೂರು, ಕಾಲೂರು, ಮುಕ್ಲೋಡು, ಹಾಕತೂರು ಹಾಗೂ ಸೋಮವಾರಪೇಟೆ ಸುತ್ತಲಿನ ಪ್ರದೇಶಗಳಿಂದ ಇಲ್ಲಿಯವರೆಗೆ 30 ಸಂತ್ರಸ್ತ ತಂಡಗಳಲ್ಲಿ ಬಂದಿದ್ದ ಸುಮಾರು 300 ಮಂದಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ಮುಕ್ಕಾಟಿರ ಜೀವನ್ ಅವರು ತಿಳಿಸಿದರು.

ಇಲ್ಲಿಗೆ ಬರುವವರ ಮೈಮೇಲೆ ಬಟ್ಟೆಯನ್ನೊರತುಪಡಿಸಿದರೆ, ಅವರ ಬಳಿ ಬೇರೆ ಏನೂ ಇರುವುದಿಲ್ಲ. ತಕ್ಷಣಕ್ಕೆ ಅವರು ಬದುಕುಳಿಯಲು ಆಹಾರ ಸಾಮಗ್ರಿ, ತೊಡಲು ಬಟ್ಟೆ ಬೇಕಾಗಿರುತ್ತದೆ.

ಪ್ರಕೃತಿಯ ಅಟ್ಟಹಾಸದಿಂದ ನಲುಗಿರುವುದರಿಂದ ಕೆಲವರು ನಮಗೆ ಏನು ಬೇಕೆಂದು ಹೇಳಲೂ ಸಹ ತೋಚುತ್ತಿರಲಿಲ್ಲ. ನಾವೇ ಅರ್ಥಮಾಡಿಕೊಂಡು ಅವರಿಗೆ ಸಾಮಗ್ರಿಗಳನ್ನು ನೀಡುತ್ತಿದ್ದೇವೆ ಎಂದು ಅವರು ನುಡಿದರು.

ಸ್ಥಳೀಯ ಸಂಘ-ಸಂಸ್ಥೆಗಳು, ಉದ್ಯಮಿಗಳು, ದಾನಿಗಳಿಂದ ತಮಗೆ ಅಪಾರ ಪ್ರಮಾಣದ ಪರಿಹಾರ ಸಾಮಗ್ರಿಗಳು ಬರುತ್ತಿದೆ. ಅವುಗಳನ್ನು ಬೇರ್ಪಡಿಸಿ ಸಮಾಜದ ಡೈನಿಂಗ್‍ಹಾಲ್‍ನಲ್ಲಿ ಶೇಖರಿಸಿಟ್ಟಿದ್ದೇವೆ. ಅಕ್ಕಿ ಬ್ಯಾಗ್, ನೀರಿನ ಬಾಟಲಿ, ರೆಡಿ ಟು ಈಟ್ ಪ್ಯಾಕೆಟ್‍ಗಳು, ಬಿಸ್ಕತ್‍ಗಳು, ಪ್ಲಾಸ್ಟಿಕ್ ಬಕೆಟ್‍ಗಳು, ಟಬ್‍ಗಳು, ಧಾನ್ಯ, ಅಡುಗೆ ಎಣ್ಣೆ, ಹೊದಿಕೆ, ಸ್ವೆಟರ್‍ಗಳು, ರೆಡಿಮೇಡ್ ಶರ್ಟ್, ಪ್ಯಾಂಟ್, ಒಳಉಡುಪುಗಳು, ಸ್ಯಾನಿಟರಿ ನ್ಯಾಪ್ಕಿನ್ ಸೇರಿದಂತೆ ಹಲವು ಪದಾರ್ಥಗಳನ್ನು ದಾನಿಗಳೇ ಕಳಿಸಿದ್ದಾರೆ ಎಂದೂ ಮುಕ್ಕಾಟಿರ ಜೀವನ್ ಅವರು ತಿಳಿಸಿದರು.

Translate »