ಕೊಡಗಿನ ಸಂತ್ರಸ್ತರ ಸ್ಥಿತಿ ಕಂಡು ಮರುಗಿದ ರೈತ ಸಂಘ, ಸ್ವರಾಜ್ ಇಂಡಿಯಾ ಪಕ್ಷದ ಮುಖಂಡರು
ಮೈಸೂರು

ಕೊಡಗಿನ ಸಂತ್ರಸ್ತರ ಸ್ಥಿತಿ ಕಂಡು ಮರುಗಿದ ರೈತ ಸಂಘ, ಸ್ವರಾಜ್ ಇಂಡಿಯಾ ಪಕ್ಷದ ಮುಖಂಡರು

August 23, 2018

ಮೈಸೂರು: ನೆರೆ ನಿಯಂತ್ರಣಕ್ಕೆ ಬಂದರೂ ಇದರಿಂದ ಸಂಕಷ್ಟಕ್ಕೆ ಸಿಲುಕಿದ ಕೊಡಗಿನ ನೆರೆ ಸಂತ್ರಸ್ತರ ನೇತ್ರದಲ್ಲಿನ ದುಃಖದ ನೀರು ಮಾತ್ರ ನಿಲ್ಲಲು ಇನ್ನದೆಷ್ಟು ದಿನ ಬೇಕೋ ಗೊತ್ತಿಲ್ಲ. ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ಯಾತನೆ ಅನುಭವಿಸುತ್ತಿರುವ ನೆರೆ ಸಂತ್ರಸ್ತರ ಈ ಮನಕಲಕುವ ದೃಶ್ಯಗಳನ್ನು ಕಂಡ ಕೊಡಗಿಗೆ ಬುಧವಾರ ಭೇಟಿ ನೀಡಿದ್ದ ರಾಜ್ಯ ರೈತ ಸಂಘ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ತಂಡ ಅತೀವ ಸಂಕಟ ವ್ಯಕ್ತಪಡಿಸಿತು.

ರಾಜ್ಯ ರೈತ ಸಂಘ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ತಂಡಕ್ಕೆ ಹಲವು ಮನಕಲುಕುವ ದೃಶ್ಯಗಳು ಗೋಚರಿಸಿದವು. ಸ್ವರಾಜ್ ಇಂಡಿಯಾದ ರಾಷ್ಟ್ರೀಯ ಮುಖಂಡರೂ ಆದ ಹಿರಿಯ ಸಾಹಿತಿ ದೇವನೂರು ಮಹದೇವ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಮಂದಿಯನ್ನು ಒಳಗೊಂಡ ತಂಡ ಇಂದು ಬೆಳಿಗ್ಗೆ ಮೈಸೂರಿನ ಕಲಾಮಂದಿರ ಆವರಣದಿಂದ ಕೊಡಗಿಗೆ ಭೇಟಿ ನೀಡಿತ್ತು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಅಲ್ಲಿನ ಚಿತ್ರಣಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಮೊದಲಿಗೆ ಮಡಿಕೇರಿ ಬಳಿಯ ಉದಯಗಿರಿ ಗ್ರಾಮಕ್ಕೆ ತಂಡ ಭೇಟಿ ನೀಡುತ್ತಿದ್ದಂತೆ ಎದುರಾದ ದೃಶ್ಯವೆಂದರೆ ನೆಲಸಮಗೊಂಡಿದ್ದ ಮನೆಗಳು, ಅವುಗಳ ಅವಶೇಷಗಳು, ಜಲಪ್ರಳಯದ ರುದ್ರನರ್ತನವನ್ನು ಕಣ್ಣು ಮುಂದೆ ತರುತ್ತಿದ್ದವು. ಇಲ್ಲಿನ ಸುಮಾರು 45 ಮನೆಗಳ ಪೈಕಿ 35 ಮನೆಗಳು ನೆಲಕಚ್ಚಿವೆ. ಜೊತೆಗೆ ಇಲ್ಲಿನ ಜಮೀನುಗಳ ಬೆಳೆಗಳು ಹಾನಿಗೊಳ್ಳಗಾಗಿ ಗ್ರಾಮಸ್ಥರು ನಿರಾಶ್ರಿತರ ಕೇಂದ್ರ ತಲುಪಿದ್ದಾರೆ. ಇನ್ನು ಇಲ್ಲಿಗೆ ಸಮೀಪದ ಮಕಂದೂರು ಗ್ರಾಮಕ್ಕೆ ಭೇಟಿ ನೀಡುತ್ತಿದ್ದಂತೆ ಸೋಮವಾರಪೇಟೆ ರಸ್ತೆ ಸುಮಾರು 4 ಕಿ.ಮೀ.ವರೆಗೆ ಸಂಪೂರ್ಣ ಹಾನಿಗೊಳಗಾಗಿದೆ.

ಇಂತಹ ಮನಕಲಕುವ ಚಿತ್ರಣಗಳನ್ನು ಕಂಡು ಕಂಬನಿ ಮಿಡಿದ ತಂಡವು ಬಳಿಕ ಮಡಿಕೇರಿ ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತೆರೆದಿರುವ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿ ಪರಿಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಿ, ಸಾಂತ್ವಾನ ಹೇಳಿತು. ಬಳಿಕ ಇಲ್ಲಿನ ಮತ್ತೊಂದು ಕೇಂದ್ರವಾದ ಕೊಡವ ಸಮಾಜಕ್ಕೆ ತೆರಳಿ ಅವರ ಕಷ್ಟಕಾರ್ಪಣ್ಯಗಳನ್ನು ಆಲಿಸಿ, ಅಗತ್ಯ ವಸ್ತುಗಳನ್ನು ನೀಡಿತು.

ವಿತರಿಸಿದ ದವಸಧಾನ್ಯಗಳು: ದವಸಧಾನ್ಯ, ಹಣ್ಣಹಂಪಲು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಸಂತ್ರಸ್ತರಿಗೆ ವಿತರಿಸಲಾಯಿತು ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು. ಈ ಒಂದು ದಿನದ ಸಾಂಕೇತಿಕ ಭೇಟಿ ವೇಳೆ ಅಗತ್ಯ ಸಾಮಗ್ರಿಗಳನ್ನು ಕೆಲ ನಿರಾಶ್ರಿತರ ಕೇಂದ್ರಗಳಿಗೆ ತಲುಪಿಸಲಾಯಿತು. 8 ಕ್ವಿಂಟಾಲ್ ಅಕ್ಕಿ, ಸಾವಿರಕ್ಕೂ ಹೆಚ್ಚು ತೆಂಗಿನಕಾಯಿ, 50 ಲೀ. ಅಡುಗೆ ಎಣ್ಣೆ, 60 ಕೆಜಿಯಷ್ಟು ವಿವಿಧ ರೀತಿಯ ಕಾಳುಗಳು, 20 ಬಾಳೆ ಗೊನೆಗಳು ಸೇರಿದಂತೆ ಔಷಧಗಳು, ಸಾಬೂನು, ಟೂತ್‍ಪೇಸ್ಟ್, ಟೂತ್‍ಬ್ರಷ್ ಒಳಗೊಂಡಂತೆ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಕೊಂಡೊಯ್ಯಲಾಗಿತ್ತು ಎಂದು ತಿಳಿಸಿದರು.

ಸ್ವರಾಜ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಚೆನ್ನಪಟ್ಟಣ ರಾಮಣ್ಣ, ಸ್ವರಾಜ್ ಇಂಡಿಯಾದ ಮೈಸೂರು ಜಿಲ್ಲಾ ಖಜಾಂಚಿ ಸರಗೂರು ನಟರಾಜು, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮುಖಂಡ ಪಿ.ಮರಂಕಯ್ಯ ಸೇರಿದಂತೆ 40ಕ್ಕೂ ಹೆಚ್ಚು ಮಂದಿ ತೆರಳಿದ್ದರು.

ಕೊಡಗು ಕಟ್ಟಲು ದೊಡ್ಡ ಮಟ್ಟದ ಕೊಡುಗೆ ನೀಡಲು ರೈತ ಸಂಘ ಹಾಗೂ ಸ್ವರಾಜ್ ಇಂಡಿಯಾದ ಸಾವಿರಾರು ಕಾರ್ಯಕರ್ತರು ಸಿದ್ಧರಿದ್ದಾರೆ. ಮುಂಬರುವ ದಿನಗಳಲ್ಲಿ ಹಾನಿಗೆ ಒಳಗಾಗಿರುವ ಕೊಡಗಿನ ಭಾಗಗಳಲ್ಲಿ ಅಗತ್ಯ ಶ್ರಮದಾನ ಮಾಡಲು ತಯಾರಿದ್ದೇವೆ. ಜೊತೆಗೆ ಇನ್ನು ದೊಡ್ಡ ಪ್ರಮಾಣದಲ್ಲಿ ಅಗತ್ಯ ಸಾಮಗ್ರಿಗಳನ್ನು ಪೂರೈಸಲಿದ್ದೇವೆ. ಈ ಸಂಬಂಧ ಯೋಜನೆಯ ರೂಪುರೇಷೆ ಸಿದ್ಧಪಡಿಸಲು ಇಂದು ಭೇಟಿ ನೀಡಲಾಗಿತ್ತು. – ಬಡಗಲಪುರ ನಾಗೇಂದ್ರ, ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ.

Translate »