ರೋಹನ್ ವಿ.ಗಂಗಡ್ಕಾರ್ ಮೈಸೂರು ಜಿಲ್ಲೆ ಟಾಪರ್
ಮೈಸೂರು

ರೋಹನ್ ವಿ.ಗಂಗಡ್ಕಾರ್ ಮೈಸೂರು ಜಿಲ್ಲೆ ಟಾಪರ್

May 1, 2019

ಮೈಸೂರು: ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಮೈಸೂರಿನ ಜೆಎಲ್‍ಬಿ ರಸ್ತೆಯ ಐಡಿಯಲ್ ಜಾವಾ ರೋಟರಿ ಶಾಲೆಯ ರೋಹನ್ ವಿ.ಗಂಗಡ್ಕಾರ್. ಈತ 625 ಒಟ್ಟು ಅಂಕಗಳಿಗೆ 622 ಅಂಕ ಗಳಿಸಿ ಸಾಧನೆ ಮೆರೆದಿದ್ದಾನೆ. ಈ ಮೂಲಕ ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಳಿಸಿದ್ದಾನೆ. ವಿಜಯ ವಿಠಲ ಶಾಲೆಯ ಹೆಚ್.ಕೆ. ತೇಜಸ್ 621, ನಿರಂತರ ದಿನೇಶ್ 620 ಅಂಕಗಳನ್ನು ಗಳಿಸಿದ್ದಾರೆ. ಭಾರತೀಯ ವಿದ್ಯಾಭವನದ ಕೆ.ಪಿ.ಪೃಥ್ವಿ 619 ಅಂಕ ಗಳಿಸಿ ಸಾಧನೆ ತೋರಿದ್ದಾರೆ. ಮೈಸೂರು ಜಿಲ್ಲೆಗೇ ಮೊದಲಿಗನಾಗಿ ಸಾಧನೆ ಮಾಡಿ ರುವ ಐಡಿಯಲ್ ಜಾವಾ ರೋಟರಿ ಶಾಲೆಯ ರೋಹನ್ ವಿ.ಗಂಗಡ್ಕಾರ್, ಮೈಸೂರಿನ  ಲಾಗೈಡ್ ಮಾಸಪತ್ರಿಕೆ ಸಂಪಾದಕರೂ ಆಗಿರುವ ವಕೀಲ ಹೆಚ್.ಎನ್. ವೆಂಕಟೇಶ್ ಮತ್ತು ಮೈಸೂರು ಜಿಪಂನಲ್ಲಿ ಹಿರಿಯ ಅಕೌಂಟೆಂಟ್ ಆಗಿರುವ ಹಿರಿಯ ಕೆಎಎಸ್ ಅಧಿಕಾರಿ ಶ್ರೀಮತಿ ಎಸ್.ಮಂಜುಳಾ ದಂಪತಿ ಪುತ್ರ.

ಓದುವುದರಲ್ಲಿ ಬಹಳ ಆಸಕ್ತಿ ಇರುವ ಈತ ಯಾವುದೇ ಟ್ಯೂಷನ್‍ಗೆ ಹೋಗದೆ, ಮನೆಯಲ್ಲಿ ಶ್ರದ್ಧೆ ಮತ್ತು ಪರಿಶ್ರಮದಿಂದ ಓದಿ ಸಾಧನೆ ಮೆರೆದಿದ್ದಾನೆ. ಸಂಸ್ಕøತದಲ್ಲಿ 125, ಇಂಗ್ಲಿಷ್ 100, ಕನ್ನಡ 100, ಗಣಿತ 99, ವಿಜ್ಞಾನ 100, ಸಮಾಜ ವಿಜ್ಞಾನ 98 ಅಂಕ ಗಳಿಸಿದ್ದಾನೆ.

ಐಎಎಸ್ ಆಗುವಾಸೆ: ಮೈಸೂರು ಜಿಲ್ಲೆಗೇ ಮೊದಲಿಗನಾಗಿ ಹೊರ ಹೊಮ್ಮಿರುವ ರೋಹನ್ ವಿ.ಗಂಗಡ್ಕಾರ್‍ಗೆ ಐಎಎಸ್ ಅಧಿಕಾರಿಯಾಗುವ ಕನಸು ಹೊತ್ತಿದ್ದಾನೆ. ನನ್ನ ತಾಯಿ ಕೆಎಎಸ್ ಅಧಿಕಾರಿ. ಅದೇ ರೀತಿ ನಾನೂ ಐಎಎಸ್ ಮಾಡಬೇಕೆಂಬ ಕನಸಿಗೆ ಅಮ್ಮನೇ ನನಗೆ ಸ್ಫೂರ್ತಿ ಎನ್ನುತ್ತಾನೆ. ಅತನೇ ಹೇಳುವಂತೆ ನಾನು ಟ್ಯೂಷನ್‍ಗೆ ಹೋಗುತ್ತಿರಲಿಲ್ಲ.

ನೋಟ್ಸ್‍ಗಿಂತ ಹೆಚ್ಚಾಗಿ ಪಠ್ಯ ಪುಸ್ತಕವನ್ನೇ ಓದುತ್ತಿದ್ದೆ. ಇದು ಹೆಚ್ಚು ಅಂಕ ಪಡೆಯಲು ನೆರವಾಯಿತು. ಹೆಚ್ಚಿನ ಸಮಯ ಆಟವಾಡುತ್ತಿದ್ದೆ. ಮನೆಯಲ್ಲಿ ಪೋಷಕರು ಯಾವುದೇ ಒತ್ತಡ ಹಾಕದೇ ನಿನಗೆಷ್ಟು ಸಾಧ್ಯವೋ ಅಷ್ಟು ಓದು ಎನ್ನುತ್ತಿದ್ದರು. ನಾಲ್ಕು ಅಂಕ ಕಡಿಮೆ ಬರುತ್ತೆ ಎಂದು ನಿರೀಕ್ಷಿಸಿದ್ದೆ. ಆದರೆ ಮೂರು ಅಂಕ ಕಡಿಮೆ ಬಂದಿದೆ. ಮುಂದೆ ಪಿಯುಸಿಯಲ್ಲಿ ಪಿಸಿಎಂಬಿ ವಿಷಯದಲ್ಲಿ ವ್ಯಾಸಂಗ ಮಾಡಬೇಕೆಂದು ನಿರ್ಧರಿಸಿದ್ದೇನೆ ಎನ್ನುತ್ತಾನೆ ರೋಹನ್.

Translate »