ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಕುಸಿದ ಮೈಸೂರು ಜಿಲ್ಲೆ
ಮೈಸೂರು

ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಕುಸಿದ ಮೈಸೂರು ಜಿಲ್ಲೆ

May 1, 2019

ಮೈಸೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕಳೆದ ವರ್ಷ 11ನೇ ಸ್ಥಾನದಲ್ಲಿದ್ದ ಮೈಸೂರು ಜಿಲ್ಲೆ ಈ ಬಾರಿ 17ನೇ ಸ್ಥಾನಕ್ಕೆ ಕುಸಿದಿದೆ. ಈ ಸಲ 80.32ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಕಳೆದ ವರ್ಷ ಶೇ. 82.90ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಅನುದಾನಿತ 126, ಅನುದಾನರಹಿತ 264 ಹಾಗೂ 257 ಸರ್ಕಾರಿ ಶಾಲೆಗಳು ಸೇರಿ ಒಟ್ಟು 647 ಶಾಲೆಗಳಿಂದ 18,180 ಬಾಲಕಿಯರು ಸೇರಿದಂತೆ ಒಟ್ಟು 36,463 ವಿದ್ಯಾರ್ಥಿಗಳು ಹಾಜರಾಗಿದ್ದರು. ಜೊತೆಗೆ 636 ಖಾಸಗಿ ಮತ್ತು 2,074 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಮೈಸೂರು ನಗರದ 46 ಕೇಂದ್ರಗಳು ಸೇರಿದಂತೆ ಜಿಲ್ಲೆಯ ಒಟ್ಟು 138 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 71 ಸರ್ಕಾರಿ ಪ್ರೌಢಶಾಲೆ, 31 ಅನುದಾನಿತ, 36 ಅನುದಾನರಹಿತ ಪ್ರೌಢಶಾಲೆಗಳು ಪರೀಕ್ಷಾ ಕೇಂದ್ರಗಳಾಗಿದ್ದವು. ಪರೀಕ್ಷೆಗಳ ಶಿಸ್ತು ಮತ್ತು ಪಾವಿತ್ರ್ಯತೆ ಕಾಪಾಡಿ, ಪಾರದರ್ಶಕ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಪರೀಕ್ಷಾ ಅಕ್ರಮ, ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ತಡೆಯಲು ನಿಷೇಧಾಜ್ಞೆಯ ಜೊತೆಗೆ ಎಲ್ಲಾ 138 ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಿದ್ದಲ್ಲದೆ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವಿಚಕ್ಷಣಾ ಜಾಗೃತ ದಳ, ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಸ್ಥಾನಿಕ ಜಾಗೃತ ದಳ ರಚಿಸಿದ್ದರಿಂದ ಜಿಲ್ಲೆಯಲ್ಲಿ ಯಾವುದೇ ನಕಲು ಅಥವಾ ಇತರೆ ಚಟುವಟಿಕೆಗಳು ಕಂಡು ಬಂದಿರಲಿಲ್ಲ.

ಹೀಗಿದ್ದೂ ಜಿಲ್ಲೆಯ ಫಲಿತಾಂಶ 17ನೇ ಸ್ಥಾನಕ್ಕೆ ಕುಸಿದ ಬಗ್ಗೆ ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಚರ್ಚೆಗಳು ನಡೆದಿವೆ. ಫಲಿತಾಂಶ ಏರುಪೇರಾಗಲು ಕಾರಣವೇನು ಎಂಬ ಬಗ್ಗೆ ಪರಿಶೀಲನೆ ನಡೆಸಲಿರುವುದಾಗಿ ಜಿಲ್ಲೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Translate »