ಬಾಗಿಲು ತೆರೆದ ಮೈಸೂರಿನ ಫೋರಮ್ ಮಾಲ್ ಲಾಕ್‍ಡೌನ್ ವೇಳೆ 70 ದಿನ ಬಂದ್ ಆಗಿದ್ದ ಷಾಪಿಂಗ್ ಮಾಲ್
ಮೈಸೂರು

ಬಾಗಿಲು ತೆರೆದ ಮೈಸೂರಿನ ಫೋರಮ್ ಮಾಲ್ ಲಾಕ್‍ಡೌನ್ ವೇಳೆ 70 ದಿನ ಬಂದ್ ಆಗಿದ್ದ ಷಾಪಿಂಗ್ ಮಾಲ್

June 12, 2020

ಮೈಸೂರು, ಜೂ.11(ಆರ್‍ಕೆಬಿ)- ಮೈಸೂರಿನ ಅತಿ ದೊಡ್ಡ ಷಾಪಿಂಗ್ ಮಾಲ್ ಎನಿಸಿಕೊಂಡಿರುವ `ಫೋರಮ್ ಮಾಲ್’ಅನ್ನು ಜೂ.10ರಿಂದ ತೆರೆಯಲಾಗಿದೆ ಎಂದು ಮಾಲ್‍ನ ಮಾರುಕಟ್ಟೆ ವ್ಯವಸ್ಥಾಪಕ ಬಿ.ಎಸ್.ಸುಮಂತ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಲಾಕ್‍ಡೌನ್ ಆರಂಭದ 70 ದಿನಗಳ ನಂತರ ಮಾಲ್ ಬಾಗಿಲು ತೆರೆಯಲಾಗಿದೆ. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಟನಲ್, ಮಾಸ್ಕ್, ಅಂತರ ಕಾಯ್ದುಕೊಳ್ಳುವ ಕಡ್ಡಾಯ ನಿಯಮಗಳಡಿ ಮಾಲ್ ತೆರೆಯಲ್ಪಟ್ಟಿದೆ. ಮಾಲ್ ಸಿಬ್ಬಂದಿ ಮತ್ತು ಗ್ರಾಹಕರಿಗೆಂದು ಪ್ರತ್ಯೇಕ ಪ್ರವೇಶ ದ್ವಾರವಿದ್ದು, ಪ್ರವೇಶದ ವೇಳೆ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಲಾಗುವುದು. ಅನಾರೋಗ್ಯ ಚಿಹ್ನೆ ಕಂಡುಬಂದವರಿಗೆ ಪ್ರವೇಶವಿಲ್ಲ. ವಿತರಣಾ ಸಿಬ್ಬಂದಿಗೆ ಮಾಸ್ಕ್, ಕೈಗವಸು ನೀಡಲಾಗಿದೆ ಎಂದರು.

ಮಾಲ್ ಒಳಗೆ ಜನಸಂದಣಿ ನಿಯಂತ್ರಿಸಲು ಹಾಗೂ ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಸಲುವಾಗಿ ಒಮ್ಮೆಗೆ 1500 ಗ್ರಾಹಕರಿಗೆ ಮಾತ್ರ ಪ್ರವೇಶವಿದೆ. 83ರಲ್ಲಿ 66 ಅಂಗಡಿಗಳು ಬಾಗಿಲು ತೆರೆದಿವೆ. ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಷಾಪಿಂಗ್‍ಗೆ ಅವಕಾಶ ವಿದೆ. ಫುಡ್‍ಕೋರ್ಟ್‍ನಲ್ಲಿ ಪ್ರತಿ ಟೇಬಲ್‍ಗೆ ಇಬ್ಬರಿಗೆ ಮಾತ್ರ ಅವಕಾಶವಿದ್ದು, ಡಿಜಿಟಲ್ ಮೂಲಕ ಹಣ ಪಾವತಿಸಲು ಮಾತ್ರ ಅವಕಾಶ ಕೊಡಲಾಗಿದೆ. ವಾಹನ ಪಾರ್ಕಿಂಗ್ ವ್ಯವಸ್ಥೆಯಲ್ಲೂ ಅಂತರ ಕಾಯ್ದುಕೊಳ್ಳಲಾಗಿದೆ ಎಂದರು. ಮಾಲ್ ವ್ಯವಸ್ಥಾಪಕ ಆರ್. ಧನಶೇಖರನ್, ನಿರ್ವಾಹಕ ವ್ಯವಸ್ಥಾಪಕ ಮೋಹನ್ ಸುದ್ದಿಗೋಷ್ಠಿಯಲ್ಲಿದ್ದರು.

Translate »