ಮಾಲೂರು ಶಾಲಾ ವಿದ್ಯಾರ್ಥಿನಿ ಹಂತಕನಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಮೈಸೂರು ಮಹಾರಾಣಿ ವಿದ್ಯಾರ್ಥಿನಿಯರ ಪ್ರತಿಭಟನೆ
ಮೈಸೂರು

ಮಾಲೂರು ಶಾಲಾ ವಿದ್ಯಾರ್ಥಿನಿ ಹಂತಕನಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಮೈಸೂರು ಮಹಾರಾಣಿ ವಿದ್ಯಾರ್ಥಿನಿಯರ ಪ್ರತಿಭಟನೆ

August 5, 2018

ಮೈಸೂರು: ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಶಾಲಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆತ್ನಿಸಿ, ಕೊನೆಗೆ ಹತ್ಯೆಗೈಯ್ದ ದುಷ್ಕರ್ಮಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಶನಿವಾರ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರು ಪೋಸ್ಟ್ ಕಾರ್ಡ್ ಚಳವಳಿ ನಡೆಸಿದರು.

ಎಐಡಿಎಸ್‍ಓ ಹಾಗೂ ಎಐಎಂಎಸ್‍ಎಸ್ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಪೋಸ್ಟ್ ಕಾರ್ಡ್ ಚಳುವಳಿಯಲ್ಲಿ ಮಹಾರಾಣಿ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು ಪಾಲ್ಗೊಂಡು, ವಿದ್ಯಾರ್ಥಿನಿ ರಕ್ಷಿತಾಳ ಅತ್ಯಾಚಾರಕ್ಕೆತ್ನಿಸಿ, ಕೊನೆಗೆ ಆಕೆಯ ಹತ್ಯೆ ಮಾಡಿದ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪೋಸ್ಟ್ ಕಾರ್ಡ್ ಕಳುಹಿಸಿದರು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯಬಾರದು. ಪೊಲೀಸರು ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸಲು ಚಾರ್ಜ್‍ಶೀಟ್‍ನಲ್ಲಿ ಕಠಿಣ ಶಿಕ್ಷೆ ಸೆಕ್ಷನ್ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಸ್ಟೀಸ್ ವರ್ಮಾ ಆಯೋಗದ ಶಿಫಾರಸ್ಸು ಜಾರಿಗೊಳಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಿನಿಮಾ ಹಾಗೂ ಸಾಹಿತ್ಯವನ್ನು ನಿಷೇಧಿಸಬೇಕು. ಶಾಲಾ-ಕಾಲೇಜು, ವಸತಿ ನಿಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ, ಜುಡೋ ಸೇರಿದಂತೆ ಆತ್ಮರಕ್ಷಣಾ ಕಲೆಗಳನ್ನು ಕಲಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಐಎಂಎಸ್‍ಎಸ್ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪಿ.ಎಸ್.ಸಂಧ್ಯಾ, ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ, ಉಪಾಧ್ಯಕ್ಷ ಆಕಾಶ್‍ಕುಮಾರ್, ಆಸಿಯಾ ಬೇಗಂ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »