ಯುವ ಜನರಲ್ಲಿ ದೇಶ ಪ್ರೇಮದ ಕೊರತೆ; ವಿಷಾದ
ಮೈಸೂರು

ಯುವ ಜನರಲ್ಲಿ ದೇಶ ಪ್ರೇಮದ ಕೊರತೆ; ವಿಷಾದ

November 3, 2018

ಮೈಸೂರು: ಮೈಸೂರಿನಲ್ಲಿ ಶುಕ್ರವಾರ ನಡೆದ ದೇಶಪ್ರೇಮ ಹಾಗೂ ರಾಷ್ಟ್ರ ನಿರ್ಮಾಣ ಕುರಿತ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ, ಇಂದು ಯುವ ಜನರಲ್ಲಿ ದೇಶಪ್ರೇಮದ ಕೊರತೆ ಉಂಟಾ ಗಿರುವ ಬಗ್ಗೆ ಬೇಸರ ವ್ಯಕ್ತವಾಯಿತು.

ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ, ಮೈಸೂರು ಜಿಲ್ಲಾ ನೆಹರು ಯುವ ಕೇಂದ್ರ, ಕಾಲೇಜು ಶಿಕ್ಷಣ ಇಲಾಖೆ, ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ಜಂಟಿಯಾಗಿ 2019ರ ಗಣ ರಾಜ್ಯೋತ್ಸವದ ಅಂಗವಾಗಿ ಆಯೋಜಿ ಸಿದ್ದ ಸ್ಪರ್ಧೆಯಲ್ಲಿ ಮೈಸೂರು ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ, ಯುವಜನರು ದೇಶಪ್ರೇಮ ಬೆಳೆಸಿಕೊಳ್ಳುವ ಹಾಗೂ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸುವ ಅಗತ್ಯತೆ ಬಗ್ಗೆ ಒತ್ತಿ ಹೇಳಿದರು.
ವಿವಿಧ ಕಾಲೇಜಿನ 14 ಮಂದಿ ವಿದ್ಯಾರ್ಥಿ ಗಳು ಭಾಗವಹಿಸಿದ್ದರು. ಈ ಪೈಕಿ ಇಬ್ಬರು ಹಿಂದಿಯಲ್ಲೂ, ಉಳಿದವರು ಇಂಗ್ಲಿಷ್ ಭಾಷೆ ಯಲ್ಲಿ ಭಾಷಣ ಮಾಡಿದರು. ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಎಂ.ಆರ್.ಇಂದ್ರಾಣಿ, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕಿ ಗೀತಾ ಗಂಗಾಧರ್ ಹಾಗೂ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಹಿಂದಿ ಸಹಾಯಕ ಪ್ರಾಧ್ಯಾಪಕಿ ಪ್ರೊ.ಎನ್. ಸರೋಜ ತೀರ್ಪುಗಾರರಾಗಿದ್ದರು.

ಇದಕ್ಕೂ ಮುನ್ನ ಮೈಸೂರು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ. ವೈ.ಎಚ್.ಶ್ರೀಶಕುಮಾರ್ ಸ್ಪರ್ಧೆಗೆ ಚಾಲನೆ ನೀಡಿದರು. ಇಲಾಖೆಯ ವಿಶೇಷ ಅಧಿಕಾರಿ ಡಾ.ಎಚ್.ಎನ್.ಪರಿಮಳಾ, ಮಹಾರಾಣಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಸಿ.ಎಚ್. ಪ್ರಕಾಶ್, ಸಿದ್ದಾರ್ಥನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ.ಪ್ರಸನ್ನಕುಮಾರ್, ನೆಹರು ಯುವ ಕೇಂದ್ರದ ಯುವ ಸಮನ್ವಯಾ ಧಿಕಾರಿ ಎಂ.ಎನ್.ನಟರಾಜ್ ಇತರರಿದ್ದರು.

Translate »