ಮೈದುಂಬಿ ಹರಿಯುತ್ತಿರುವ ಕಪಿಲಾ ನದಿ: ರಾಷ್ಟ್ರೀಯ ಹೆದ್ದಾರಿ ಬಂದ್: ನದಿ ದಂಡೆ ಬಳಿ ಜನಜಂಗುಳಿ
ಮೈಸೂರು

ಮೈದುಂಬಿ ಹರಿಯುತ್ತಿರುವ ಕಪಿಲಾ ನದಿ: ರಾಷ್ಟ್ರೀಯ ಹೆದ್ದಾರಿ ಬಂದ್: ನದಿ ದಂಡೆ ಬಳಿ ಜನಜಂಗುಳಿ

August 13, 2018

ತಾಂಡವಪುರ: ನಂಜನಗೂಡಿನ ಕಪಿಲಾ ನದಿಯು ಮೈದುಂಬಿ ಹರಿಯುತ್ತಿದ್ದು, ನದಿಯ ರಮಣೀಯ ದೃಶ್ಯವನ್ನು ಕಣ್ತುಂಬಿ ಕೊಳ್ಳಲು ಜನರು ತಂಡೋಪ ತಂಡವಾಗಿ ಬಂದು ವೀಕ್ಷಿಸುತ್ತಿದ್ದಾರೆ.

ಕೇರಳದ ವೈನಾಡಿನಲ್ಲಿ ಮುಂಗಾರು ಹಂಗಾಮಿನಡಿ ಉತ್ತಮ ಮಳೆಯಾಗುತ್ತಿದ್ದು, ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದ್ದು, ಇದರಿಂದ ಕಬಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ರಾಷ್ಟ್ರೀಯ ಹೆದ್ದಾರಿ 766ರ ನಂಜನಗೂಡು -ಮೈಸೂರು ನಡುವಿನ ಮಲ್ಲನ ಮೂಲೆ ಮಠದ ಹತ್ತಿರ, ಹಾಗೂ ಚಿಕ್ಕಯ್ಯನ ಛತ್ರ ಗ್ರಾಮದ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಾಲಯದ ಸಮೀಪ ನದಿ ಉಕ್ಕಿ ಹರಿ ಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತವಾಗಿದೆ. ಇನ್ನೂ ಕಪಿಲಾ ನದಿಯ ಪ್ರವಾಹವನ್ನು ನೋಡಲು ಜನ ಸಾಗರವೇ ಹರಿದು ಬಂದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯುತ್ತಿರುವ ನೀರಿಗಿಳಿದು ಸಂಭ್ರಮಿಸುತ್ತಿರುವುದು ಸಾಮಾನ್ಯವಾಗಿದೆ.

ಕಪಿಲಾ ನದಿ ಪಾತ್ರದಲ್ಲಿರುವ ಹಲವಾರು ಗ್ರಾಮಗಳು ಪ್ರವಾಹದಲ್ಲಿ ಸಿಕ್ಕಿ ನಲುಗಿ ಹೋಗಿದ್ದು, ಈ ಪಾತ್ರದ ಹಲವಾರು ರೈತರ ಗದ್ದೆಗಳಲ್ಲಿ ನೀರು ತುಂಬಿರುವುದರಿಂದ ಅಪಾರ ನಷ್ಟ ಸಂಭವಿಸಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕಳೆದ 2 ವರ್ಷಗಳಿಂದ ಬರದಿಂದ ತತ್ತರಿಸಿದ ಜನತೆಗೆ ಈ ವರ್ಷ ಅತಿವೃಷ್ಟಿಯಾಗಿ ಪ್ರವಾಹ ದುರಾದೃಷ್ಟವಾಗಿ ಕಾಡುತ್ತಿದೆ. ಪ್ರವಾಹದಿಂದ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ರೈತ ಮುಖಂಡರಾದ ಬೊಕ್ಕಹಳ್ಳಿ ನಂಜುಂಡ ಸ್ವಾಮಿ, ಗ್ರಾ.ಪಂ ಅಧ್ಯಕ್ಷ ಬಿ.ಎಂ.ಮಹೇಶ್ ಕುಮಾರ್ ಸೇರಿದಂತೆ ಹಲವಾರು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತುಂಬಸೋಗೆ ದೇವಸ್ಥಾನ ಜಲಾವೃತ

ತುಂಬಸೋಗೆ: ಕಬಿನಿ ಜಲಾಶಯದಿಂದ 85 ಸಾವಿರ ಕ್ಯೂಸೆಕ್ಸ್ ನೀರು ಹೊರ ಬಿಟ್ಟಿರುವ ಹಿನ್ನೆಲೆಯಲ್ಲಿ ಹುಣ ಸೂರು -ಬೇಗೂರು ರಸ್ತೆಯನ್ನು ಸಂಪರ್ಕಿಸುವ ತುಂಬಸೋಗೆ ಸೇತುವೆ ತಡೆಗೋಡೆವರೆಗೂ ನೀರು ಹರಿಯುತ್ತಿದೆ. ಗ್ರಾಮದ ಮಹದೇಶ್ವರಸ್ವಾಮಿ ದೇವಸ್ಥಾನ ಜಲಾವೃತಗೊಂಡಿದೆ.

ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರೂ ಸೇತುವೆ ಮೇಲೆ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ. ಸೇತುವೆ ಸಮೀಪ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನದಿ ಸುತ್ತಲಿನ ಹೊಲ, ಗದ್ದೆಗಳು ಮುಳುಗಡೆ ಯಾಗಿದ್ದು, ನಿಲುವಾಗಿಲು ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ 4 ಅಡಿಯಷ್ಟು ನೀರು ನಿಂತು ರಸ್ತೆ ಸಂಪರ್ಕ ಕಡಿತಗೊಂಡಿದೆ. ಸೇತುವೆ ಬಳಿ ವಿದ್ಯುತ್ ತಂತಿ ಮೇಲೆ ನೀರು ಹರಿಯುತ್ತಿರುವುದುರಿಂದ ತುಂಬಸೋಗೆ, ನಿಲುವಾಗಿಲು, ತೊರವಳ್ಳಿ, ಇಟ್ನಾ, ಹೆಬ್ಬಲಗುಪ್ಪೆ, ಹುಲಿಕುರ, ಚೌಡಹಳ್ಳಿ, ಜಕ್ಕಹಳ್ಳಿ ದೇವಲಾಪುರ ಮೊದಲಾದ ಗ್ರಾಮಗಳಲ್ಲಿ ಕಳೆದ 4 ದಿನಗಳಿಂದ ವಿದ್ಯುತ್ ಇಲ್ಲದೇ, ಕತ್ತಲು ಆವರಿಸಿದೆ.

Translate »