ಆಶ್ರಯ ಮನೆ ಮಂಜೂರಾತಿಗೆ ಯಾರೂ ಕೂಡ ಹಣ ನೀಡಬೇಡಿ: ಶಾಸಕ ಡಾ. ಎಸ್.ಯತೀಂದ್ರ ಸೂಚನೆ
ಮೈಸೂರು

ಆಶ್ರಯ ಮನೆ ಮಂಜೂರಾತಿಗೆ ಯಾರೂ ಕೂಡ ಹಣ ನೀಡಬೇಡಿ: ಶಾಸಕ ಡಾ. ಎಸ್.ಯತೀಂದ್ರ ಸೂಚನೆ

July 31, 2018

ತಾಂಡವಪುರ: ಸರ್ಕಾರ ದಿಂದ ನೀಡುವ ಆಶ್ರಯ ಮನೆ ಮಂಜೂ ರಾತಿಗೆ ಯಾರೂ ಕೂಡ ಹಣ ನೀಡಬೇಡಿ ಎಂದು ವರುಣಾ ಕ್ಷೇತ್ರದ ಶಾಸಕ ಡಾ.ಎಸ್.ಯತೀಂದ್ರ ಸಿದ್ದರಾಮಯ್ಯ ಸೂಚಿಸಿದರು.

ಅವರು ಇಂದು ನಂಜನಗೂಡು ತಾಲೂಕು ವರುಣಾ ಕ್ಷೇತ್ರಕ್ಕೆ ಸೇರುವ ಕೋಣನೂರು ಪಾಳ್ಯ ಗ್ರಾಮದಲ್ಲಿ ಜನ ಸಂಪರ್ಕ ಹಾಗೂ ಕುಂದು ಕೊರತೆ ಸಭೆಯಲ್ಲಿ ಮಾತನಾಡುತ್ತಾ, ವರುಣಾ ಕ್ಷೇತ್ರಕ್ಕೆ ಸೇರುವ ಹಲವಾರು ಗ್ರಾ.ಪಂಗಳಲ್ಲಿ ಆಶ್ರಯ ಮನೆ ಮಂಜೂರಾತಿಗಾಗಿ ಜನರು 20ರಿಂದ 25 ಸಾವಿರ ರೂ.ಗಳನ್ನು ನೀಡಬೇಕೆಂದು ತಮ್ಮ ಬಳಿ ಅಳಲನ್ನು ತೋಡಿಕೊಂಡಿದ್ದಾರೆ. ಆದರೆ ಯಾರೂ ಕೂಡ ಆಶ್ರಯ ಮನೆ ಫಲಾನುಭವಿಗಳು ಹಣವನ್ನು ನೀಡಬೇಡಿ, ಹಣ ಕೇಳಿದರೆ ನನ್ನ ಗಮನಕ್ಕೆ ತನ್ನಿ ಎಂದು ತಿಳಿಸಿದರು.

ಇದೇ ರೀತಿ ಕೋಣನೂರು ಗ್ರಾಪಂ ವ್ಯಾಪ್ತಿಗೆ ಬರುವ ಕೋಣನೂರು ಪಾಳ್ಯದ ಮಹಿಳೆಯೋರ್ವರು ನನ್ನ ಮನೆ ಶಿಥಿಲವಾಗಿದೆ, ಇರಲು ಮನೆಯಿಲ್ಲ. ನನಗೊಂದು ಮನೆ ಕೊಡಿಸಿ ಎಂದು ಶಾಸಕರಲ್ಲಿ ಮನವಿ ಮಾಡಿದಾಗ, ಶಾಸಕರು ಸ್ಥಳದಲ್ಲಿದ್ದ ಗ್ರಾ.ಪಂ ಅಭಿವೃದ್ದಿ ಅಧಿಕಾರಿಗೆ ಇವರಿಗೆ ಆಶ್ರಯ ಯೋಜನೆಯಡಿಯಲ್ಲಿ ಒಂದು ಮನೆಯನ್ನು ಮಂಜೂರು ಮಾಡಿಕೊಡಿ ಎಂದು ಹೇಳಿದರು. ಈ ವೇಳೆ ಆ ಮಹಿಳೆ ಹಣಕೊಟ್ಟರೆ ಮಾತ್ರ ಮನೆಯನ್ನು ಕೊಡುತ್ತಾರೆ, ಇಲ್ಲದಿದ್ದರೆ ಇಲ್ಲ ಎಂದು ತಮ್ಮ ನೋವನ್ನು ತೋಡಿಕೊಂಡರು.

ಶಾಸಕರು ಸಂಬಂಧಪಟ್ಟ ಪಿಡಿಒ ಜೊತೆ ಮಾತನಾಡಿ ಇವರಿಗೇ ಕೂಡಲೇ ಮನೆ ಮಂಜೂರು ಮಾಡಿಕೊಡಬೇಕು. ಮತ್ತೊಮ್ಮೆ ನಾವು ಪ್ರವಾಸ ಬರುವಾಗ ಇಂತಹ ದೂರುಗಳು ಕೇಳಿ ಬಂದರೆ ನಿಮ್ಮ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ಧಾರ್ ಎಂ.ದಯಾನಂದ, ಜಿ.ಪಂ ಮಾಜಿ ಅಧ್ಯಕ್ಷರಾದ ಎಸ್.ಸಿ.ಬಸವರಾಜು, ಮುಖಂಡರಾದ ಟಿ.ಕೆ. ಮಾಲೇಗೌಡ, ದಾಸನೂರು ನಾಗೇಶ್, ಕಿರುಗುಂದ ಶಿವನಾಗ, ಮಲ್ಲಿಪುರ ಪ್ರಕಾಶ, ಸಿದ್ದ ರಾಮೇಗೌಡ, ಬಸವೇಗೌಡ, ಸೇರಿದಂತೆ ಅನೇಕ ಮುಖಂಡರುಗಳು, ಗ್ರಾಮಸ್ಥರು ಹಾಜರಿದ್ದರು.

Translate »