ಸುರಿಯುವ ಮಳೆಯಿಂದ ತುಂಬಿ ಹರಿಯುವ ನದಿ-ತೊರೆಗಳು :ಶವ ಸಾಗಿಸಲೂ ಗ್ರಾಮಸ್ಥರ ಹೆಣಗಾಟ
ಕೊಡಗು

ಸುರಿಯುವ ಮಳೆಯಿಂದ ತುಂಬಿ ಹರಿಯುವ ನದಿ-ತೊರೆಗಳು :ಶವ ಸಾಗಿಸಲೂ ಗ್ರಾಮಸ್ಥರ ಹೆಣಗಾಟ

August 13, 2018

ಮಡಿಕೇರಿ: ಎಡಬಿಡದೇ ಸುರಿಯುತ್ತಿರುವ ಮಳೆ… ತುಂಬಿ ಹರಿಯುತ್ತಿರುವ ಹೊಳೆ… ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿ…ನೀರಿಗೆ ಮುಳುಗಿದ ಸೇತುವೆ… ಈ ಸೇತುವೆ ಮೇಲೆ ಮೃತದೇಹದ ಅಂತಿಮ ಯಾತ್ರೆ! ಇಂತಹ ಭಯಾನಕ ಮತ್ತು ಹೃದಯ ವಿದ್ರಾವಕ ಚಿತ್ರಣ ಕಂಡುಬಂದಿದ್ದು, ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಕೇವಲ 6 ಕಿ.ಮೀ. ದೂರದಲ್ಲಿರುವ 1ನೇ ಮೊಣ್ಣಂಗೇರಿ ಗ್ರಾಮದಲ್ಲಿ..!!

1ನೇ ಮೊಣ್ಣಂಗೇರಿ ಗ್ರಾಮ ಕುಗ್ರಾಮ ವಲ್ಲ.. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಪಂಚತಾರಾ ರೆಸಾರ್ಟ್‍ಗಳಿರುವ ಗ್ರಾಮ..! ಆದರೆ ಮಳೆಗಾಲದಲ್ಲಿ 1ನೇ ಮೊಣ್ಣಂಗೇರಿ ಗ್ರಾಮಸ್ಥರ ನೆರವಿಗೆ ಆಡಳಿತ ವ್ಯವಸ್ಥೆ ಧಾವಿಸದೆ ಕೈಕಟ್ಟಿ ಕುಳಿತಿದೆ.

1ನೇ ಮೊಣ್ಣಂಗೇರಿ ನಿವಾಸಿ ಅಚ್ಚಪಟ್ಟೀರ ಮಾಚಮ್ಮ (92) ಅನಾರೋಗ್ಯದಿಂದ ಭಾನುವಾರ ಮಡಿಕೇರಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ಮೃತದೇಹವನ್ನು ಗ್ರಾಮಕ್ಕೆ ತಂದ ಗ್ರಾಮಸ್ಥರು, ಮೃತರ ಸ್ವಗೃಹಕ್ಕೆ ಕೊಂಡೊಯ್ಯಲು ಹರಸಾಹಸ ಪಡಬೇಕಾಯಿತು. ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಮೃತದೇಹ ಹೊತ್ತು ಸಾವಿಗೆ ಸವಾಲೊಡ್ಡುತ್ತಾ ಶವಸಾಗಿಸಲು ಗ್ರಾಮಸ್ಥರು ಹೆಣಗಾಡ ಬೇಕಾಯಿತು.

ಈ ಬಾರಿಯ ಮಳೆಗಾಲಕ್ಕೆ ಕೊಡಗು ಜಿಲ್ಲೆ ತತ್ತರಿಸಿದ್ದರೇ, 1ನೇ ಮೊಣ್ಣಂಗೇರಿ ಗ್ರಾಮಸ್ಥರ ಬದುಕೇ ದುಸ್ತರಗೊಂಡಿದೆ. ಮಡಿಕೇರಿ ತಾಲೂಕು ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 1ನೇ ಮೊಣ್ಣಂಗೇರಿ ಗ್ರಾಮದ ದುಸ್ಥಿತಿಗೆ ದಶಕದ ಇತಿಹಾಸವೂ ಇದೆ.! ಮುಳುಗು ಸೇತುವೆಯೇ ಈ ಗ್ರಾಮದ ಸಂಪರ್ಕ ರಸ್ತೆಯಾಗಿದ್ದು, 80ಕ್ಕೂ ಹೆಚ್ಚು ಕುಟುಂಬಗಳ 400ಕ್ಕೂ ಹೆಚ್ಚು ಮಂದಿ ಈ ಸೇತುವೆಯನ್ನೇ ಅವಲಂಭಿಸಿದ್ದಾರೆ.

ಎಂಟು ವರ್ಷಗಳ ಹಿಂದೆ 1ನೇ ಮೊಣ್ಣಂಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಈ ಮುಳುಗು ಸೇತುವೆಯನ್ನು ನಿರ್ಮಿಸಲಾಗಿದೆ. ಆದರೆ ಗ್ರಾಮಸ್ಥರ ಬೇಡಿಕೆಯಂತೆ ಸೇತುವೆಯ ಎತ್ತರವನ್ನು ಕನಿಷ್ಟ ಮೂರು ಅಡಿಗಳಷ್ಟು ಏರಿಸಿದ್ದರೇ, ಮುಳುಗಿದ ಸೇತುವೆಯ ಮೇಲೆ ರಭಸದಿಂದ ಹರಿಯುವ ನದಿಯನ್ನು ದಾಟಿಕೊಂಡು ಮೃತದೇಹವನ್ನು ಸಾಗಿಸುವ ಘೋರ ಪರಿಸ್ಥಿತಿ ಬರುತ್ತಿರಲಿಲ್ಲ.

ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಬೆಟ್ಟತಪ್ಪಲಿನಿಂದ ರಭಸವಾಗಿ ಹರಿಯುವ ನದಿಯಲ್ಲಿ ತಮ್ಮ ಜೀವವನ್ನೇ ಪಣ ಕ್ಕಿಟ್ಟು ಮಳೆಗಾಲದ ಸಂದರ್ಭ ಈ ಮುಳುಗಿದ ಸೇತುವೆಯಲ್ಲೇ ಗ್ರಾಮಸ್ಥರು ಸಂಚರಿ ಸಬೇಕಿದೆ. ಈ ಸೇತುವೆಯ ಪಕ್ಕದಲ್ಲಿ ಅಂದಾಜು 60 ವರ್ಷಗಳ ಹಿಂದೆ ನಿರ್ಮಿಸಿದ ಕಾಲು ಸೇತುವೆ (ಸಂಕ) ಇದೆ. ಆದರೆ, ನದಿಯಲ್ಲಿ ಕೊಚ್ಚಿಕೊಂಡು ಬಂದ ಮರದ ದಿಮ್ಮಿ ಸೇತುವೆಗೆ ಅಪ್ಪಳಿಸಿ ಈ ಕಾಲು ಸೇತುವೆ ಮುಳುಗಿ ಹೋಗಿದೆ.

ನದಿಯಲ್ಲಿ ನೀರಿನ ಮಟ್ಟ ಏರಿಕೆಯಾದಾಗ ಕಾಲು ಸೇತುವೆಯೂ ಮುಳುಗಡೆಯಾದರೇ 1ನೇ ಮೊಣ್ಣಂಗೇರಿ ಗ್ರಾಮ ಹೊರಜಗತ್ತಿನ ಸಂಪರ್ಕವನ್ನೇ ಕಳೆದುಕೊಳ್ಳುತ್ತದೆ, ಪ್ರತಿನಿತ್ಯ 1ನೇ ಮೊಣ್ಣಂಗೇರಿ ಗ್ರಾಮ ದಲ್ಲಿರುವ 40ಕ್ಕೂ ಹೆಚ್ಚು ಶಾಲಾ ಮಕ್ಕಳು ಮುರಿದ ಸ್ಥಿತಿಯಲ್ಲಿರುವ ಕಾಲು ಸೇತುವೆ ಅಥವಾ ಮುಳುಗಿದ ಸೇತುವೆ ಯನ್ನು ದಾಟಿಕೊಂಡು ಶಾಲೆಗೆ ತೆರಳ ಬೇಕಿದೆ. ಕೆಲ ವರ್ಷಗಳ ಹಿಂದೆ ಈ ಕಾಲು ಸೇತುವೆಯನ್ನು ದಾಟುತ್ತಿದ್ದ ಸಂದರ್ಭ ಗಾಳಿಬೀಡು ಶಾಲೆಯ 7ನೇ ತರಗತಿ ವಿದ್ಯಾರ್ಥಿಯೊಬ್ಬ ನೀರುಪಾಲಾದ ಘಟನೆಯೂ ನಡೆದಿದೆ. ಆದರೆ ಜನಪ್ರತಿ ನಿಧಿಗಳು, ಸ್ಥಳೀಯಾಡಳಿತ ಮತ್ತು ಜಿಲ್ಲಾಡ ಳಿತ ಮಾತ್ರ ಎಲ್ಲವನ್ನೂ ಕಂಡು ಕಾಣ ದಂತೆ ಜಾಣ ಮೌನಕ್ಕೆ ಶರಣಾಗಿದೆ.

1ನೇ ಮೊಣ್ಣಂಗೇರಿ ಗ್ರಾಮಸ್ಥರು ಈ ಅವ್ಯ ವಸ್ಥೆಗಳ ಕುರಿತು ಅದೆಷ್ಟೋ ಭಾರಿ ಸಂಬಂಧಿ ಸಿದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ, ಆ ಮನವಿಗಳು ಕಸದ ಬುಟ್ಟಿ ಪಾಲಾಗಿದೆ. ಹೀಗಾಗಿ 1ನೇ ಮೊಣ್ಣಂ ಗೇರಿ ಗ್ರಾಮ ಸ್ವಾತಂತ್ರ್ಯ ಬಂದು 72 ವರ್ಷಗಳಾದರೂ ಮೂಲ ಸೌಲಭ್ಯವೂ ಇಲ್ಲದೆ ಪರದಾಡ ಬೇಕಾಗಿದೆ.

Translate »