ರಾಜ್ಯಮಟ್ಟದಲ್ಲಿ ದೋಸ್ತಿ, ಜಿಲ್ಲೆಯಲ್ಲಿ ಜಂಗೀ ಕುಸ್ತಿ…!
ಮಂಡ್ಯ

ರಾಜ್ಯಮಟ್ಟದಲ್ಲಿ ದೋಸ್ತಿ, ಜಿಲ್ಲೆಯಲ್ಲಿ ಜಂಗೀ ಕುಸ್ತಿ…!

August 13, 2018

ಮಂಡ್ಯ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಆಯೋಗವು ಆ.29ರಂದು ಮುಹೂರ್ತ ಫಿಕ್ಸ್ ಮಾಡಿ ಅಧಿಸೂಚನೆ ಹೊರಡಿ ಸಿದೆ. ಇದರ ಬೆನ್ನಲ್ಲೇ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಟಿಕೆಟ್ ಆಕಾಂಕ್ಷಿಗಳು ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಜಿಲ್ಲಾ ಸ್ಥಳೀಯ ಸಂಸ್ಥೆಗಳ ಒಡೆಯರು ಯಾರಾಗುತ್ತಾರೆ ಎಂಬೆಲ್ಲಾ ಲೆಕ್ಕಾಚಾರಗಳು ಶುರುವಾಗಿದೆ.

ಮಂಡ್ಯ ಜಿಲ್ಲೆ ಹೇಳಿ ಕೇಳಿ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಭದ್ರಕೋಟೆಯಾಗಿದೆ. ಸಹಜ ವಾಗಿಯೇ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಹೆಚ್ಚಿನ ಪೈಪೋಟಿ ಏರ್ಪಟ್ಟಿದ್ದು, ಜಿಲ್ಲೆಯ ರಾಜಕೀಯ ತೀವ್ರ ಕುತೂಹಲ ಮೂಡಿಸಿದೆ.

ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ದೋಸ್ತಿ ಸರ್ಕಾರ ಅಧಿಕಾರದಲ್ಲಿದೆ. ಆದರೂ ಲೋಕಲ್ ಮಟ್ಟದಲ್ಲಿ ದೋಸ್ತಿಗಿಂತ ಕುಸ್ತಿ ನಡೆಯುವ ಸಾಧ್ಯತೆಯೇ ಹೆಚ್ಚಾಗಿದೆÀ. ಸ್ಥಳೀಯವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಹೊಂದಾಣಿಕೆ ಕೊರತೆ ಲೋಕಲ್ ಎಲೆಕ್ಷನ್ ನಲ್ಲಿ ದೋಸ್ತಿಗಿಂತ ಕುಸ್ತಿ ಅಖಾಡ ನಿರ್ಮಾಣ ವಾಗುವ ಸಾಧ್ಯತೆ ಇದೆ ಎಂಬುದು ರಾಜ ಕೀಯ ಪಂಡಿತರ ಲೆಕ್ಕಾಚಾರವಾಗಿದೆ.

ಮತ್ತೊಂದು ಮೂಲಗಳ ಪ್ರಕಾರ ಬಿಜೆಪಿ ಯನ್ನು ದೂರವಿಡುವ ದೃಷ್ಟಿಯಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರವೂ ನಡೆಯು ತ್ತಿದೆ. ಯಾವುದಕ್ಕೂ ಎರಡೂ ಪಕ್ಷಗಳ ವರಿಷ್ಠರು ಅಂತಿಮ ತೀರ್ಮಾನ ಪ್ರಕಟಿಸಿದ ಬಳಿಕವಷ್ಟೇ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಬೀಳಲಿದೆ.

ಈಗಾಗಲೇ ಸಾರ್ವತ್ರಿಕ ವಿಧಾನಸಭೆ ಚುನಾ ವಣೆಯಲ್ಲಿ ಜೆಡಿಎಸ್ ಜಿಲ್ಲೆಯ 7 ಕ್ಷೇತ್ರಗಳÀನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಸಂಪೂರ್ಣ ಹಿಡಿತ ಸಾಧಿಸಿದೆ. ಆದರೆ ಕಾಂಗ್ರೆಸ್ ಸಂಪೂರ್ಣ ಹಿಡಿತ ಕಳೆದುಕೊಂಡಿದ್ದು ಲೋಕಲ್ ಎಲೆಕ್ಷನ್ ನಲ್ಲಾದರೂ ಪುಟಿದೇಳುವ ತವಕದಲ್ಲಿದೆ.

ಟಿಕೆಟ್‍ಗಾಗಿ ಲಾಬಿ: ಆ.29ರಂದು ಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಆಕಾಂಕ್ಷಿತರಿಂದ ಟಿಕೆಟ್‍ಗಾಗಿ ಭಾರೀ ಲಾಬಿ ಶುರುವಾಗಿದೆ.ಮಂಡ್ಯ ನಗರಸಭೆ, ಕೃಷ್ಣರಾಜ ಪೇಟೆ, ಮದ್ದೂರು, ಶ್ರೀರಂಗಪಟ್ಟಣದ ಪುರಸಭೆ ಹಾಗೂ ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯಿತಿಗೆ ಸ್ಪರ್ಧಿಸಲು ಜೆಡಿಎಸ್ ಕಾಂಗ್ರೆಸ್‍ನೊಳಗೆ ಆಕಾಂ ಕ್ಷಿತರ ಸಂಖ್ಯೆ ದೊಡ್ಡಮಟ್ಟದಲ್ಲಿದೆ.
ಚುನಾವಣೆ ಘೋಷಣೆಯಾಗುವ ಮುನ್ನವೇ ರಾಜಕೀಯ ನಾಯಕರ ಮಕ್ಕಳು ಹಾಗೂ ಪ್ರತಿಷ್ಠಿತ ಕುಟುಂಬಗಳ ಮುಖಂಡರು ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಇದರ ನಡುವೆ ಪಕ್ಷಗಳ ನಿಷ್ಠಾವಂತ ಕಾರ್ಯಕರ್ತರು ಅರ್ಜಿ ಹಾಕಿ ತಮ್ಮ ನಾಯಕರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಪ್ರಮುಖ ಪಾತ್ರ ವಹಿಸು ವುದರಿಂದ ಟಿಕೆಟ್‍ಗಾಗಿ ಲಾಬಿ ಶುರುವಾಗಿದೆ.

ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿತ ಅಭ್ಯರ್ಥಿಗಳು ನಗರದ ತಮ್ಮ ವಾರ್ಡ್ ಗಳ ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಪ್ರಾರಂಭಿಸಿದ್ದಾರೆ. ಮೀಸಲಾತಿಯಿಂದ ಟಿಕೆಟ್ ವಂಚಿತರಾಗಿರುವ ಹಾಲಿ ಸದಸ್ಯರು ನಿರಾಸೆ ಗೊಂಡಿದ್ದಾರೆ. ಆದರೆ, ಈ ಬಾರಿಯೂ ಸ್ಪರ್ಧಿ ಸಲು ಇಚ್ಛಿಸಿರುವ ಹಾಲಿ ಸದಸ್ಯರು ಪಕ್ಕದ ವಾರ್ಡ್‍ಗಳ ಮೇಲೆ ಕಣ್ಣಿಟ್ಟಿದ್ದಾರೆ. ಮಹಿಳಾ ಮೀಸ ಲಾತಿ ಇರುವ ವಾರ್ಡ್‍ಗಳಿಗೆ ಪತ್ನಿಯರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ.
ಚುನಾವಣಾ ಆಯೋಗ ಮಂಡ್ಯ ನಗರಸಭೆ ವಾರ್ಡ್‍ಗಳ ಭೌಗೋಳಿಕ ಎಲ್ಲೆಯನ್ನು ಪರಿಷ್ಕರಿಸ ಲಾಗಿದೆ. ಇದರಿಂದ ಅಕ್ಕಪಕ್ಕದ ವಾರ್ಡ್‍ಗಳಲ್ಲಿನ ಮತದಾರರು ಹರಿದು ಹಂಚಿ ಹೋಗಿದ್ದಾರೆ. ಇದರಿಂದ ಮತದಾರರು ಗೊಂದಲಕ್ಕೊಳಗಾಗಿದ್ದಾರೆ.
ಸದ್ಯದ ಮಂಡ್ಯ ಚಿತ್ರಣ ಹೇಗಿದೆ?: ಜಿಲ್ಲೆಯ ಇತರೆ ತಾಲೂಕುಗಳಿಗಿಂತ ಜಿಲ್ಲಾ ಕೇಂದ್ರ ಮಂಡ್ಯ ನಗರಸಭೆ ವಿಶಿಷ್ಠತೆ ಪಡೆದುಕೊಂಡಿದೆ. 35 ವಾರ್ಡ್‍ಗಳ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಶ್ರೀನಿವಾಸ್ ವಾರ್ಡ್‍ವಾರು ಮೀಸಲಾತಿ ಬದಲಿಸುವಲ್ಲಿ ತಮ್ಮ ಪ್ರಭಾವ ಬಳಸಿ ತಮ್ಮ ಬೆಂಬಲಿಗರ ಕೈ ಹಿಡಿದಿದ್ದಾರೆ.

ವಿಧಾನಸಭೆ ಚುನಾವಣೆಗೂ ಮುನ್ನ ಅಂದಿನ ಸರ್ಕಾರ ನಗರಸಭೆ ವಾರ್ಡ್‍ವಾರು ಮೀಸಲಾತಿ ಪ್ರಕಟಿಸಿತು. ಇದರಿಂದ ಕೆಲ ವಾರ್ಡ್‍ಗಳ ಪ್ರಬಲ ಆಕಾಂಕ್ಷಿಗಳ ಆಸೆಗೆ ತಣ್ಣೀರೆರೆಚಿದಂತಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಆಯಾ ಪಕ್ಷಗಳ ಶಾಸಕರು ತಮ್ಮ ಬೆಂಬಲಿಗರ ಪರವಾಗಿ ವಾರ್ಡ್‍ವಾರು ಮೀಸಲಾತಿಯನ್ನು ಬದಲಿಸಲು ತಮ್ಮ ಪ್ರಭಾವ ಬೀರಲು ಆರಂಭಿಸಿದ್ದರು. ಅದರಂತೆ ಮಂಡ್ಯ ನಗರ ಸಭೆಯ ವಾರ್ಡ್ ನಂಬರ್ 1 ರಲ್ಲಿ ಈ ಹಿಂದೆ ಹಿಂದುಳಿದ ವರ್ಗದ ಮಹಿಳೆಗೆ ನಿಗದಿಯಾಗಿದ್ದ ಮೀಸಲಾತಿಯನ್ನು ಸಾಮಾನ್ಯ ಕ್ಷೇತ್ರಕ್ಕೆ ನಿಗದಿ ಮಾಡಲಾಗಿದೆ. ಇದರಿಂದಾಗಿ ವಾರ್ಡ್ ಒಂದರ ಶ್ರೀನಿವಾಸ್ ಬೆಂಬಲಿಗ ಆನೆಕೆರೆ ಬೀದಿ ನಾಗೇಶ್‍ಗೆ ಅನುಕೂಲವಾಗಲಿದೆ. ಹಾಗೆಯೇ ಕಲ್ಲಹಳ್ಳಿ 6ನೇ ವಾರ್ಡ್‍ನ್ನು ಸಾಮಾನ್ಯ ಕ್ಷೇತ್ರವನ್ನಾಗಿಸಿ ಗಾರೆ ರವಿಗೆ ಅನುಕೂಲ ಮಾಡಿಕೊಡಲಾಗಿದೆ. ಅದೇ ಮಾದರಿ ಶಿವಪ್ರಕಾಶ್ ಬಾಬು ಸ್ಪರ್ಧಿಸುವ ವಾರ್ಡ್ ನಂಬರ್ 19ನ್ನು ಸಾಮಾನ್ಯ ಬದಲು ಸಾಮಾನ್ಯ ಮಹಿಳೆಗೆ ನಿಗದಿ ಮಾಡಿ ಬಾಬು ರಾಜಕೀಯ ಕನಸಿಗೆ ಬ್ರೇಕ್ ಹಾಕಿದ್ದಾರೆ.

ಹೊಸಹಳ್ಳಿಯಲ್ಲಿ ವಾರ್ಡ್ 21, ಮತ್ತು 22ನ್ನು ಸಾಮಾನ್ಯ ಕ್ಷೇತ್ರವನ್ನಾಗಿಸಿ ಜೆಡಿಎಸ್ ಬೆಂಬಲಿತ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಾಗಿದೆ. ವಾರ್ಡ್ ನಂ.24 ನ್ನು ಪರಿಶಿಷ್ಟ ಜಾತಿಯ ಬದಲು ಸಾಮಾನ್ಯ ಮಹಿಳೆಗೆ ನಿಗದಿಗೊಳಿಸಲಾಗಿದೆ. ಒಟ್ಟಾರೆ ಸ್ಥಳೀಯ ಸಂಸ್ಥೆ ಮೀಸಲು ಬದಲಾವಣೆ ತರುವಲ್ಲಿ ಶಾಸಕ ಎಂ.ಶ್ರೀನಿವಾಸ್ ಮೇಲುಗೈ ಸಾಧಿಸಿದ್ದು, ಸಮ್ಮಿಶ್ರ ಸರ್ಕಾರ ಅಸ್ವಿತ್ವಕ್ಕೆ ಬರುವ ಮೊದಲು ಬಿಡುಗಡೆಯಾಗಿದ್ದ ಪಟ್ಟಿಯಿಂದಾಗಿ ಕೆಲವು ಘಟಾನುಘಟಿ ಅಭ್ಯರ್ಥಿಗಳಲ್ಲಿ ನಿರಾಸೆ ತಂದಿತ್ತು. ಇದೀಗ ಮೀಸಲಾತಿ ಬದಲಾವಣೆ ಯಿಂದಾಗಿ ಕೆಲವರು ನಿಟ್ಟುಸಿರು ಬಿಡುವಂತಾಗಿದೆ.

ಅಂತೆಯೇ ಕಾಂಗ್ರೆಸ್‍ನೊಳಗೂ ಪೈಪೋಟಿ ಇದೆ. ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಸ್. ಚಿದಂಬರ್ ಸಹೋದರ 11 ನೇ ವಾರ್ಡ್‍ನಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿಯಿದ್ದು ಜಿಲ್ಲಾ ಕಾಂಗ್ರೆಸ್ ಮೂಲಗಳ ಪ್ರಕಾರ ಇನ್ನು ನಾಲ್ಕೈದು ದಿನಗಳಲ್ಲಿ ಯಾರ್ಯಾರು ಕಣಕ್ಕಿಳಿ ಯಲಿದ್ದಾರೆ ಎಂಬುದು ಗೊತ್ತಾಗಲಿದೆ.

ಲೋಕಲ್ ದೋಸ್ತಿ ಸಾಧ್ಯವಿಲ್ಲ ಯಾಕೆ?
ಜಿದ್ದಾಜಿದ್ದಿಗೆ ಹೆಸರಾದ ನಾಗಮಂಗಲದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಕೆ.ಸುರೇಶ್‍ಗೌಡ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ ಹೊರೆ ಇಳಿಸಿ ಕೈ ಹಿಡಿದ ಎನ್.ಚಲುವರಾಯಸ್ವಾಮಿ ಈ ಬಾರಿ ಸೋಲುಂಡಿದ್ದಾರೆ. ಹೀಗಾಗಿ ಕಾರ್ಯಕರ್ತರ ಮನಸ್ಥಿತಿಯೂ ಸಹ ತದ್ವಿರುದ್ಧವಾಗಿದೆ. ಶ್ರೀರಂಗಪಟ್ಟಣ ಕ್ಷೇತ್ರವೂ ಸಹ ಜಿದ್ದಾಜಿದ್ದಿನ ಮನಸ್ಥಿತಿಯಲ್ಲಿದೆ. ಜೆಡಿಎಸ್ ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡರ ನಡುವಿನ ಸಮರ ಮಾತ್ರವಲ್ಲದೇ ಕಾರ್ಯಕರ್ತರಲ್ಲಿಯೂ ಸಹ ಈಗಾಗಲೇ ಮಾರಾಮಾರಿ ನಡೆದಿರುವುದು ಜಗÀಜ್ಜಾಹೀರಾಗಿದೆ.
ಮಳವಳ್ಳಿ ಕ್ಷೇತ್ರದಲ್ಲಿಯೂ ಸಹ ಹಾಲಿ ಶಾಸಕ ಕೆ.ಅನ್ನದಾನಿ, ಕಾಂಗ್ರೆಸ್‍ನ ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನಡುವೆ ಈ ಹಿಂದಿನಿಂದಲೂ ವಿರೋಧ ರಾಜಕಾರಣವಿರುವುದನ್ನು ಕಂಡಿದ್ದೇವೆ. ಮದ್ದೂರು, ಪಾಂಡವಪುರದಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ರಾಜಕೀಯ ಜಿದ್ದಾಜಿದ್ದಿ ನಡೆದುಕೊಂಡೇ ಬಂದಿದೆ. ಕೆ.ಆರ್.ಪೇಟೆ ಕ್ಷೇತ್ರವೂ ಸಹ ಇಂತಹ ಜಿದ್ದಾಜಿದ್ದಿನ ವಾತಾವರಣದಿಂದ ಹೊರತಾಗಿಲ್ಲ. ಶಾಸಕ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ನಡುವೆಯೂ ರಾಜಕೀಯ ಜುಗಲ್‍ಬಂದಿ ನಡೆದುಕೊಂಡು ಬಂದಿರುವುದು ಹೊಸದೇನಲ್ಲ. ಹೀಗಾಗಿ ರಾಜ್ಯಮಟ್ಟದಲ್ಲಿ ಜೆಡಿಎಸ್, ಕಾಂಗ್ರೆಸ್ ಹೊಂದಾಣಿಕೆ ಇದ್ದರೂ, ಮಂಡ್ಯ ಜಿಲ್ಲೆಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆ ಸಾಧ್ಯವಿಲ್ಲ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಜೆಡಿಎಸ್, ಕಾಂಗ್ರೆಸ್ ಭದ್ರಕೋಟೆಯಾಗಿರುವ ಮಂಡ್ಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿಯಾದರೂ ಕಮಲ ತನ್ನ ಖಾತೆ ತೆರೆಯುವ ನಿಟ್ಟಿನಲ್ಲಿ ಹೋರಾಟ ನಡೆಸುವ ಸಾಧ್ಯತೆ ಇದೆ.

ರಾಜ್ಯದಲ್ಲಿ ರಚನೆಯಾಗಿರುವ ಸಮ್ಮಿಶ್ರ ಸರ್ಕಾರದಿಂದ ಜೆಡಿಎಸ್-ಕಾಂಗ್ರೆಸ್ ಎರಡು ಪಕ್ಷಗಳ ನಡುವೆ ಉತ್ತಮ ಬಾಂಧವ್ಯ ಇದೆ. ಹೀಗಾಗಿ ಲೋಕಲ್ ಎಲೆಕ್ಷನ್‍ನಲ್ಲೂ ಹೊಂದಾಣಿಕೆ ಸಾಧ್ಯತೆ ಇದೆ. ಆದರೆ ಈ ಬಗ್ಗೆ ವರಿಷ್ಠರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
-ಸಿ.ಎಸ್.ಪುಟ್ಟರಾಜು,ಜಿಲ್ಲಾ ಉಸ್ತುವಾರಿ ಸಚಿವ

ರಾಜ್ಯದಲ್ಲಿ ಜೆಡಿಎಸ್‍ನೊಂದಿಗೆ ಮೈತ್ರಿ ಸರ್ಕಾರವಿದ್ದರೂ ಸ್ಥಳೀಯ ಚುನಾ ವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ್ಲ. ಈ ಬಗ್ಗೆ ಪಕ್ಷದ ಮುಖಂಡರಿಂದಲೂ ಲೋಕಲ್ ಮೈತ್ರಿ ಬಗ್ಗೆ ಯಾವುದೇ ಮಾಹಿತಿ ಇಲ್ಲ.
-ಸಿ.ಡಿ.ಗಂಗಾಧರ್, ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು

Translate »