ಮಳೆ; ಮನೆ ಕುಸಿತ ಪ್ರದೇಶಕ್ಕೆ ಶಾಸಕರ ಭೇಟಿ
ಕೊಡಗು

ಮಳೆ; ಮನೆ ಕುಸಿತ ಪ್ರದೇಶಕ್ಕೆ ಶಾಸಕರ ಭೇಟಿ

August 13, 2018

ಗೋಣಿಕೊಪ್ಪಲು: ವಿಪರೀತ ಗಾಳಿ, ಮಳೆಗೆ ತುತ್ತಾಗಿ ಮನೆ ಕಳೆದು ಕೊಂಡಿದ್ದ ಕೊಡಗಿನ ಶ್ರೀಮಂಗಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುರ್ಚಿ ಗ್ರಾಮದ ಕಾಫಿ ಬೆಳೆಗಾರ ಮಚ್ಚಮಾಡ ಕರುಂಬಯ್ಯನವರ ಮನೆಗೆ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳಾದ ದೇವಯ್ಯನವರನ್ನು ಬರ ಮಾಡಿಕೊಂಡ ಶಾಸಕರು ಸರ್ಕಾರದಿಂದ ಪರಿಹಾರವಾಗಿ 95 ಸಾವಿರವನ್ನು ನೀಡು ವಂತೆ ಸೂಚಿಸಿದರು. ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಆಶ್ರಯ ಮನೆ ಮಂಜೂರು ಮಾಡುವ ಮೂಲಕ ನಿರಾಶ್ರಿತಗೊಂಡ ಕರುಂಬಯ್ಯನವರಿಗೆ ಸಹಕರಿಸುವಂತೆ ನಿರ್ದೇಶನ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಅಜ್ಜಮಾಡ ಚಂಗಪ್ಪ ಸ್ಥಳಕ್ಕೆ ಶಾಸಕರನ್ನು ಬರಮಾಡಿಕೊಂಡು ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಲು ಮನವಿ ಮಾಡಿದ್ದರು.

ಭೇಟಿಯ ಸಂದರ್ಭ ರೈತ ಸಂಘದ ಮುಖಂಡರಾದ ಅಯ್ಯಮಾಡ ಹ್ಯಾರಿ ಸೋಮೇಶ್, ಬಾಚಂಗಡ ಭವಿ ಕುಮಾರ್, ಬಿಜೆಪಿ ಪ್ರಮುಖರಾದ ಈಶ್ವರ್, ಮುತ್ತಣ್ಣ, ಸಂಜು, ಮಲ್ಲಂಡ ಮಧು ಮುಂತಾದವರು ಹಾಜರಿದ್ದರು.

ಕಳೆದ 2 ದಿನಗಳ ಹಿಂದೆ ಸುರಿಯುತ್ತಿದ್ದ ಭಾರಿ ಮಳೆಯಿಂದ ಮನೆ ಕುಸಿದಿದ್ದು, ಮನೆಯ ನಿವಾಸಿಗಳು ಮನೆಯಿಂದ ಹೊರಗೆ ಇದ್ದ ಸಂದರ್ಭ ಘಟನೆ ಸಂಭವಿಸಿತ್ತು. ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದರು. ಮನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಜೀವನ ಸಾಗಿಸುತ್ತಿದ್ದರು. ಘಟನೆಯಿಂದ ಮನೆ ಕಳೆದುಕೊಂಡಿರುವ ಕರುಂಬಯ್ಯ ಸದ್ಯ ತನ್ನ ಅಣ್ಣನ ಮನೆಯನ್ನು ಆಶ್ರಯಿಸಿದ್ದಾರೆ. ಸುಮಾರು 15 ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

Translate »