ಜಿಲ್ಲಾಸ್ಪತ್ರೆ ಅವ್ಯವಸ್ಥೆಗೆ ಸಚಿವರ ತರಾಟೆ
ಮಂಡ್ಯ

ಜಿಲ್ಲಾಸ್ಪತ್ರೆ ಅವ್ಯವಸ್ಥೆಗೆ ಸಚಿವರ ತರಾಟೆ

August 13, 2018

ಮಂಡ್ಯ: ಮಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಕಂಡು ಆಕ್ರೋಶಗೊಂಡ ಮಂಡ್ಯ ಜಿಲ್ಲಾ ಉಸ್ತುವಾರಿ, ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲಾಸ್ಪತ್ರೆ ಆವರಣದಲ್ಲಿಂದು ನಡೆಯಿತು.

ಇಂದು ಬೆಳಗ್ಗೆ ವಿ.ಸಿ.ಫಾರಂ ಗೇಟ್ ಬಳಿ ಅಪಘಾತದಲ್ಲಿ ಮೃತಪಟ್ಟವರನ್ನು ನೋಡಲು ಮಿಮ್ಸ್‍ನ ಶವಾಗಾರಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆಯಿತು.

ಏನಿದು ಘಟನೆ: ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಹೆರಿಗೆ ವಾರ್ಡ್ ಬಳಿ ಬಾಣಂತಿಯರ ಸಂಬಂಧಿಕರಿಗೆ ಕುಳಿತುಕೊಳ್ಳಲು ಜಾಗವಿಲ್ಲದೇ ಮಳೆಯಲ್ಲಿ ಪರದಾಡುತ್ತಿರುವುದನ್ನು ಗಮನಿಸಿದರು. ಕೂಡಲೇ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಅವರನ್ನು ಸ್ಥಳಕ್ಕೆ ಬರಲು ಹೇಳಿದ ಸಚಿವರು, ಅವ್ಯವಸ್ಥೆಗೆ ಕಾರಣರಾದ ಸೆಕ್ಷನ್ ಆಫೀಸರ್ ಪ್ರಭಾಕರ್ ಎಂಬುವವರನ್ನು ಸಸ್ಪೆಂಡ್ ಮಾಡುವಂತೆ ಸೂಚಿಸಿದರು. ಅಷ್ಟೇ ಅಲ್ಲದೇ ಬಾಣಂತಿಯರ ಸಂಬಂಧಿಕರು ಕುಳಿತುಕೊಳ್ಳಲು ತಾತ್ಕಾಲಿಕ ವಾಟರ್ ಫ್ರೂಫ್ ಶೆಡ್ ನಿರ್ಮಿಸುವಂತೆ ಸೂಚಿಸಿದರು.

ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸಮ್ಮುಖದಲ್ಲಿ ರೋಗಿಗಳು ಮತ್ತವರ ಪೋಷಕರ ಸಮಸ್ಯೆಗಳನ್ನು ಆಲಿಸಿದರು. ಆಸ್ಪತ್ರೆ ಆವರಣದಲ್ಲಿ ಈ ಹಿಂದೆ ನಿರ್ಮಾಣವಾಗಿದ್ದ ರೋಗಿಗಳ ಕಡೆಯವರ ಶೆಡ್‍ನ್ನು ಕ್ಯಾಂಟೀನ್‍ಗಾಗಿ ಬಳಸಿ ಕೊಂಡಿರುವುದರಿಂದ ರೋಗಿಗಳು ಬೀದಿಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಸಚಿವರು, ಸಂಬಂಧಿಸಿದವರ ವಿರುದ್ಧ ಕಿಡಿಕಾರಿದರು.

ಕ್ಯಾಂಟೀನ್‍ನ್ನು ಇಲ್ಲಿಗೆ ವರ್ಗಾಯಿಸಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ತಕ್ಷಣ ರೋಗಿಗಳಿಗೆ ವಾಟರ್ ಫ್ರೂಫ್ ಶೆಡ್ ಹಾಕಿಸಿ, ಮ್ಯಾಟ್ ಮತ್ತು ಕುರ್ಚಿಗಳ ವ್ಯವಸ್ಥೆ ಯನ್ನು ತಾತ್ಕಾಲಿಕವಾಗಿ ಕಲ್ಪಿಸಿದರು.

ಈ ಸಂಬಂಧ ಸೋಮವಾರ ಮಧ್ಯಾಹ್ನ 12 ಗಂಟೆಗೆ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಆಸ್ಪತ್ರೆ ಅಧಿಕಾರಿಗಳ ಸಭೆಯನ್ನು ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ತೊಂದರೆ, ಬಿಸಿನೀರು ಲಭ್ಯವಾಗುತ್ತಿಲ್ಲ. ಔಷಧ ಮಳಿಗೆ ತೆಗೆಯುತ್ತಿಲ್ಲ. ಶೌಚಾಲಯದ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತಂತೆ ಚರ್ಚೆ ನಡೆಸಲಾಗುವುದು, ಕೆಲವೇ ದಿನಗಳಲ್ಲಿ ಆಸ್ಪತ್ರೆಯ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ಸಚಿವರು ಇದೇ ವೇಳೆ ಸುದ್ದಿಗಾರರಿಗೆ ತಿಳಿಸಿದರು.

ಸಚಿವರ ಆದೇಶದ ಮೇರೆಗೆ ಕೆಲವೇ ಗಂಟೆಗಳಲ್ಲಿ ಶೆಡ್ ನಿರ್ಮಾಣವಾಗಿದೆ ಇದರಿಂದಾಗಿ ರೋಗಿಗಳು ಮತ್ತು ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.

Translate »