ಆ.7ರಂದು ರಾಷ್ಟ್ರವ್ಯಾಪಿ ಸಾರಿಗೆ ಮುಷ್ಕರ: ಮಂಜುನಾಥ್
ಹಾಸನ

ಆ.7ರಂದು ರಾಷ್ಟ್ರವ್ಯಾಪಿ ಸಾರಿಗೆ ಮುಷ್ಕರ: ಮಂಜುನಾಥ್

August 4, 2018

ಹಾಸನ:  ಮೋಟಾರು ವಾಹನ (ತಿದ್ದುಪಡಿ) ಮಸೂದೆ-2017 ಅನ್ನು ಹಿಂಪಡೆಯಬೇಕು ಹಾಗೂ ಸಾರಿಗೆ ಉದ್ಯಮ ರಕ್ಷಣೆ, ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜರಿಗೊಳಿಸುವಂತೆ ಒತ್ತಾಯಿಸಿ ರಸ್ತೆ ಸಾರಿಗೆ ರಂಗದಲ್ಲಿರುವ ಕಾರ್ಮಿಕರು ಮತ್ತು ಮಾಲೀಕರ ಸಂಘಟನೆಗಳ ವೇದಿಕೆ ವತಿಯಿಂದ ರಾಷ್ಟ್ರವ್ಯಾಪಿ ಆ. 7ರಂದು ಸಾರಿಗೆ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕೆಎಸ್‍ಆರ್‍ಟಿಸಿ ನೌಕರರ ಫೆಡರೇಷನ್‍ನ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮಂಜುನಾಥ್ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ರಸ್ತೆ ಸಾರಿಗೆ ಉದ್ದಿಮೆಯಲ್ಲಿರುವ ಆಟೋರಿಕ್ಷಾ, ಟ್ಯಾಕ್ಸಿ, ಖಾಸಗಿ ಬಸ್, ಟ್ರಕ್, ರಾಜ್ಯ ರಸ್ತೆ ಸಾರಿಗೆ ನಿಗಮಗಳು, ಡ್ರೈವಿಂಗ್ ಶಾಲೆಗಳು, ವರ್ಕ್‍ಶಾಪ್‍ಗಳು, ಬಿಡಿ ಭಾಗಗಳ ಅಂಗಡಿಗಳು, ಮುಂತಾದ ಎಲ್ಲಾ ಉದ್ಯಮಗಳು ಗಂಭೀರ ಬಿಕ್ಕಟ್ಟಿನಲ್ಲಿವೆ. ಇವುಗಳಲ್ಲಿ ತೊಡಗಿಕೊಂಡಿರುವ ಕಾರ್ಮಿಕರು, ಮಾಲೀಕರು ಹಾಗೂ ಚಾಲಕರು, ಸಣ್ಣ ಮಾಲೀಕರು ಮುಂತಾದವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ದೊರೆಯದಿದ್ದರೂ ಸಮಾಜಕ್ಕೆ ತಮ್ಮದೇಯಾದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಇವರೆಲ್ಲರೂ ಅಧಿಕಾರಿಗಳು ಮತ್ತು ಪೊಲೀಸರಿಂದ ನಿತ್ಯ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು, ಕೋಟ್ಯಾಂತರ ಒಂಟಿ ವಾಹನ ಮಾಲೀಕರನ್ನು ಮತ್ತು ಕಾರ್ಮಿಕರನ್ನು ನಾಶ ಮಾಡಲು ಮುಂದಾಗಿದೆ. ಇದರಿಂದ ಇಡೀ ಉದ್ದಿಮೆಯನ್ನು ಭಾರತೀಯ ಮತ್ತು ವಿದೇಶೀ ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸಲು ಹೊರಟಿದೆ ಎಂದು ಆರೋಪಿಸಿದರು.

ಖಾಸಗಿ ಫೈನಾನ್ಸ್ ಕಂಪನಿಗಳಿಂದ ಅಥವಾ ಇತರೆ ಮೂಲಗಳಿಂದ ಸಾಲ ಪಡೆದು ಬಹುತೇಕ ಆಟೋ, ಟ್ಯಾಕ್ಸಿ, ಟ್ರಕ್, ಖಾಸಗಿ ಬಸ್‍ಗಳನ್ನು ತಮ್ಮ ಜೀವನ ನಿರ್ವಹಣೆಗಾಗಿ ನಡೆಸುತ್ತಿರುವರು ಸಂಕಷ್ಟದಲ್ಲಿದ್ದಾರೆ. ನಿರಂತರವಾಗಿ ಹೆಚ್ಚುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆ, ವಾಹನಗಳ ನೋಂದಣಿ ಶುಲ್ಕಗಳು, ಫಿಟ್ನೆಸ್, ಲೈಸೆನ್ಸ್, ನವೀಕರಣ ಮುಂತಾದ ಶುಲ್ಕಗಳ ಹೆಚ್ಚಳದಿಂದಾಗಿ ಸಾರಿಗೆ ಉದ್ದಿಮೆಯ ಗಂಭೀರವಾದ ಬಿಕ್ಕಟ್ಟಿಗೆ ಸಿಲುಕಿದೆ ಎಂದರು.

ಪ್ರಸ್ತುತ ಮಸೂದೆಯ ಪರಿಣಾಮವಾಗಿ ದೊಡ್ಡ ಪ್ರಮಾಣದ ಉದ್ಯೋಗ ನಾಶವಾಗಲಿದೆ. ಬಿಡಿ ಭಾಗಗಳ ವ್ಯಾಪಾರಿಗಳು, ರಸ್ತೆ ಬದಿಯ ಸಣ್ಣ ಪುಟ್ಟ ವರ್ಕ್‍ಶಾಪ್‍ಗಳು, ರಿಪೇರಿ ಕೆಲಸಗಾರರು ಮುಂತಾದ ಅಸಂಖ್ಯಾತ ಅಸಂಘಟಿತ ಕಾರ್ಮಿಕರು ಮತ್ತು ಕುಶಲ ಕರ್ಮಿಗಳು ತಮ್ಮ ಕೆಲಸವನ್ನು ಕಳೆದುಕೊಳ್ಳಲಿದ್ದು ಸಾರಿಗೆ ರಂಗ ಸಂಪೂರ್ಣ ಕಾರ್ಪೊರೇಟಿಕರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮೋಟಾರು ವಾಹನ (ತಿದ್ದುಪಡಿ) ಮಸೂದೆ-2017 ಅನ್ನು ಹಿಂಪಡೆಯಬೇಕು ಹಾಗೂ ಸಾರಿಗೆ ಉದ್ಯಮ ರಕ್ಷಿಸಿವ ಜೊತೆಗೆ, ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜರಿಗೊಳಿಸುವಂತೆ ಆಗ್ರಹಿಸಿ ಕರೆ ನೀಡಿರುವ ಮುಷ್ಕರ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಯಾವುದೇ ಸಾರಿಗೆ ವಾಹನಗಳು ಸಂಚಾರ ನಡೆಸುವುದಿಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಪ್ರಧಾನ ಕಾರ್ಯದರ್ಶಿ ಡಿ.ಎಲ್.ರಾಘವೇಂದ್ರ, ಕೆಎಸ್‍ಆರ್‍ಟಿಸಿ ಕಾರ್ಮಿಕ ಮುಖಂಡರಾದ ಬಿ.ಆರ್.ಕೆಂಪೇಗೌಡ, ಲೋಕೇಶ್, ಲಕ್ಷ್ಮೀಶ್ ಇದ್ದರು.

Translate »