ಕನ್ನಡದ ಅನಘ್ರ್ಯ ರತ್ನ ಕೆಎಸ್‍ಎನ್
ಹಾಸನ

ಕನ್ನಡದ ಅನಘ್ರ್ಯ ರತ್ನ ಕೆಎಸ್‍ಎನ್

August 4, 2018

ಅರಸೀಕೆರೆ: ‘ಕೆ.ಎಸ್.ನರಸಿಂಹಸ್ವಾಮಿ ಅವರು ಬೆಲೆ ಕಟ್ಟಲಾಗದ ಕನ್ನಡ ಶಬ್ದ ಕೋಶ. ಕನ್ನಡ ನಾಡಿಗೆ ಕವಿತೆ ಮತ್ತು ಕಾವ್ಯಗಳನ್ನು ನೀಡಿದ ಆನಘ್ರ್ಯ ರತ್ನ’ ಎಂದು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ನಡೆದ ಕೆಎಸ್‍ಎನ್ ಮಾತು-ಕತೆ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕೆ.ಎಸ್.ಎನ್ ಬಡತನದ ಜೀವನದಲ್ಲೂ ಕವಿತೆ ಮತ್ತು ಕಾವ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದವರು. ಬದುಕನ್ನು ಪ್ರೀತಿಸುವವನು ವಿಶ್ವವನ್ನು ಪ್ರೀತಿಸುತ್ತಾನೆ ಎಂದು ತಮ್ಮ ಕಾವ್ಯಗಳ ಮೂಲಕ ಜನತೆಗೆ ತೋರಿಸಿಕೊಟ್ಟರು. ಅವರ ಕಾವ್ಯಗಳು ಓದುಗರನ್ನು ಮಂತ್ರ ಮುಗ್ದನಾಗಿಸುಂತಹ ಶಕ್ತಿ ಹೊಂದಿದೆ. ಬಡತನದಲ್ಲೂ ಸಂತೋಷದಿಂದ ಬಾಳಬಹುದು ಎಂಬುದನ್ನು ಸಾಕ್ಷೀಕರಿಸಿದರೆ. ದ್ವೇಷ, ಅಸೂಯೆಗಳಿಂದ ಯಾರನ್ನೂ ಗೆಲ್ಲಲು ಸಾಧ್ಯವಿಲ್ಲ. ಅದು ಪ್ರೀತಿಯಿಂದ ಮಾತ್ರ ಸಾಧ್ಯವೆಂದು ಸಾಬೀತುಪಡಿಸಿದ್ದಾರೆ ಎಂದರು.

ದೇವರು ತಂದೆ, ಭೂಮಿ ತಾಯಿ ಮತ್ತು ಮನುಷ್ಯರೆಲ್ಲರೂ ಮಕ್ಕಳು ಎಂದು ಅರ್ಥಗರ್ಭಿತವಾಗಿ ತಮ್ಮ ಕವಿತೆ ಕಾವ್ಯಗಳಲ್ಲಿ ಬಿಂಬಿಸಿದ್ದಾರೆ. ಜೀವನದಲ್ಲಿ ಕಳೆದ ಕ್ಷಣಗಳಿಗಿಂತಲೂ ಉಳಿಯುವ ಕ್ಷಣಗಳೇ ಅತ್ಯುತ್ತಮವಾದದ್ದು, ಕಿವಿಯಿಂದ ಕೇಳುವುದಕ್ಕಿಂತ ಹೃದಯದಿಂದ ಅವರ ಕವಿತೆಗಳನ್ನು ಆಲಿಸಬೇಕು. ಆಗ ಮಾತ್ರ ಅದರ ಹೂರಣದ ರುಚಿ ತಿಳಿಯುತ್ತದೆ ಎಂದು ತಿಳಿಸಿದರು.

ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ಕೆಎಸ್‍ಎನ್ ಅವರು ರಚಿಸಿದ ‘ನಿನ್ನೊಲುಮೆ ನನಗಿರಲಿ ತಂದೆ’ ಎಂಬ ಕಾವ್ಯಗಳು ಸೇರಿದಂತೆ ಇನ್ನಿತರೇ ಅಮೂಲ್ಯ ರಚನೆಗಳು ಇಂದಿಗೂ ಕನ್ನಡ ನಾಡಿನ ಸಾಹಿತ್ಯ ಪ್ರಿಯರ ಮನಸ್ಸಿನಲ್ಲಿ ಉಳಿದಿದೆ. ಅಂದಿನ ಕಾಲದ ಚಲನಚಿತ್ರಗಳಲ್ಲಿ ಅವರು ರಚಿಸಿದ ಹಾಡುಗಳನ್ನು ರಂಜನೀಯವಾಗಿ ಅಳವಡಿಸಿಕೊಂಡು ಪರಿಚಯ ಮಾಡಿಕೊಟ್ಟ ಪರಿಣಾಮ ಆ ಹಾಡುಗಳು ಎಲ್ಲರ ಬಾಯಲ್ಲೂ ಇಂದಿಗೂ ಗುನುಗುಡುತ್ತಿದೆ ಎಂದರು.

ಟ್ರಸ್ಟ್‍ನ ಸದಸ್ಯ ರವಿಕುಮಾರ್ ಮಾತನಾಡಿದರು. ಬಳಿಕ, ಕೆಎಸ್‍ಎನ್ ಅವರ ಕಾವ್ಯಗಾಯನವನ್ನು ಗಂಗಾಧರ್, ತೇವರಿ ಮಠ್, ವಾಣಿ ಉಮೇಶ್ ಮತ್ತು ಕಾವ್ಯ ವಾಚನವನ್ನು ಮಮತಾ, ಮಹಾದೇವಿ ಅವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಶಿವಮೂರ್ತಿ, ಟ್ರಸ್ಟ್‍ನ ಸದಸ್ಯ ಜಾವಗಲ್ ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಪ್ರಾಂಶುಪಾಲ ಈಶ್ವರಪ್ಪ, ಡಾ.ಎಚ್.ಆರ್. ಸ್ವಾಮಿ, ನಗರಸಭೆ ಸದಸ್ಯ ಮನುಕುಮಾರ್, ಉಪನ್ಯಾಸಕಿ ಉಷಾ, ಕಸಾಪ ಸದಸ್ಯರಾದ ಮಮತಾರಾಣಿ, ದಿವಾಕರಬಾಬು, ಕೋಟ್ರೇಶ್, ಏಳಿಕೋಟಿ ಮಂಜುನಾಥ್ ಇದ್ದರು.

Translate »