ನಿಫಾ ಭೀತಿ: ಉತ್ತರ ಕೇರಳದತ್ತ ಸುಳಿಯದಂತೆ ರಾಜ್ಯ ಪ್ರವಾಸಿಗರಿಗೆ ಎಚ್ಚರಿಕೆ
ಮೈಸೂರು

ನಿಫಾ ಭೀತಿ: ಉತ್ತರ ಕೇರಳದತ್ತ ಸುಳಿಯದಂತೆ ರಾಜ್ಯ ಪ್ರವಾಸಿಗರಿಗೆ ಎಚ್ಚರಿಕೆ

May 25, 2018

ಬೆಂಗಳೂರು: ಉತ್ತರ ಕೇರಳದಲ್ಲಿ ನಿಫಾ ಭೀತಿ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಆ ಭಾಗಕ್ಕೆ ಪ್ರವಾಸಿಗರು ತೆರಳದಂತೆ ಸರ್ಕಾರ ಎಚ್ಚರಿಸಿದೆ.

ಕೇರಳದ ಕಣ್ಣೂರು, ವಯನಾಡು, ಕೋಳಿಕ್ಕೋಡ್, ಮಲಪ್ಪುರಂನಲ್ಲಿ ನಿಫಾ ವೈರಸ್ ಹರಡಿರುವ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂತಹ ಸೂಚನೆ ನೀಡಿದೆ.

ನಿಫಾ ವೈರಸ್‍ಗೆ ಸಂಬಂಧಿಸಿದಂತೆ ಇಂದು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಸರ್ಕಾರ ಇಂತಹ ತೀರ್ಮಾನ ಕೈಗೊಂಡಿದೆ. ನಿಫಾ ಪತ್ತೆಗಾಗಿ ರಾಜ್ಯ ಆರೋಗ್ಯ ಇಲಾಖೆ ರಚಿಸಿದ್ದ ಕ್ಷಿಪ್ರ ಪರಿಶೀಲನಾ ತಂಡ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಿದೆ. ಕೇರಳ ಭಾಗದಿಂದ ಆಗಮಿಸಿದವರನ್ನು ತಪಾಸಣೆಗೆ ಒಳಪಡಿಸಿದ್ದು, ಈವರೆಗೂ ಯಾವುದೇ ಪ್ರಕರಣ ವರದಿಯಾಗಿಲ್ಲ. ಕೇರಳದಿಂದ ಬಂದವರು ಹೆಚ್ಚಾಗಿ ವಾಸಿಸುವ ಪ್ರದೇಶಗಳ ಬಗ್ಗೆ ಆಶಾ ಕಾರ್ಯಕರ್ತರು ನಿಗಾ ಇಡಲಿದ್ದಾರೆ. ಅವರಲ್ಲಿ ಯಾರಿಗಾದರೂ ಅನಾರೋಗ್ಯ ಸಮಸ್ಯೆ ಕಂಡುಬಂದರೆ ಕೂಡಲೇ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ನಿಫಾ ವೈರಸ್ ಭೀತಿಯ ಕುರಿತು ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ, ಈಗಾಗಲೇ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಅದರದೇ ಒಂದು ಭಾಗವಾಗಿ ರಾಜಧಾನಿ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ನಿಫಾ

ಮುನ್ನೆಚ್ಚರಿಕೆ ಮತ್ತು ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್‍ಗಳನ್ನು ನಿರ್ಮಿಸಲು ಸೂಚಿಸಲಾಗಿದೆ. ಈಗಾಗಲೇ ಬೆಂಗಳೂರಿನ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸ್ ಕೇಂದ್ರ, ಕೆಸಿ ಜನರಲ್ ಆಸ್ಪತ್ರೆ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳು ಪ್ರತ್ಯೇಕ ವಾರ್ಡ್‍ಗಳನ್ನು ಹೊಂದಿವೆ. ನಿಫಾ ವೈರಾಣು ಬಗ್ಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಮೇ 24ರಂದು ಆಯಾ ಜಿಲ್ಲಾ ಕೇಂದ್ರದಲ್ಲಿ ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಅರಣ್ಯ ಇಲಾಖೆ, ಪಶುಸಂಗೋಪನಾ ಇಲಾಖೆ, ಅಬಕಾರಿ ಇಲಾಖೆ ಸೇರಿದಂತೆ ನಗರದ ಎಲ್ಲ ಸಾರ್ವ ಜನಿಕ ಆಸ್ಪತ್ರೆಗಳ ಅಧೀಕ್ಷಕರು, ಭಾರತೀಯ ವೈದ್ಯಕೀಯ ಸಂಘ ಮತ್ತು ಭಾರತೀಯ ಮಕ್ಕಳ ವೈದ್ಯ ಸಂಘದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರಿನಲ್ಲಿ ಶಂಕಿತ ನಿಫಾ ವೈರಸ್ ಪ್ರಕರಣ ಕಂಡು ಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಗಡಿ ಭಾಗಗಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಿ, ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವಂತೆ ಸೂಚಿಸಿದೆ.

ನಿಫಾ ವೈರಾಣು ಸಾಂಕ್ರಾಮಿಕವಲ್ಲ

ನವದೆಹಲಿ: ಕೇರಳದಲ್ಲಿ 11 ಜನರನ್ನು ಬಲಿ ಪಡೆದಿರುವ ನಿಫಾ ವೈರಾಣು ಸಾಂಕ್ರಾಮಿಕ ರೋಗವಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿದ್ದಾರೆ.

ಡಾಕ್ಟರನ್ನೊಳಗೊಂಡ ಕೇಂದ್ರ ತಂಡ ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಹತ್ತಿರದಿಂದಲೇ ಗಮನಿಸುತ್ತಿದೆ. ಇದು ಸ್ಥಳೀಯವಾಗಿದ್ದು, ಸಾಂಕ್ರಾಮಿಕ ರೋಗವಲ್ಲ, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಜನರು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಅವರು ತಿಳಿಸಿದ್ದಾರೆ. ಕೇರಳದಲ್ಲಿನ ಮಾರಣಾಂತಿಕ ವೈರಾಣುವಿಂದಾಗಿ 11 ಮಂದಿ ಮೃತಪಟ್ಟಿದ್ದಾರೆ. ರಾಜ್ಯಕ್ಕೆ ಆಗಮಿಸುತ್ತಿರುವ ಪ್ರವಾಸಿಗರಿಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಸಲಹೆ ನೀಡಲಾಗುತ್ತಿದೆ. ಕೋಝಿಕೊಡು, ಮಲ್ಲಪುರಂ, ವೈನಾಡು ಮತ್ತು ಕಣ್ಣೂರು ಜಿಲ್ಲೆಗಳಿಗೆ ಪ್ರವಾಸಕ್ಕೆ ತೆರಳುವವರು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡುತ್ತಿದ್ದಾರೆ.

Translate »