ಮೈಸೂರು,ಸೆ.27- ಬಂಡಿಪುರ ಹುಲಿ ಮೀಸಲು ಅರಣ್ಯದಲ್ಲಿ ಹಾದುಹೋಗಿ ರುವ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಇದು ಪರಿಸರವಾದಿಗಳಿಗೆ ನೆಮ್ಮದಿ ತಂದಿದೆ.
ಕೇರಳದ ವಯನಾಡ್ ಮತ್ತು ಮೈಸೂ ರನ್ನು ಸಂಪರ್ಕಗೊಳಿಸುವ ಹೆದ್ದಾರಿ ಯಲ್ಲಿ ರಾತ್ರಿ ಸಂಚಾರ ನಿಷೇಧ ಸಡಿಲಿಸು ವಂತೆ ಸಾಕಷ್ಟು ಒತ್ತಡ ಬಂದಿತ್ತು. ಆದರೆ, ಕೇಂದ್ರ ಸರ್ಕಾರ ಈ ಒತ್ತಡಕ್ಕೆ ಮಣಿದಿಲ್ಲ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕೇಂದ್ರ ಸಚಿವ ಪ್ರಕಾಶ್ ಜಾವೇಡ್‍ಕರ್ ಅವರು ಸೆ.17ರಂದು ಕೇರಳ ಮುಖ್ಯಮಂತ್ರಿ ಪಿಣ ರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದು, ಬಂಡಿಪುರ ಅರಣ್ಯ ಪ್ರದೇಶದಲ್ಲಿನ ಹೆದ್ದಾರಿ ಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಈಗಿರುವಂತೆಯೇ ಮುಂದುವರಿಯ ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಸಹ ಈ ಮಾರ್ಗದಲ್ಲಿ ರಾತ್ರಿ ಸಂಚಾರ ನಿಷೇಧಿಸಿ ಆಗಸ್ಟ್‍ನಲ್ಲಿಯೇ ಆದೇಶ ಹೊರಡಿಸಿತ್ತು.
ರಾಷ್ಟ್ರೀಯ ಹೆದ್ದಾರಿ 212ರಲ್ಲಿ, ಅರಣ್ಯ ದಲ್ಲಿ ಸಾಗಿ ಹೋಗಿರುವ 25 ಕಿ.ಮೀ. ಉದ್ದದ ರಸ್ತೆಯಲ್ಲಿ ಮೇಲು ಸೇತುವೆಯ ನ್ನಾದರೂ ನಿರ್ಮಿಸುವಂತೆ ಕೇರಳ ಸರ್ಕಾರ ಒತ್ತಾಯಿಸುತ್ತಿದೆ.
ಸದ್ಯ ಸೀಮಿತ ಸಂಖ್ಯೆಯ ಸರ್ಕಾರಿ ಬಸ್ ಗಳು ಮತ್ತು ತುರ್ತು ವಾಹನಗಳು ಮಾತ್ರವೇ ಈ ಮಾರ್ಗದಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗಿನ ನಿರ್ಬಂಧಿತ ಅವಧಿಯಲ್ಲಿ ಸಂಚ ರಿಸಲು ಅನುಮತಿ ನೀಡಲಾಗಿದೆ. ಉಳಿದ ವಾಹನಗಳು ಹುಣಸೂರು, ಗೋಣಿಕೊಪ್ಪ -ಕುಟ್ಟಾ-ಮಾನಂದವಾಡಿ ಮಾರ್ಗವಾಗಿ ಸುಮಾರು 30 ಕಿಲೋಮೀಟರ್ ದೂರ ಬಳಸಿಕೊಂಡು ಸಂಚರಿಸಬೇಕಾಗಿದೆ.
ಈ ನಿರ್ಬಂಧಿತ ಮಾರ್ಗದಲ್ಲಿ ಭಾರತ್ ಮಾಲ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಎಲಿವೇಟೆಡ್ ಕಾರಿ ಡಾರ್ ನಿರ್ಮಿಸಬಹುದು ಎಂಬ ಸಲಹೆ ಯನ್ನು ಕೇಂದ್ರ ಸರ್ಕಾರ ಈ ಮೊದಲು ನೀಡಿತ್ತು. ಬಳಿಕ ಮಂತ್ರಿಮಂಡಲದಲ್ಲಿ ವಿಸ್ತøತ ಚರ್ಚೆಗಳು ನಡೆದು ಮತ್ತು ಸುಪ್ರೀಂ ಕೋರ್ಟ್ ಆದೇಶವೂ ಬಂದಿದ್ದರಿಂದ ನಂತರ ಈ ಸಲಹೆಯನ್ನು ಕೇಂದ್ರ ಸರ್ಕಾರ ಕೈಬಿಟ್ಟಿತು.
ರಾತ್ರಿ ಸಂಚಾರ ನಿಷೇಧಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಕೇಂದ್ರ ಸಚಿವ ಜಾವಡೇಕರ್ ಅವರಿಗೆ ಪತ್ರ ಬರೆದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜ ಯನ್, ಈ ಹೆದ್ದಾರಿ ವಯನಾಡ್, ಕೊಜಿ ಕ್ಕೋಡ್ ಮತ್ತು ಮಲ್ಲುಪುರಂ ಜಿಲ್ಲೆಗಳ ನಿವಾಸಿಗಳಿಗೆ ಬಹಳ ಪ್ರಯೋಜನಕಾರಿ ಯಾಗಿದೆ. ಹಾಗಾಗಿ ಈ ಮಾರ್ಗದಲ್ಲಿ ಎಲಿ ವೇಟೆಡ್ ಹೈವೇ (ಮೇಲು ರಸ್ತೆ) ನಿರ್ಮಾ ಣಕ್ಕೆ ಕೇಂದ್ರ ಸರ್ಕಾರ ಅರ್ಧದಷ್ಟು ಧನ ಸಹಾಯ ನೀಡಿದರೆ ಉಳಿದ ಹಣವನ್ನು ಕರ್ನಾಟಕ-ಕೇರಳ ಭರಿಸುತ್ತವೆ ಎಂದು ಹೇಳಿದ್ದರು. ಇದೇ ವಿಚಾರವಾಗಿ ಕೇರಳ ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ನೇತೃತ್ವದ ನಿಯೋಗ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದಾರೆ ಎಂದೂ ಹೇಳಿದ್ದರು.
ಬಳಿಕ ಸೆ.17ರಂದು ಕೇಂದ್ರ ಸಚಿವ ಜಾವ ಡೇಕರ್ ಅವರು ಬರೆದ ಪತ್ರ ಸೆ.21ರಂದು ಕೇರಳ ಸಿಎಂ ಕಚೇರಿಗೆ ತಲುಪಿತು. ಅದರಲ್ಲಿ ಜಾವಡೇಕರ್ ಅವರು, `ನಿಮ್ಮ ಪತ್ರದ ವಿಚಾರವಾಗಿ ಕೇಂದ್ರ ಸಂಪುಟ ಕಾರ್ಯ ದರ್ಶಿಗಳ ಸಮಿತಿಯಲ್ಲಿ ಈಗಾಗಲೇ ಸುದೀರ್ಘ ಚರ್ಚೆ ನಡೆಸಲಾಗಿದೆ. ಆದರೆ, ಬಂಡೀಪುರ ಹುಲಿ ಸಂರಕ್ಷಣಾ ಅರಣ್ಯದ ಮೂಲಕ ರಾತ್ರಿ ವಾಹನ ಸಂಚಾರ ನಿಷೇಧ ವನ್ನು ಯಥಾಸ್ಥಿತಿ ಕಾಯ್ದಕೊಳ್ಳಲಾಗಿದೆ. ಹೇಗಿದ್ದರೂ ರಾತ್ರಿ ಸಂಚಾರಕ್ಕೆ ಪರ್ಯಾಯ ಮಾರ್ಗ ಇದ್ದೇ ಇದೆ. ಅಲ್ಲದೆ, ಪರಿಸರ ವಿಜ್ಞಾನದ ದೀರ್ಘಕಾಲೀನ ಉಳಿವು ಮತ್ತು ಹುಲಿಗಳ ಆವಾಸ ಸ್ಥಾನದ ಸಂರಕ್ಷ ಣೆಯನ್ನು ಗಮನದಲ್ಲಿರಿಸಿಕೊಂಡೇ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಸ್ಪಷ್ಟಪಡಿಸಿ ದ್ದರು. ಇತ್ತೀಚೆಗೆ, ವಯನಾಡ್ ಸಂಸದ ರಾಹುಲ್ ಗಾಂಧಿ, ಅರಣ್ಯದೊಳಗಿನ ಹೆದ್ದಾರಿಯಲ್ಲಿನ ರಾತ್ರಿ ವಾಹನ ಸಂಚಾರ ನಿರ್ಬಂಧವನ್ನು ಸಡಿಲಗೊಳಿಸುವಂತೆ ಒತ್ತಾಯಿಸಿದ್ದರು. ಅವರ ಈ ಟ್ವೀಟ್ ವನ್ಯಜೀವಿ ಸಂರಕ್ಷಕರು, ಪರಿಸರವಾದಿ ಗಳ ತೀವ್ರ ಟೀಕೆಗೆ ಗುರಿಯಾಗಿತ್ತು.
ವಯನಾಡ್ ಬಂದ್: ಮದ್ದೂರು ಚೆಕ್‍ಪೋಸ್ಟ್ ಬಳಿ ಸಾಲುಗಟ್ಟಿದ್ದ ವಾಹನಗಳು
ಗುಂಡ್ಲುಪೇಟೆ,ಸೆ.27- ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧವನ್ನು ವಿರೋಧಿಸಿ ಕೇರಳದ ವಯನಾಡ್ ಜಿಲ್ಲೆಯಲ್ಲಿ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಗುರುವಾರ ಬಂದ್ ನಡೆಸಿದರು.
ಈ ಹಿನ್ನೆಲೆಯಲ್ಲಿ ಕರ್ನಾಟಕದ ಅರಣ್ಯ ಇಲಾಖೆಯು ವಾಹನಗಳು ಕೇರಳದತ್ತ ತೆರಳಲು ಗುರುವಾರ ಅವಕಾಶ ನೀಡದ ಕಾರಣ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಚೆಕ್‍ಪೋಸ್ಟ್ ಬಳಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಟ್ರಕ್, ಬಸ್ ಮತ್ತಿತರೆ ವಾಹನಗಳು ಚೆಕ್‍ಪೋಸ್ಟ್‍ನಿಂದ ಕಗ್ಗಲಹುಂಡಿವರೆಗೂ ಸಾಲುಗಟ್ಟಿದ್ದವು. ಗುರುವಾರ ಮಧ್ಯಾಹ್ನ ಬಂದ್ ಕೊನೆಗೊಂಡು ವಯನಾಡಿನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕವಷ್ಟೇ ಮಧ್ಯಾಹ್ನ 3ರ ನಂತರ ವಾಹನ ಸಂಚಾರಕ್ಕೆ ಅನುಮತಿ ನೀಡಲಾಯಿತು.