ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಮೈಸೂರು ದಸರಾ ಕಲಾವೈಭವ
ಮೈಸೂರು

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಮೈಸೂರು ದಸರಾ ಕಲಾವೈಭವ

September 28, 2019

ಮೈಸೂರು, ಸೆ.27(ಎಸ್‍ಬಿಡಿ)- ದಸರಾ ಮಹೋತ್ಸವದ ಪ್ರಯುಕ್ತ ರಿಂಗ್ ರಸ್ತೆಯಲ್ಲಿರುವ ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನಲ್ಲಿ ಏರ್ಪಡಿಸಿರುವ `ಮೈಸೂರು ದಸರಾ ಕಲಾವೈಭವ’ಕ್ಕೆ ಶುಕ್ರವಾರ ಚಾಲನೆ ದೊರಕಿತು.

ರಾಜ್ಯ ಬೃಹತ್ ಮತ್ತು ಮೆಗಾ ಕೈಗಾರಿಕಾ ನಿರ್ದೇಶನಾಲಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದೊಂದಿಗೆ ಇಂದಿ ನಿಂದ ಅ.7ರವರೆಗೆ ಏರ್ಪಡಿಸಿರುವ ಜಿಲ್ಲಾ ಮಟ್ಟದ ಗುಡಿ ಕೈಗಾರಿಕೆಗಳ ವಸ್ತು ಪ್ರದರ್ಶನ ಮತ್ತು ಮಾರಾಟ `ಮೈಸೂರು ದಸರಾ ಕಲಾವೈಭವ’ಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಸುತ್ತೂರುಶ್ರೀಗಳ ದೂರದೃಷ್ಟಿಯ ಫಲವಾಗಿ ಅರ್ಬನ್ ಹಾತ್ ಅರ್ಥಾತ್ ನಗರ ಸಂತೆ ನಿರ್ಮಾಣವಾಗಿದೆ. ದಸರಾ ಸಂದರ್ಭ ದಲ್ಲಿ ಆಯೋಜಿಸಿರುವ ಮೇಳದಲ್ಲಿ ಸುಮಾರು 60ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕರಕುಶಲ, ಗುಡಿ ಕೈಗಾರಿಕೆಗಳ ಉತ್ಪನ್ನಗಳು ಮಾರಾಟಕ್ಕಿವೆ. ಮೈಸೂರಿನ ನಿವಾಸಿಗಳು ಹಾಗೂ ದೇಶ-ವಿದೇಶದಿಂದ ದಸರೆಗೆ ಬರುವ ಪ್ರವಾಸಿಗರು ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ ಒಂದಾದರೂ ವಸ್ತು ಕೊಂಡರೆ ಗ್ರಾಮೀಣ ಹಾಗೂ ಗುಡಿ ಕೈಗಾರಿಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ವಿನಂತಿ ಮಾಡಿಕೊಳ್ಳುತ್ತೇನೆ. ಅಗತ್ಯ ಅತ್ಯು ತ್ತಮ ವಸ್ತುಗಳು ಇಲ್ಲಿ ಮಾರಾಟಕ್ಕಿವೆ. ನಾನೂ ಸಹ ಕುಟುಂಬದೊಂದಿಗೆ ಮತ್ತೆ ಭೇಟಿ ನೀಡುತ್ತೇನೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಕಾರ್ಯದರ್ಶಿ ಎಂ. ರಾಜೇಂದ್ರ, ಜೆಎಸ್‍ಎಸ್ ಮಹಾವಿದ್ಯಾ ಪೀಠದ ಮುಖ್ಯ ಕಾರ್ಯ ನಿರ್ವಾಹಣಾ ಧಿಕಾರಿ ಡಾ.ಸಿ.ಜಿ.ಬೆಟಸೂರಮಠ, ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ರಂಗನಾಥಯ್ಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜನಾರ್ಧನ್, ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್ ಯೋಜನಾಧಿ ಕಾರಿ ಎಂ.ಶಿವಾನಂದ ಸ್ವಾಮಿ, ಸಂಯೋಜನಾ ಧಿಕಾರಿ ರಾಕೇಶ್ ರೈ, ಅನಿರುದ್, ಪದ್ಮ ನಾಭ್ ಮತ್ತಿತರರು ಉಪಸ್ಥಿತರಿದ್ದರು.

11 ದಿನ ಕಲಾವೈಭವ: ದಸರಾ ಸಂದರ್ಭದ 11 ದಿನಗಳ ಕಲಾ ವೈಭವದಲ್ಲಿ ಗ್ರಾಮೀಣ ಕರಕುಶಲ, ಕೈಮಗ್ಗ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಾಗಲಿವೆ. ಸಣ್ಣ ಹಾಗೂ ಗುಡಿ ಕೈಗಾರಿಕೆಗಳು, ಸ್ವಸಹಾಯ ಸಂಘ ಗಳು, ಖಾದಿ ಗ್ರಾಮೋದ್ಯೋಗ, ಸ್ವಯಂ ಉದ್ಯೋಗಿಗಳು, ಕುಶಲಕರ್ಮಿಗಳು, ಕೈಮಗ್ಗ ನೇಕಾರರ ಸಹಕಾರ ಸಂಘಗಳ ಮೂಲಕ ತಯಾರಿಸಿರುವ ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನು ಕೊಳ್ಳಬಹುದಾ ಗಿದೆ. ಆಕರ್ಷಕ ಕರಕುಶಲ ವಸ್ತುಗಳು, ಕೈಮಗ್ಗದ ರೇಷ್ಮೆ, ಕಾಟನ್ ಸೀರೆಗಳು, ಹೊದಿಕೆಗಳು, ವಿವಿಧ ಲೋಹ, ಜರಿ ಕಸೂತಿ ವಸ್ತ್ರಗಳು, ಸಿದ್ಧ ಉಡುಪುಗಳು, ಮೇಲು ಹೊದಿಕೆಗಳು, ಬ್ಯಾಗು, ಕೃತಕ ಆಭರಣಗಳು, ಶಿಲ್ಪಗಳು, ಕುಂಬಾರಿಕೆ, ಚರ್ಮ, ಮರಗಳಿಂದ ತಯಾರಿಸಿದ ಅಲಂಕಾರಿಕ ವಸ್ತುಗಳು ಹಾಗೂ ಆಟಿಕೆಗಳು, ಮಣ್ಣಿನ ಹೂಕುಂಡಗಳು, ಹೂಜಿಗಳು, ಆಯುರ್ವೇದ ಹಾಗೂ ಗಿಡ ಮೂಲಿಕೆ ಔಷಧಿಗಳು, ಉತ್ತರ ಕರ್ನಾ ಟಕದ ರುಚಿಕರ ತಿಂಡಿ-ತಿನಿಸು, ಹೀಗೆ ವೈವಿಧ್ಯ ವಸ್ತುಗಳನ್ನು ಕೊಳ್ಳಬಹುದಾಗಿದೆ.

ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಅರ್ಬನ್ ಹಾತ್‍ಗೆ ಭೇಟಿ ನೀಡಿ, `ಮೈಸೂರು ದಸರಾ ಕಲಾವೈಭವ’ದಲ್ಲಿ ಭಾಗಿಯಾಗಿ, ತಮಗೆ ಬೇಕಾದ ವಸ್ತುಗಳನ್ನು ಖರೀದಿಸ ಬಹುದು. ಜಿಲ್ಲಾಡಳಿತ ಹಾಗೂ ಪ್ರವಾ ಸೋದ್ಯಮ ಇಲಾಖೆ ಸಹಯೋಗದಲ್ಲಿ ಸೆ.30ರಿಂದ  ಅ.7ರವರೆಗೆ ಪ್ರತಿದಿನ ಸಂಜೆ ದಸರಾ ಸಾಂಸ್ಕøತಿಕ ಕಾರ್ಯಕ್ರಮ   ವನ್ನು ಆಯೋಜಿಸಿರುವುದು ಮತ್ತೊಂದು ವಿಶೇಷವಾಗಿದೆ.

ಮೈಸೂರಿನ 180ಕ್ಕೂ ಅಧಿಕ ಪಾರಂಪರಿಕ ಕಟ್ಟಡ  ಸಂರಕ್ಷಣೆಗೆ ನೆರವಾಗಲು ಕೇಂದ್ರಕ್ಕೆ ಮನವಿ

ಮೈಸೂರು: ಮೈಸೂರು ನಗರದಲ್ಲಿರುವ 180ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕೇಂದ್ರಕ್ಕೆ ಮನವಿ ಮಾಡಿರುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.ಮೈಸೂರಿನ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ `ಮೈಸೂರು ದಸರಾ ಕಲಾವೈಭವ’ ವಸ್ತು ಪ್ರದರ್ಶನ ಹಾಗೂ ಮಾರಾಟಕ್ಕೆ ಚಾಲನೆ ನೀಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪಾರಂಪರಿಕ ನಗರಿ ಮೈಸೂರಿನಲ್ಲಿರುವ ನೂರಾರು ವರ್ಷಗಳ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ, ಉಳಿವಿಗೆ ಸರ್ಕಾರ ಬದ್ಧವಾಗಿದೆ. ಇಲ್ಲಿರುವ 180ಕ್ಕೂ ಹೆಚ್ಚು ಕಟ್ಟಡಗಳ ಸಂರಕ್ಷಣೆಗೆ ಅನುದಾನ ನೀಡುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಪ್ರಹ್ಲಾದ್ ಸಿಂಗ್ ಪಟೇಲ್ ಅವರಲ್ಲಿ ಮನವಿ ಮಾಡಿದ್ದೇನೆ. ಈ ಸಂಬಂಧ ಶೀಘ್ರ ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರಸಾದಂ ಯೋಜನೆಯಡಿ ಚಾಮುಂಡಿಬೆಟ್ಟಕ್ಕೆ ಈಗಾಗಲೇ ಕಳೆದ ವರ್ಷ 50 ಕೋಟಿ ರೂ. ಅನುದಾನ ಕೊಡಲಾಗಿದ್ದು, ಅಗತ್ಯವಿರುವ ಮತ್ತಷ್ಟು ಅನುದಾನ ನೀಡು ವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದರು.

ದಸರಾ ವಿಶೇಷ: ಮೈಸೂರು ದಸರಾ ಪ್ರಯುಕ್ತ ಈ ಬಾರಿ ರಾಮನಗರ ಹಾಗೂ ಮಂಡ್ಯದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಪ್ರವಾಸಿಗರಿಗೆ ರಾಮನಗರದಲ್ಲಿ `ಸ್ಥಳೀಯ ಖಾದ್ಯ(ನೇಟಿವ್ ಫುಡ್)ಸಂಸ್ಕೃತಿ’ ಪರಿಚಯ ಮಾಡಲಿದ್ದೇವೆ. ತಟ್ಟೆ ಇಡ್ಲಿ, ರಾಗಿಮುದ್ದೆ, ಉಪ್ಪುಸಾರು ಇನ್ನಿತರ ದೇಸಿ ಆಹಾರ ವನ್ನು ಸವಿಯಬಹುದಾಗಿದೆ ಎಂದರು. ಹಾಗೆಯೇ ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ಸಮೀಪವಿರುವ ಶ್ರೀನಿವಾಸ ಅಗ್ರಹಾರ ಗ್ರಾಮದಲ್ಲಿ ಕೃಷಿ ಸಂಸ್ಕೃತಿ, ಗ್ರಾಮೀಣ ಬದುಕಿನ ಪರಿಚಯ ಮಾಡಲಾಗುವುದು. ಇದಕ್ಕಾಗಿ ಅಲ್ಲಿನ ಜಿಲ್ಲಾಡಳಿತ ಐದಾರು ತೊಟ್ಟಿ ಮನೆಗಳು, ಸಹಜ, ಸಾವಯವ ಕೃಷಿ ಇರುವ ಆ ಗ್ರಾಮದಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಆಲೆಮನೆ, ಬೆಲ್ಲದಚ್ಚು ಪರಿಚಯದ ಜೊತೆಗೆ ಎತ್ತಿನಗಾಡಿ ಓಡಿಸುವುದು, ಜಮೀನಿನಲ್ಲಿ ಕೃಷಿ ಮಾಡುವುದು, ಕುರಿ ಕಾಯುವ ಕಾಯಕದ ಮೂಲಕ ಪ್ರವಾಸಿಗರು ಗ್ರಾಮೀಣ ಬದುಕಿನ ಅನುಭವ ಪಡೆಯಬಹುದು. ತೊಟ್ಟಿ ಮನೆಯಲ್ಲಿ ಫೋಟೋ, ವೀಡಿಯೋ ಚಿತ್ರೀಕರಣಕ್ಕೆ ಕನಿಷ್ಠ ಶುಲ್ಕ ಸಂಗ್ರಹಿಸಿ, ರೈತರಿಗೆ ನೀಡಲಾಗುತ್ತದೆ. ಪ್ರವಾಸಿಗರಿಗೆ ಹೊಸತನ ಕಲ್ಪಿಸುವುದರ ಜೊತೆಗೆ ಪ್ರವಾಸಿಗರಿಗೆ ಗ್ರಾಮೀಣ ಜೀವನಾನುಭವ ಪರಿಚಯಿಸಿ, ರೈತರಿಗೂ ನೆರವಾಗುವುದು ಇದರ ಉದ್ದೇಶವಾಗಿದೆ ಎಂದು ಸಿ.ಟಿ.ರವಿ ತಿಳಿಸಿದರು.

ದಸರೆಗೆ ಪೂರ್ವ ಪ್ರಚಾರ: ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ದಸರಾ ಸಿದ್ಧತೆ ಪೂರ್ಣಗೊಂಡಿದೆ. ಪಂಚಾಂಗದಂತೆ ದಸರಾ ದಿನಾಂಕ ಮುಂಚಿತವಾಗಿಯೇ ತಿಳಿದಿರುತ್ತದೆ.  ಹಾಗಾಗಿ ಆರೇಳು ತಿಂಗಳ ಪೂರ್ವದಲ್ಲೇ ದೇಶ-ವಿದೇಶದಲ್ಲಿ ಪ್ರಚಾರ ಮಾಡಬೇಕು. ಆಗ ಪ್ರವಾಸಿಗರು ಮೈಸೂರಿಗೆ ಬರಲು ಯೋಜನೆ ರೂಪಿಸಿಕೊಳ್ಳಲು ಸಹಕಾರವಾಗುತ್ತದೆ. ರಾಜ್ಯ ಹಾಗೂ ದೇಶದಲ್ಲಿ ಪ್ರವಾಸಿ ತಾಣಗಳು ಅಪಾರವಾಗಿವೆ. ನಾವು ನಿರ್ಮಿಸುವ ಅಗತ್ಯವಿಲ್ಲ. ಇರುವುದರ ಬಗ್ಗೆ ಪ್ರಚಾರ ಮಾಡಿ, ಪ್ರವಾಸಿಗರಿಗೆ ತಿಳಿಸಿದರೆ ಸಾಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

 

Translate »