ಸಿದ್ದರಾಮಯ್ಯ ಬಜೆಟ್‍ನಲ್ಲಿ ಭ್ರಷ್ಟಾಚಾರ: ಆರೋಪ ಸದನ ಸಮಿತಿ ರಚಿಸಲು ಬಿಜೆಪಿ ಒತ್ತಾಯ
ಮೈಸೂರು

ಸಿದ್ದರಾಮಯ್ಯ ಬಜೆಟ್‍ನಲ್ಲಿ ಭ್ರಷ್ಟಾಚಾರ: ಆರೋಪ ಸದನ ಸಮಿತಿ ರಚಿಸಲು ಬಿಜೆಪಿ ಒತ್ತಾಯ

December 9, 2018

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಮಂಡಿಸಿರುವ ಬಜೆಟ್‍ನಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಿಎಜಿ ವರದಿಯಲ್ಲಿ ಉಲ್ಲೇಖಿಸಿದ್ದು, ರಾಜ್ಯ ಸರ್ಕಾರ ಕೂಡಲೇ ಸದನ ಸಮಿತಿ ರಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ, ವಿವಿಧ ಇಲಾಖೆ ಗಳ ಸುಮಾರು 37 ಸಾವಿರ ಕೋಟಿ ರೂ. ವೆಚ್ಚಕ್ಕೆ ಲೆಕ್ಕವೇ ಸಿಗುತ್ತಿಲ್ಲ, ಇದರಲ್ಲಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ ಎಂದು ಸಿಎಜಿ ವರದಿಯಲ್ಲಿ ಹೇಳಿದೆ ಎಂದರು.

ಬಜೆಟ್ ಗಾತ್ರ ಹೆಚ್ಚಾದಂತೆ ವ್ಯತ್ಯಾಸ ಸಹಜ ಎಂದು ಸಿದ್ದರಾಮಯ್ಯ ಉಡಾಫೆ ಮಾತುಗಳನ್ನು ಆಡುತ್ತಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಅವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು. 13 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಸಿಎಜಿ ವರದಿ ಬಗ್ಗೆ ಲಘುವಾಗಿ ಮಾತ ನಾಡುವುದು ಸರಿಯಲ್ಲ. ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ಯಾವ ಕಾರಣಕ್ಕೆ ಸಿಟ್ಟು ಬರುತ್ತಿದೆಯೋ ಗೊತ್ತಿಲ್ಲ. ಮಾಧ್ಯಮದವರನ್ನು ಕಂಡರೆ ಉರಿದು ಬೀಳುತ್ತಾರೆ. ಸರ್ಕಾರವನ್ನು ಟೀಕಿಸುವ ಪ್ರತಿಪಕ್ಷಗಳನ್ನು ಸಹಿಸುವುದಿಲ್ಲ.

ರಾಜ್ಯಕ್ಕೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ ಸಂಸದರು ಅಂಕಿ- ಅಂಶಗಳನ್ನು ನೀಡಿದ್ದಾರೆ. ವಿವಿಧ ಬಾಬ್ತಿನಡಿ ಸುಮಾರು 6 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ, ಕರ್ನಾಟಕ ವಿಷಯದಲ್ಲಿ ಕೇಂದ್ರ ಮಲತಾಯಿ ಧೋರಣೆ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು. ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಕುರಿತ ಸಮೀಕ್ಷೆಗಳಿಗೆ ಪ್ರತಿಕ್ರಿಯಿಸುವುದಿಲ್ಲ, ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂದು ಇವೇ ಸಮೀಕ್ಷೆಗಳು ಹೇಳಿದ್ದವು. ಕಾಂಗ್ರೆಸ್ ಗೆದ್ದರೆ ಜನಾದೇಶ, ಬಿಜೆಪಿ ಗೆದ್ದರೆ ಇವಿಎಂ ದೋಷ, ಇದು ಕಾಂಗ್ರೆಸ್‍ನ ಹಣೆಬರಹ ಎಂದು ಸಿ.ಟಿ.ರವಿ ಕುಹಕವಾಡಿದರು.

Translate »