ನಾಳೆಯಿಂದ ಬೆಳಗಾವಿ ಅಧಿವೇಶನ: ಜನಪರ ಚಿಂತನೆಗಿಂತ ಸರ್ಕಾರ ಉರುಳಿಸುವ, ಉಳಿಸಿಕೊಳ್ಳುವ ಕಸರತ್ತಿಗೆ ಮೀಸಲು ಸಾಧ್ಯತೆ
ಮೈಸೂರು

ನಾಳೆಯಿಂದ ಬೆಳಗಾವಿ ಅಧಿವೇಶನ: ಜನಪರ ಚಿಂತನೆಗಿಂತ ಸರ್ಕಾರ ಉರುಳಿಸುವ, ಉಳಿಸಿಕೊಳ್ಳುವ ಕಸರತ್ತಿಗೆ ಮೀಸಲು ಸಾಧ್ಯತೆ

December 9, 2018

ಬೆಂಗಳೂರು: ಬೆಳಗಾವಿ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಜನಪರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕಿಂತ ಸರ್ಕಾರ ಉರುಳಿಸಲು ಮತ್ತು ಅಧಿಕಾರ ಉಳಿಸಿಕೊಳ್ಳುವತ್ತ ಹೆಚ್ಚು ಕಸರತ್ತು ನಡೆಯುವ ಸಾಧ್ಯತೆ ಇದೆ.

ಸೋಮವಾರ ದಿಂದ ಆರಂಭವಾಗಲಿರುವ ಅಧಿವೇಶನ ಸಂದರ್ಭದಲ್ಲೇ ಕಾಂಗ್ರೆಸ್‍ನ ಕೆಲವು ಶಾಸಕರಿಂದ ರಾಜೀನಾಮೆ ಕೊಡಿಸುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನಗೊಳಿಸಲು ಬಿಜೆಪಿ ಭಾರೀ ತಂತ್ರವನ್ನೆ ರೂಪಿಸಿದೆ. ಇದರ ಸುಳಿ ವರಿತ ಮುಖ್ಯಮಂತ್ರಿ ಅವರು, ತಮ್ಮ ಪಕ್ಷದವರಿರಲಿ, ಕಾಂಗ್ರೆಸ್ ಶಾಸಕರನ್ನು ಮನವೊಲಿಸಿ ಹಿಡಿದಿಟ್ಟುಕೊಳ್ಳುವುದಕ್ಕೆ ತಮ್ಮೆಲ್ಲಾ ಶ್ರಮ ಬಳಸುತ್ತಿದ್ದಾರೆ. ಅಧಿವೇಶನ ಸಂದರ್ಭದಲ್ಲಿ ಸಭಾಧ್ಯಕ್ಷರು ಆಸೀನರಾಗಿದ್ದಾಗಲೇ ರಾಜೀ ನಾಮೆ ಕೊಡಿಸಿದರೆ, ಯಾವುದೇ ಕಾನೂನು ತಕರಾರು ಬರುವುದಿಲ್ಲ.

ಇದು ಸಾರ್ವಜನಿಕವಾಗಿಯೂ ಜಗಜ್ಜಾಹೀರಾತು ಆದಂತಾಗುತ್ತದೆ, ಇದರಿಂದ ಯಾರೂ ನುಣುಚಿಕೊಳ್ಳಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಅಧಿವೇಶನ ಮಧ್ಯೆಯೇ ಸರ್ಕಾರ ಪತನಗೊಳಿಸಿ, ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ದೊಡ್ಡ ಷಡ್ಯಂತ್ರವನ್ನೇ ರೂಪಿಸಿದೆ. ಇದನ್ನೇ ಆಧಾರ ವಾಗಿಟ್ಟುಕೊಂಡು ಪ್ರಕಾಶ್ ಜಾವ್ಡೇಕರ್, ಕರ್ನಾಟಕದಲ್ಲಿ ಡಿಸೆಂಬರ್ ಒಳಗೆ ಏನು ಬೇಕಾದರೂ ಆಗಬಹುದು ಎಂದು ಹೇಳಿಕೆ ನೀಡಿರುವುದು. ಇದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆ ಎಂದು ಕಾದು ನೋಡಬೇಕಿದೆ, ಇದರ ನಡುವೆಯೂ ಕೃಷಿಕನ ಸಮಸ್ಯೆ, ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲ, ಸರ್ಕಾ ರದ ತಾರತಮ್ಯ, ಮೇಕೆದಾಟು ಮತ್ತು ಕೃಷ್ಣರಾಜ ಅಣೆಕಟ್ಟೆ ಕೆಳಗಡೆ ಡಿಸ್ನಿಲ್ಯಾಂಡ್ ಮಾಡಲು ಹೊರಟಿರುವ ಬಗ್ಗೆಯೂ ಚರ್ಚೆ ನಡೆಯಲಿದೆ. ರೈತರ ಕೃಷಿ ಸಾಲ ಮನ್ನಾಗೆ ಸಂಬಂಧಿಸಿದಂತೆ ಸಮರ್ಪಕ ಪ್ರಮಾಣದ ಹಣ ಬಿಡುಗಡೆಯಾಗಿಲ್ಲ, ಕಬ್ಬು ಬೆಳೆಗಾರರ ಬಾಕಿ ವಿಷಯದಲ್ಲಿ ಸರ್ಕಾರದ ದಿವ್ಯ ನಿರ್ಲಕ್ಷ್ಯ, ಸಕ್ಕರೆ ಕಾರ್ಖಾನೆಗಳ ಮಾಲೀಕರ ಪರ ಸರ್ಕಾರ ಇದೆ ಎಂದು ಬಿಜೆಪಿ ಆರೋಪಿಸಲಿದೆ. ನಗರ ಪ್ರದೇಶಗಳಲ್ಲಿ ದಿನಕ್ಕೆರಡು ಗಂಟೆ, ಗ್ರಾಮೀಣ ಭಾಗದಲ್ಲಿ ದಿನಕ್ಕೆ ಆರರಿಂದ ಎಂಟು ಗಂಟೆ ವಿದ್ಯುತ್ ಕಡಿತವಾಗುತ್ತಿದೆ. ಸರ್ಕಾರದ ಖಜಾನೆ ಖಾಲಿಯಾ ಗಿದೆ, ಯೋಜನೆಗಳ ಕಾಮಗಾರಿ ನಡೆಸಿದವರು ಬರಬೇಕಾದ ಬಾಕಿ ಹಣಕ್ಕೆ ಪರದಾಡುವ ಸ್ಥಿತಿ ಸೃಷ್ಟಿ ಆಗಿದೆ. ಇದು ಸರ್ಕಾರದ ದಿವಾಳಿ ಸಂಕೇತವಾಗಿದೆ ಎಂದು ಬಿಜೆಪಿ ಟೀಕಿಸಲಿದೆ.

Translate »