ಸುವರ್ಣಸೌಧದಲ್ಲಿ ಸಿದ್ದರಾಮಯ್ಯ-ವಿಶ್ವನಾಥ್‍ಗೆ ಅಕ್ಕಪಕ್ಕದ ಆಸನ
ಮೈಸೂರು

ಸುವರ್ಣಸೌಧದಲ್ಲಿ ಸಿದ್ದರಾಮಯ್ಯ-ವಿಶ್ವನಾಥ್‍ಗೆ ಅಕ್ಕಪಕ್ಕದ ಆಸನ

December 11, 2018

ಬೆಳಗಾವಿ: ಇಂದಿನಿಂದ ಆರಂಭವಾದ ವಿಧಾನಮಂಡಲದ ಚಳಿಗಾಲದ ಅಧಿವೇಶನ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಲಿದೆ. ಒಂದು ಕಾಲದ ಆತ್ಮೀಯ ಮಿತ್ರರಾಗಿ ನಂತರ ರಾಜಕೀಯ ಕಾರಣಗಳಿಂದ ಬದ್ಧವೈರಿಗಳಾದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಅವರಿಗೆ ಅಕ್ಕಪಕ್ಕದ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಲಾಪದ ವೇಳೆ ಇವರಿಬ್ಬರೂ ಅಕ್ಕಪಕ್ಕ ಕೂರಲಿ ದ್ದಾರೆಯೇ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರಿಗೆ 37 ಮತ್ತು ವಿಶ್ವನಾಥ್ ಅವರಿಗೆ 38ನೇ ನಂಬರಿನ ಸೀಟುಗಳನ್ನು ಮೀಸಲಿರಿಸಲಾಗಿದೆ.

ಕಾಂಗ್ರೆಸ್‍ನಲ್ಲಿದ್ದ ಎಚ್.ವಿಶ್ವನಾಥ್ ಅವರನ್ನು ಸಿದ್ದರಾಮಯ್ಯ ಕಡೆಗಣಿಸಿದ್ದು ಎಲ್ಲರಿಗೂ ತಿಳಿದ ವಿಷಯ. ಇದರಿಂದ ಕೆರಳಿದ್ದ ವಿಶ್ವನಾಥ್ ಅವರು ಸಿದ್ದರಾಮಯ್ಯರನ್ನು ಕಾಂಗ್ರೆಸ್‍ಗೆ ಕರೆತಂದಿದ್ದು ನಾನೇ. ಇಂದು ನನ್ನನ್ನೇ ತೆರೆಮರೆಗೆ ಸರಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದರು. ನಂತರ ವಿಶ್ವನಾಥ್ ಕಾಂಗ್ರೆಸ್ ತೊರೆದು, ಜೆಡಿಎಸ್ ಸೇರ್ಪಡೆಗೊಂಡರು. ಇಬ್ಬರ ಸಂಬಂಧ ಮೊದಲಿಗಿಂತಲೂ ಹದಗೆಟ್ಟಿತು. ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿಗೆ ವಿಶ್ವನಾಥ್ ಅವರ ಸೇರ್ಪಡೆಗೂ ಸಿದ್ದ ರಾಮಯ್ಯ ವಿರೋಧ ವ್ಯಕ್ತಪಡಿಸಿದ್ದರು.
ಇಬ್ಬರೂ ಕುರುಬ ಸಮು ದಾಯದ ಮುಖಂಡರೇ ಆದರೂ, ಸಿದ್ದರಾಮಯ್ಯ ಅವರಿಗೆ ಸಿಗುವ ಗೌರವ ಸಮುದಾಯದಿಂದ ವಿಶ್ವನಾಥ್‍ಗೆ ಸಿಗುತ್ತಿಲ್ಲ. ಎದುರಿಗೆ ಸಿಕ್ಕರೂ ಒಬ್ಬರಿಗೊಬ್ಬರು ಮಾತನಾಡುವುದು ಇರಲಿ, ಪರಸ್ಪರ ಮುಖ ಕೂಡ ನೋಡುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಅಧಿವೇಶನದಲ್ಲಿ ಇವರಿಬ್ಬರಿಗೂ ಅಕ್ಕಪಕ್ಕದ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇದು ಸದನದ ನಿಯಮದಂತೆ ಮಾಡಲಾಗಿದೆಯೋ ಅಥವಾ ಇದರ ಹಿಂದೆ ಬೇರೆ ಉದ್ದೇಶ ಇದೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಆದರೆ, ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ಭಾಗಿಯಾಗುವುದು ಬಹುತೇಕ ಅನುಮಾನವಾಗಿದೆ. ಏಕೆಂದರೆ, ಅವರು ವಿದೇಶ ಪ್ರವಾಸಕ್ಕೆ ತೆರಳಿದ್ದು, ಒಂದು ವಾರದ ಬಳಿಕ ವಾಪಸ್ಸಾಗಲಿದ್ದಾರೆ. ಉಳಿಯುವ ಮೂರು ದಿನಗಳಲ್ಲಾದರೂ ಸಿದ್ದರಾಮಯ್ಯ ಅವರು ಕಲಾಪಕ್ಕೆ ಬರುತ್ತಾರಾ, ಇಲ್ಲವಾ ಎಂದು ಕಾದು ನೋಡಬೇಕು.

ಅಸಮಾಧಾನಿತ ಕಾಂಗ್ರೆಸ್ ಶಾಸಕರು ಹಾಜರು: ಸಂಪುಟ ವಿಸ್ತರಣೆ ಹಾಗೂ ವಿವಿಧ ಕಾರಣಗಳಿಂದ ಅಸಮಾಧಾನಗೊಂಡಿದ್ದ ಕಾಂಗ್ರೆಸ್‍ನ ಶಾಸಕರ ಗುಂಪನ್ನು ಮನವೊಲಿಸಿ ಅಧಿವೇಶನದಲ್ಲಿ ಭಾಗವಹಿಸುವಂತೆ ಮಾಡುವಲ್ಲಿ ಹಿರಿಯ ನಾಯಕರು ಯಶಸ್ವಿಯಾಗಿದ್ದಾರೆ. ಸಂಪುಟ ವಿಸ್ತರಣೆಯಿಂದ ಅಸಮಾಧಾನಗೊಂಡಿದ್ದ ಬಹಳಷ್ಟು ನಾಯಕರು ಅಧಿವೇಶನದಿಂದ ಹೊರಗುಳಿಯುವ ಮುನ್ಸೂಚನೆ ನೀಡಿದ್ದರು. ಇದು ಮೈತ್ರಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಪರಿಸ್ಥಿತಿ ನಿರ್ಮಿಸಿತ್ತು. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿದೇಶ ಪ್ರವಾಸ ಕೈಗೊಂಡಿದ್ದಾರೆ. ದಿನೇಶ್ ಗುಂಡೂರಾವ್ ಕೂಡ ಅಧಿವೇಶನದಲ್ಲಿ ಭಾಗವಹಿಸದೆ ವಿವಿಧ ಜಿಲ್ಲೆಗಳ ಪ್ರವಾಸದಲ್ಲಿ ತೊಡಗಿಸಿಕೊಂಡಿದ್ದರು. ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್ ಅವರು ಮೊದಲ ದಿನ ಅಧಿವೇಶನದಲ್ಲಿ ಭಾಗವಹಿಸಿರಲಿಲ್ಲ. ಈ ಎಲ್ಲಾ ಬೆಳವಣಿಗೆಗಳು ಸಮ್ಮಿಶ್ರ ಸರ್ಕಾರದ ಮೈತ್ರಿಯಲ್ಲಿ ಸಮಸ್ಯೆ ಇದೆ ಎಂಬುದನ್ನು ತೋರಿಸುತ್ತಿತ್ತು. ಅಧಿವೇಶನಕ್ಕೆ ಯಾರೂ ಗೈರು ಹಾಜರಾಗಬಾರದು ಎಂದು ಕಾಂಗ್ರೆಸ್ ಮುಖಂಡರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿವೇಶನದಿಂದ ಹೊರಗುಳಿಯುವ ಸೂಚನೆ ನೀಡಿದ್ದ ಬಹುತೇಕ ಶಾಸಕರು ಅಧಿವೇಶನದಲ್ಲಿ ಭಾಗವಹಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಸುಧಾಕರ್ ಹೊರತುಪಡಿಸಿ ಉಳಿದಂತೆ ಬಹುತೇಕ ಪ್ರಮುಖ ಶಾಸಕರು ಕಲಾಪಕ್ಕೆ ಹಾಜರಾಗಿದ್ದಾರೆ. ಉಪ ಚುನಾವಣೆಯಲ್ಲಿ ಗೆದ್ದು ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಆನಂದ್ ನ್ಯಾಮೇಗೌಡ, ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅನಿತಾ ಕುಮಾರಸ್ವಾಮಿ ಅವರು ಕಲಾಪದಲ್ಲಿ ಭಾಗವಹಿಸಿದ್ದಾರೆ.

Translate »