ಸುವರ್ಣಸೌಧ ಎದುರು ಮಠಾಧೀಶರ ಧರಣಿ
ಮೈಸೂರು

ಸುವರ್ಣಸೌಧ ಎದುರು ಮಠಾಧೀಶರ ಧರಣಿ

August 1, 2018

ಬೆಳಗಾವಿ: ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಹಾಗೂ ಸುವರ್ಣಸೌಧಕ್ಕೆ ಕಚೇರಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ಮಠಾಧೀಶರ ನೇತೃತ್ವದಲ್ಲಿ ಸುವರ್ಣಸೌಧದ ಎದುರು ಇಂದು ಧರಣಿ ನಡೆಯಿತು. ಧರಣಿ ವೇಳೆ ಕೆಲ ಕಿಡಿಗೇಡಿಗಳು ಪ್ರತ್ಯೇಕ ಧ್ವಜ ಹಾರಿಸುವುದರ ಜತೆಗೆ ಘೋಷಣೆ ಸಹ ಕೂಗಿದರು. ಪೊಲೀಸರು ಪ್ರತ್ಯೇಕ ಧ್ವಜ ವಶಪಡಿಸಿಕೊಂಡು, ಕಿಡಿಗೇಡಿಗಳನ್ನು ಬಂಧಿಸಿದರು. ಅಲ್ಲದೆ ವೇದಿಕೆ ಮೇಲೆ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ನಮ್ಮ ಬೆಂಬಲ ಇಲ್ಲ. ಗದ್ದಲ ಎಬ್ಬಿಸಿದರೆ ವೇದಿಕೆಯಿಂದ ನಿರ್ಗಮಿಸುವುದಾಗಿ ಸ್ವಾಮೀಜಿಗಳು ಹೇಳುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು. ಧರಣಿ ಸ್ಥಳಕ್ಕಾಗಮಿಸಿದ ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಮಠಾಧೀಶರ ಜತೆಗೆ ಚರ್ಚಿಸಿದರು.

ಈ ವೇಳೆ ಮಾತನಾಡಿದ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ. ಸಿದ್ದರಾಮ ಸ್ವಾಮೀಜಿ, ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರದಲ್ಲಿ ಅನ್ಯಾಯವಾಗಿದೆ. ಅಖಂಡ ರಾಜ್ಯ ನಿರ್ಮಾಣದ ನಂತರ ಜನಪ್ರತಿನಿಧಿ ಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ರಾಜಕಾರಣಿಗಳು ವಿಚಿತ್ರ ಹೇಳಿಕೆ ನೀಡುತ್ತಿದ್ದಾರೆ. ಎಲ್ಲರನ್ನು ಸಮಾನವಾಗಿ ಕಾಣುವ ಭಾವನೆ ಹೊಂದಬೇಕು. ನೀರಾವರಿ, ಕೃಷಿ ಸೇರಿ ಉತ್ತರ ಕರ್ನಾಟಕ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ತಾರತಮ್ಯ ಧೋರಣೆ ತಕ್ಷಣ ನಿಲ್ಲಿಸಬೇಕು ಎಂದರು. ಜನರಿಗೆ ಅನ್ಯಾಯ ಆದಾಗ ಸ್ವಾಮೀಜಿಗಳು ಮಠ ಬಿಟ್ಟು ಬರೋದು ಅನಿವಾರ್ಯ. ಆಯ್ಕೆಯಾದ ಕೂಡಲೇ ಶಾಸಕರಿಗೆ ಸನ್ಮಾನ ಮಾಡಬೇಡಿ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಿಲ್ಲ ಎಂದು ರಾಜೀನಾಮೆ ನೀಡಿದ ಶಾಸಕರಿಗೆ ಸನ್ಮಾನ ಮಾಡಿ ಎಂದು ಕರೆ ನೀಡಿದರು.

Translate »