ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆ ಮಾನವ  ಹಕ್ಕು ಆಯೋಗ ಅಸ್ತಿತ್ವಕ್ಕೆ ಕಾರಣವಾಯಿತು
ಮೈಸೂರು

ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆ ಮಾನವ ಹಕ್ಕು ಆಯೋಗ ಅಸ್ತಿತ್ವಕ್ಕೆ ಕಾರಣವಾಯಿತು

December 11, 2018

ಮೈಸೂರು: ದೇಶದಲ್ಲಿ ಮಾನವ ಹಕ್ಕುಗಳನ್ನು ಸಂರಕ್ಷಿಸಬೇಕಾದ ಸರ್ಕಾರದ ಅಧೀನದ ಸಂಸ್ಥೆಗಳಿಂದಲೇ ಮಾನವ ಹಕ್ಕುಗಳ ಉಲ್ಲಂಘನೆ ವ್ಯಾಪಕ ವಾದ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಅಗತ್ಯ ವೆಂದು ಮಾನವ ಹಕ್ಕುಗಳ ಸಂರಕ್ಷಣೆಗೆ ಆಯೋಗವನ್ನು ಅಸ್ತಿತ್ವಕ್ಕೆ ತರಲಾಯಿತು ಎಂದು ನಿವೃತ್ತ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರೂ ಆದ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಚಂದ್ರಶೇಖರ್ ಹುನಗುಂದ ಹೇಳಿದರು.

ಮೈಸೂರಿನ ಪುರಭವನದಲ್ಲಿ ಮಾನವ ಹಕ್ಕುಗಳ ಸೇವಾ ಸಮಿತಿ ವತಿಯಿಂದ ಸೋಮವಾರ ಹಮ್ಮಿ ಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಹಕ್ಕುಗಳನ್ನು ಸರ್ಕಾರ ರಕ್ಷಣೆ ಮಾಡಬೇಕಾದ ಹೊಣೆ ಹೊಂದಿರುತ್ತದೆ. ಆದರೆ ದೇಶದಲ್ಲಿ ವ್ಯತಿರಿಕ್ತ ಸನ್ನಿ ವೇಶ ನಿರ್ಮಾಣಗೊಂಡು ಜಾಗತಿಕ ಮಟ್ಟದಲ್ಲಿ ಒತ್ತಡ ಬಂದ ಹಿನ್ನೆಲೆಯಲ್ಲಿ ಆಯೋಗದ ವ್ಯವಸ್ಥೆ ಅಸ್ತಿತ್ವಕ್ಕೆ ಬಂತು ಎಂದು ತಿಳಿಸಿದರು.

ದೇಶದಲ್ಲಿ 1993ರಲ್ಲಿ ಮಾನವ ಹಕ್ಕುಗಳ ಸಂರ ಕ್ಷಣಾ ಅಧಿನಿಯಮ ಜಾರಿಗೊಳಿಸಲಾಯಿತು. ಈ ಕಾನೂನಿನ ಅಡಿಯಲ್ಲಿ 1994ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಅಸ್ತಿತ್ವಕ್ಕೆ ಬಂತು. ಅದೇ ರೀತಿ 2007ರಲ್ಲಿ ಕರ್ನಾಟಕದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ ರಚನೆ ಮಾಡಲಾಯಿತು ಎಂದು ತಿಳಿಸಿದರು.

ಗಡಿಯಲ್ಲಿ ಗುಂಡೇಟಿನಿಂದ ಗಾಯಗೊಂಡವರ ಸಂಖ್ಯೆ ಗಿಂತ ಮಾನವ ಹಕ್ಕುಗಳ ಉಲ್ಲಂಘನೆಯಿಂದ ನೊವುಂ ಡವರ ಸಂಖ್ಯೆಯೇ ಹೆಚ್ಚು ಎಂಬ ಅಭಿಪ್ರಾಯವನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ವ್ಯಕ್ತಪಡಿಸಿದ್ದಾರೆ. ಅಷ್ಟರಮಟ್ಟಿಗೆ ಮಾನವ ಹಕ್ಕುಗಳು ಉಲ್ಲಂಘನೆ ಆಗು ತ್ತಿವೆ. ಭೂ ಸ್ವಾಧೀನ, ರಸ್ತೆ ಅಗಲೀಕರಣ ಸೇರಿದಂತೆ ಇನ್ನಿತರ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗಾಗಿಯೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವ ನಿದರ್ಶನ ಗಳಿವೆ. ಆದರೆ ಅಭಿವೃದ್ಧಿ ನೆಪದಲ್ಲಿ ಯಾರದ್ದೇ ಮಾನವ ಹಕ್ಕು ಉಲ್ಲಂಘನೆ ಆಗಬಾರದು ಎಂದು ತಿಳಿಸಿದರು.

ಮಾನವ ಹಕ್ಕುಗಳ ಉಲ್ಲಂಘನೆ ತಡೆಯುವುದು ಹಾಗೂ ಉಲ್ಲಂಘನೆಗೆ ಒಳಗಾದವರಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವುದು ಮಾನವ ಹಕ್ಕುಗಳ ಆಯೋಗದ ಕರ್ತವ್ಯವಾಗಿದೆ. ಯಾವ ಸಂದರ್ಭದಲ್ಲಿ ಆಯೋಗಕ್ಕೆ ದೂರು ನೀಡಬೇಕೆಂಬುದನ್ನು ಅರಿತುಕೊಳ್ಳುವುದು ಮುಖ್ಯ. ಸರ್ಕಾರದ ಅಧೀನದ ವ್ಯವಸ್ಥೆಗಳಿಂದ ಉಲ್ಲಂಘನೆ ಯಾದ ಪ್ರಕರಣಗಳು ಆಯೋಗದ ವ್ಯಾಪ್ತಿಗೆ ಬರಲಿವೆ. ಉದಾಹರಣೆಗೆ ಪೊಲೀಸರು ದೂರು ಸ್ವೀಕರಿಸಲು ನಿರಾ ಕರಿಸಿದರೆ ಆಯೋಗದ ಮೊರೆ ಹೋಗಬಹುದು ಎಂದರು.

ಕಾನೂನು-ಸುವ್ಯವಸ್ಥೆ ಹಾಗೂ ಮೂಲಭೂತ ನಾಗರಿಕ ಸೌಲಭ್ಯಕ್ಕೆ ಸಂಬಂಧಿಸಿದಂತೆ ಆಯೋಗಕ್ಕೆ ನಿತ್ಯ ದೂರುಗಳು ಬರುತ್ತಿರುತ್ತವೆ. ಈ ಪೈಕಿ ಪೊಲೀಸ್ ದೌರ್ಜನ್ಯವೆಂಬ ಆರೋಪದ ದೂರುಗಳು ಆಯೋ ಗಕ್ಕೆ ಹೆಚ್ಚಾಗಿ ಸಲ್ಲಿಕೆಯಾಗುತ್ತಿರುತ್ತವೆ. ಆಯೋಗದ ಸದಸ್ಯನಾಗಿ ನಾನು ಗಮನಿಸಿದಂತೆ ದೂರು ನೀಡಲು ಬರುವ ಸಾರ್ವಜನಿಕರನ್ನು ಪೊಲೀಸ್ ಠಾಣೆಯಲ್ಲಿ ಗೌರವದಿಂದ ನಡೆಸಿಕೊಳ್ಳುವುದು ಬಹಳ ವಿರಳ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಇಬ್ಬರು ರೈತರು ಹಾಗೂ ಇಬ್ಬರು ಯೋಧರನ್ನು ಸನ್ಮಾನಿಸಲಾಯಿತು. ಅಲ್ಲದೆ, 15 ಮಂದಿ ಸಾಧಕರಿಗೆ `ಮಾನವ ರತ್ನ’ ಪ್ರಶಸ್ತಿ ಪ್ರದಾನ ಮಾಡ ಲಾಯಿತು. ಜೊತೆಗೆ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ 20ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದವು. ಸುಯೋಗ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಮೇಲುಕೋಟೆ ವಂಗೀಪುರ ನಂಬಿ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಸಾನಿಧ್ಯ ವಹಿ ಸಿದ್ದರು. ಸಮಾಜ ಸೇವಕ ಹಾಗೂ ಪತ್ರಕರ್ತ ಡಾ. ಹೆಚ್.ಎಂ.ಕೃಷ್ಣಮೂರ್ತಿ, ಸೇವಾ ಸಮಿತಿಯ ಅಧ್ಯಕ್ಷ ಕಸ್ತೂರಿ ಚಂದ್ರು, ರಾಜ್ಯ ಉಪಾಧ್ಯಕ್ಷ ಶಿವರಾಜು, ಜಿಲ್ಲಾಧ್ಯಕ್ಷ ಡಾ.ರಘುರಾಂ ವಾಜಪೇಯಿ, ಸೇವಾ ಸಮಿತಿಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸುಮಿತ್ರ ರಮೇಶ್, ಮೈಸೂರು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಶಿಕಲಾ ಗಿರೀಶ್ ಮತ್ತಿತರರು ಹಾಜರಿದ್ದರು.

Translate »