ಪೊಲೀಸರ ಮೇಲೆ ಗುಂಡು ಹಾರಿಸಿ `ಹನಿಟ್ರ್ಯಾಪ್’ ಆರೋಪಿ ಪರಾರಿ
ಮೈಸೂರು

ಪೊಲೀಸರ ಮೇಲೆ ಗುಂಡು ಹಾರಿಸಿ `ಹನಿಟ್ರ್ಯಾಪ್’ ಆರೋಪಿ ಪರಾರಿ

September 28, 2019

ಮಡಿಕೇರಿ, ಸೆ.27-ಹನಿಟ್ರ್ಯಾಪ್ ಪ್ರಕರಣದ ಪ್ರಮುಖ ಆರೋಪಿ, ತನ್ನನ್ನು ಬಂಧಿಸಲು ಬಂದ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾದ ಘಟನೆ ಮಡಿಕೇರಿ ತಾಲೂಕು ಎಮ್ಮೆಮಾಡು ಗ್ರಾಮದಲ್ಲಿ ನಡೆದಿದ್ದು, ಎಎಸ್‍ಐ ಸೇರಿ ದಂತೆ ನಾಲ್ವರು ಪೊಲೀಸರು ಅಪಾ ಯದಿಂದ ಪಾರಾಗಿದ್ದಾರೆ.

ಎಮ್ಮೆಮಾಡು ನಿವಾಸಿ ಕರೀಂ ಎಂಬಾತ ಹನಿಟ್ರ್ಯಾಪ್ ಪ್ರಕರಣದ ಪ್ರಮುಖ ಆರೋ ಪಿಯಾಗಿದ್ದು, ಆತನನ್ನು ಬಂಧಿಸಲು ಅಪ ರಾಧ ಪತ್ತೆ ದಳದ ಎಎಸ್‍ಐ ಹಮೀದ್ ನೇತೃತ್ವದಲ್ಲಿ ನಾಲ್ವರು ಪೊಲೀಸರು ಆತನ ಮನೆಗೆ ತೆರಳಿದ್ದರು. ಈ ವೇಳೆ ಕರೀಂ ಮನೆಯೊಳಗಿನಿಂದಲೇ ಬಂದೂಕಿನಿಂದ ಪೊಲೀಸರ ಮೇಲೆ ಒಂದು ಸುತ್ತು ಗುಂಡು ಹಾರಿಸಿದ್ದು, ಗುಂಡು ಪೊಲೀಸರಿಗೆ ತಗಲದೇ ಕಾಂಪೌಂಡ್‍ಗೆ ಬಡಿದ ಕಾರಣ ಪೊಲೀಸರು ಅಪಾಯದಿಂದ ಪಾರಾಗಿದ್ದಾರೆ ಎಂದು ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಎಸ್‍ಪಿ ಡಾ. ಸುಮನಾ ತಿಳಿಸಿದರು. ಪೊಲೀಸರ ಮೇಲೆ ಗುಂಡು ಹಾರಿಸುವಂತೆ ಕರೀಂನ ಇಬ್ಬರು ಪತ್ನಿಯರು ಪ್ರಚೋದನೆ ನೀಡಿದ್ದು, ಅವರಲ್ಲಿ ಒಬ್ಬಾಕೆ ಕರೀಂಗೆ ಬಂದೂಕನ್ನು ತಂದುಕೊಟ್ಟಿದ್ದಾಳೆ.

ಗುಂಡು ಹಾರಿಸಿದ ನಂತರ ತನ್ನ ಇಬ್ಬರು ಪತ್ನಿಯರೊಂದಿಗೆ ಕರೀಂ ಪರಾರಿಯಾಗಿದ್ದು, ಆತ ಮತ್ತು ಪತ್ನಿಯರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ 2015ರಲ್ಲಿ ನಡೆದ ಟಿಪ್ಪು ಗಲಭೆಯಲ್ಲೂ ಪ್ರಮುಖ ಪಾತ್ರ ವಹಿಸಿರುವ ಬಗ್ಗೆಯೂ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ ಜಿಲ್ಲಾ ಎಸ್‍ಪಿ, ಆರೋಪಿಗಳ ಬಂಧನಕ್ಕಾಗಿ ಕ್ರಮ ವಹಿಸಲಾಗಿದೆ ಎಂದರು.

ವಿವರ: ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ಬಳಸಿಕೊಂಡು ಎಮ್ಮೆಮಾಡು ನಿವಾಸಿಯಾದ ಗಫೂರ್ ಎಂಬಾತನನ್ನು ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿಸಿ 3.80 ಲಕ್ಷ ಸುಲಿಗೆ ಮಾಡಿದ್ದಾನೆ. ಈ ಪ್ರಕರಣದಲ್ಲಿ ಕರೀಂ ಪ್ರಮುಖ ಆರೋಪಿಯಾಗಿದ್ದಾನೆ. ಪ್ರಕರಣದಲ್ಲಿ ಒಟ್ಟು 10 ಮಂದಿ ಭಾಗಿಯಾಗಿದ್ದು, ಕಾಲೇಜು ವಿದ್ಯಾರ್ಥಿನಿ ಸೇರಿದಂತೆ 6 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಎಸ್‍ಪಿ ತಿಳಿಸಿದರು.

ಎಮ್ಮೆಮಾಡುವಿನ ಗಫೂರ್ ದುಬೈನಲ್ಲಿ ಪಾಸ್‍ಪೋರ್ಟ್ ಮಾಡಿಸಿಕೊಡುವ ಕೆಲಸ ಮಾಡುತ್ತಿದ್ದು, ಆಗಸ್ಟ್ ತಿಂಗಳಲ್ಲಿ ಸ್ವಗ್ರಾಮಕ್ಕೆ ಬಂದಿದ್ದರು. ಅವರು ಹೊಸ ಮನೆ ನಿರ್ಮಿಸುತ್ತಿದ್ದರು. ದುಬೈನಿಂದ ಬಂದಿರುವ ಅವರಿಂದ ಹಣ ಸುಲಿಗೆ ಮಾಡುವ ಸಂಚು ರೂಪಿಸಿದ್ದ ಕರೀಂ, ತನ್ನ ಸ್ನೇಹಿತ ಅಜರುದ್ದೀನ್ ಎಂಬಾತನೊಂದಿಗೆ ತೆರಳಿ ಮೈಸೂರಿನಿಂದ ಮನೆಗೆ ಬೇಕಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವಂತೆ ಮನವೊಲಿಸಿ ಗಫೂರ್‍ನನ್ನು ಆಗಸ್ಟ್ 16ರಂದು ಮೈಸೂರಿಗೆ ಕರೆದೊಯ್ದಿದ್ದಾರೆ.

ಮಾರ್ಗ ಮಧ್ಯೆ ಕುಶಾಲನಗರದಲ್ಲಿ ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ತಮ್ಮ ಕಾರಿಗೆ ಹತ್ತಿಸಿಕೊಂಡ ಕರೀಂ ಮತ್ತು ಅಜರುದ್ದೀನ್, ಅಂದು ರಾತ್ರಿ ಮೈಸೂರಿನ ರಿಂಗ್ ರಸ್ತೆಯಲ್ಲಿರುವ ಹೋಂ ಸ್ಟೇವೊಂದರಲ್ಲಿ ವಿದ್ಯಾರ್ಥಿನಿ ಮತ್ತು ಗಫೂರ್‍ನನ್ನು ಬಿಟ್ಟು ತೆರಳಿದ್ದಾರೆ. ನಂತರ ಪೂರ್ವ ನಿಯೋಜನೆಯಂತೆ ಗುಂಪೊಂದು ಪತ್ರಕರ್ತರ ಸೋಗಿ ನಲ್ಲಿ ಗಫೂರ್ ಮತ್ತು ವಿದ್ಯಾರ್ಥಿನಿ ಇದ್ದ ಹೋಂ ಸ್ಟೇ ಮೇಲೆ ದಾಳಿ ಮಾಡಿದೆ. ಈ ತಂಡ ಗಫೂರ್ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಆತನನ್ನು ಯುವತಿಯೊಂದಿಗೆ ಅಶ್ಲೀಲವಾಗಿ ಫೋಟೋ ಮತ್ತು ವೀಡಿಯೋ ಚಿತ್ರೀಕರಣವನ್ನು ಮಾಡಿಕೊಂಡು ತಮಗೆ 50 ಲಕ್ಷ ರೂ. ನೀಡದಿದ್ದರೆ ಟಿ.ವಿ.ಗಳಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದೆ. ಇದರಿಂದ ಬೆದರಿದ ಗಫೂರ್, 3.80 ಲಕ್ಷ ರೂ. ನೀಡಿದ ನಂತರ ಈ ತಂಡ ಆತನನ್ನು ಬಿಟ್ಟು ಕಳುಹಿಸಿದೆ ಎಂದು ಎಸ್‍ಪಿ ವಿವರಿಸಿದರು.

ಒಂದು ತಿಂಗಳ ಹಿಂದೆ ನಾಪೋಕ್ಲು ವ್ಯಾಪ್ತಿಯಲ್ಲಿ ಹನಿಟ್ರ್ಯಾಪ್ ನಡೆದಿರುವ ಬಗ್ಗೆ ಜಿಲ್ಲಾ ಅಪರಾಧ ಪತ್ತೆ ದಳಕ್ಕೆ ಬಂದ ಖಚಿತ ಮಾಹಿತಿ ಆಧರಿಸಿ ತನಿಖೆ ಆರಂಭಿಸಿದಾಗ ಗಫೂರ್ ಹನಿಟ್ರ್ಯಾಪ್ ಪ್ರಕರಣದ ಸಂತ್ರಸ್ತ ಎಂಬುದು ಪತ್ತೆಯಾಗಿದೆ. ನಂತರ ಆತನಿಂದ ದೂರು ಪಡೆದು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು 10 ಆರೋಪಿಗಳ ಪೈಕಿ ಮಹಮ್ಮದ್ ಅಜುರುದ್ದೀನ್(24), ಅಬೂಬಕರ್ ಸಿದ್ದಿಕ್ (33), ಹಸೇನ ಅಲಿಯಾಸ್ ಅಚ್ಚು (27), ಇರ್ಷಾದ್ ಅಲಿ (27), ಎ.ಎ.ಸಮೀರ್ (28) ಮತ್ತು ಕಾಲೇಜು ವಿದ್ಯಾರ್ಥಿನಿಯನ್ನು ಬಂಧಿಸಿ 1 ಲಕ್ಷ ರೂ. ವಶಪಡಿಸಿಕೊಂಡು, ಪ್ರಮುಖ ಆರೋಪಿ ಕರೀಂ ಸೇರಿದಂತೆ ನಾಲ್ವರ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ಕರೀಂ ಬಂಧನಕ್ಕೆ ಪ್ರಯತ್ನಿಸಿದಾಗ ಆತ ಪೊಲೀಸರ ಮೇಲೆಯೇ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಜಿಲ್ಲಾ ಎಸ್‍ಪಿ ವಿವರಿಸಿದರು.

Translate »