ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಪತ್ರಕ್ಕಿಲ್ಲ ಕಿಮ್ಮತ್ತು
ಮೈಸೂರು

ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಪತ್ರಕ್ಕಿಲ್ಲ ಕಿಮ್ಮತ್ತು

July 19, 2018

ಬೆಂಗಳೂರು: ಸರ್ಕಾರಕ್ಕೆ ಶಿಫಾರಸ್ಸು ಪತ್ರ ಬರೆದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖಭಂಗಕ್ಕೆ ಒಳಗಾಗುತ್ತಿದ್ದಾರೆ.

ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಇಳಿಸದೆ, ಅನ್ನಭಾಗ್ಯ ಯೋಜನೆಯಡಿ ಪ್ರತಿ ಯುನಿಟ್‍ಗೆ ಅಕ್ಕಿ ಪ್ರಮಾಣವನ್ನು ಐದು ಕೆ.ಜಿ.ಗೆ ಬದಲು ಏಳು ಕೆ.ಜಿ.ಗೆ ಹೆಚ್ಚಳ ಮಾಡದೆ, ಈಗ ಸಿದ್ದರಾಮಯ್ಯ ಸರ್ಕಾರ ನೇಮಕ ಮಾಡಿದ್ದ ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳ ನಾಮನಿರ್ದೇಶಿತ ಸಿಂಡಿ ಕೇಟ್ ಸದಸ್ಯರನ್ನು ಕಿತ್ತೊಗೆದಿದೆ.

ಮೈಸೂರು, ಬೆಂಗಳೂರು, ಕರ್ನಾಟಕ ಸೇರಿದಂತೆ ರಾಜ್ಯದ 16 ವಿಶ್ವವಿದ್ಯಾಲಯ ಗಳ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರ ನೇಮಕಾತಿ ರದ್ದುಗೊಳಿಸಿ ಇಂದು ಆದೇಶ ಹೊರಡಿಸುವಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಯಶಸ್ವಿಯಾಗಿದ್ದಾರೆ.

ಶಿಕ್ಷಣ ಇಲಾಖೆ ಆದೇಶದ ಮೂಲಕ ಸಿದ್ದರಾಮಯ್ಯ ಬರೆದ ಪತ್ರ ಮತ್ತು ಸೂಚನೆ ಗಳಿಗೆ ಮಣಿಯುವುದಿಲ್ಲ ಎಂದು ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೆಡ್ಡು ಹೊಡೆದಿದ್ದಾರೆ. ಬುಧವಾರ ಉನ್ನತ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಂತೆ ತಕ್ಷಣವೇ ರಾಜ್ಯದ 16 ವಿವಿಗಳಿಗೆ ಹಿಂದೆ ನೇಮಕವಾಗಿದ್ದ ನಾಮನಿರ್ದೇಶಿತ ಸದಸ್ಯರ ನೇಮಕಾತಿಯನ್ನು ಹಿಂಪಡೆಯಲಾಗಿದೆ. ಇದು ತತ್‍ಕ್ಷಣವೇ ಜಾರಿಗೆ ಬರುತ್ತದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಕಳೆದ ಜು.7ರಂದು ಬಾಗಲಕೋಟೆ ಜಿಲ್ಲೆ ಬಾದಾಮಿ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜಿ.ಟಿ.ದೇವೇಗೌಡ ಅವರಿಗೆ ಪತ್ರ ಬರೆದು, ಹಿಂದೆ ನಾಮನಿರ್ದೇಶನ ಮಾಡಿದ್ದ ವಿಶ್ವ ವಿದ್ಯಾನಿಲಯಗಳ ನಾಮನಿರ್ದೇಶಿತ ಸದಸ್ಯ ರನ್ನು ಮುಂದುವರೆಸಬೇಕೆಂದು ಒತ್ತಾಯಿಸಿದ್ದರು. ಈ ಹಿಂದೆ ಕಾಂಗ್ರೆಸ್ ಸರ್ಕಾ ರದ ಅವಧಿಯಲ್ಲಿ ನೇಮಕಗೊಂಡಿದ್ದ ಬೆಂಗಳೂರು, ಮೈಸೂರು, ಕುವೆಂಪು, ಕರ್ನಾ ಟಕ, ಕರ್ನಾಟಕ ರಾಜ್ಯ ಮಹಿಳಾ, ತುಮ ಕೂರು, ದಾವಣಗೆರೆ, ರಾಣಿ ಚೆನ್ನಮ್ಮ, ವಿಜಯನಗರ ಕೃಷ್ಣದೇವರಾಯ, ಬೆಂಗ ಳೂರು ಕೇಂದ್ರ, ಬೆಂಗಳೂರು ಉತ್ತರ, ಕನ್ನಡ, ಕರ್ನಾಟಕ ರಾಜ್ಯ ಮುಕ್ತ, ವಿಶ್ವೇಶ್ವ ರಯ್ಯ ತಾಂತ್ರಿಕ, ಗುಲ್ಬರ್ಗ, ಮಂಗಳೂರು ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯ ರನ್ನು ವಾಪಸ್ ಪಡೆಯಲಾಗಿದೆ.

ಸರ್ಕಾರದ ಈ ಕ್ರಮ ಸಿದ್ದರಾಮಯ್ಯ ನವರಿಗೆ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗುತ್ತ್ತಿದೆ. ಈ ಹಿಂದೆ ಅನ್ನಭಾಗ್ಯ ಯೋಜನೆ ಯಡಿ ಬಿಪಿಎಲ್ ಕುಟುಂಬಗಳಿಗೆ ನೀಡ ಲಾಗುತ್ತಿದ್ದ ಅಕ್ಕಿ ಪ್ರಮಾಣವನ್ನು ಕುಮಾರಸ್ವಾಮಿ ಅವರು ಬಜೆಟ್‍ನಲ್ಲಿ 7 ಕೆ.ಜಿ.ಯಿಂದ 5 ಕೆ.ಜಿ.ಗೆ ಇಳಿಕೆ ಮಾಡಿದ್ದರು. ಇದನ್ನು ಕೂಡ ಕಡಿತ ಮಾಡಬಾರದೆಂದು ಸಿದ್ದರಾಮಯ್ಯ ಪತ್ರ ಬರೆದಿದ್ದರು. ಅನ್ನಭಾಗ್ಯ ಯೋಜನೆ ಅಕ್ಕಿ ಇಳಿಕೆ ಮಾಡದಂತೆ ಬರೆದ ಪತ್ರದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ದರ ಇಳಿಸುವಂತೆ ಮುಖ್ಯಮಂತ್ರಿಯವರಿಗೆ ತಿಳಿಸಿದ್ದರು. ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಗೃಹ ಬಳಕೆ ವಿದ್ಯುತ್ ಮೇಲಿನ ಶೇ. 3 ರಷ್ಟು ಹೆಚ್ಚಿನ ತೆರಿಗೆಯನ್ನು ಇಳಿಸುವ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಒಲವಿತ್ತು. ಈ ಬಾಬ್ತಿನಿಂದ ಬೊಕ್ಕಸಕ್ಕೆ ವಾರ್ಷಿಕ ಕೇವಲ 980 ಕೋಟಿ ರೂ. ಮಾತ್ರ ಬರುತ್ತಿತ್ತು. ಸಾರ್ವಜನಿಕರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ತೆರಿಗೆ ಹಿಂಪಡೆಯುವ ಮರು ಚಿಂತನೆ ಮಾಡಿದ್ದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಹುದ್ದೆ ಜೊತೆಗೆ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಮುಂಗಡಪತ್ರ ಅನುಮೋದನೆಗೂ ಮುನ್ನ ನಡೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸದೇ ಸರ್ಕಾರಕ್ಕೆ ಪತ್ರ ಬರೆದಿದ್ದಲ್ಲದೆ, ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದು, ಕುಮಾರಸ್ವಾಮಿ ಅವರಿಗೆ ಸಿಟ್ಟು ತರಿಸಿತ್ತು. ಒಂದು ವೇಳೆ ಅವರ ಪತ್ರಕ್ಕೆ ಬೆಲೆ ನೀಡಿ, ತೆರಿಗೆ ಹಿಂಪಡೆದಿದ್ದೇ ಆದಲ್ಲಿ ಮುಂದೆಯೂ ತಮ್ಮ ಮೇಲೆ ಪ್ರತಿನಿತ್ಯ ಸವಾರಿ ಮಾಡುತ್ತಾರೆ ಎಂಬ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ತೆರಿಗೆ ಇಳಿಕೆ ಚಿಂತನೆ ಕೈಬಿಟ್ಟರು. ಇದಾದ ನಂತರ ಸಿದ್ದರಾಮಯ್ಯನವರು ಕಳೆದ 7 ರಂದು ಸರ್ಕಾರಕ್ಕೆ ಪತ್ರ ಬರೆದು, ತಮ್ಮ ಅವಧಿಯಲ್ಲಿ ನೇಮಕಗೊಂಡಿರುವ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರ ನೇಮಕಾತಿಯನ್ನು ರದ್ದುಗೊಳಿಸದಂತೆ ಸೂಚಿಸಿದ್ದರು. ಈ ಪತ್ರಕ್ಕೂ ಮಣಿಯದ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು, ಪತ್ರ ಬರೆದ ಒಂದು ವಾರದೊಳಗೆ ಎಲ್ಲಾ 16 ವಿವಿಗಳ ಸಿಂಡಿಕೇಟ್ ಸದಸ್ಯರ ನೇಮಕವನ್ನು ರದ್ದುಗೊಳಿಸಿದರು.

Translate »