ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ
ದೇಶ-ವಿದೇಶ

ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ

July 19, 2018

ನವದೆಹಲಿ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೂ ಅವಕಾಶ ಕಲ್ಪಿಸಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ 10ರಿಂದ 50 ವರ್ಷದೊಳ ಗಿನ ಮಹಿಳೆಯರ ಪ್ರವೇಶ ನಿರ್ಬಂಧ ಕುರಿತ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳಿದ್ದ ಸಾಂವಿಧಾನಿಕ ಪಂಚ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಸುಮಾರು 800 ವರ್ಷಗಳಿಂದ ಶಬರಿ ಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧ ಸಂಪ್ರದಾಯದ ವಿರುದ್ಧ ಭಾರತದ ಯುವ ವಕೀಲರ ಅಸೋಸಿಯೇಷನ್ ಮತ್ತಿತರರು ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಕೇರಳ ಸರ್ಕಾರ, ತಿರುವಾಂಕೂರ್ ದೇಗುಲ ಮಂಡಳಿ, ಶಬರಿಮಲೆ ದೇಗುಲದ ಮುಖ್ಯ ಅರ್ಚ ಕರು, ಪತಾನಮಿಟ್ಟದ ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಅರ್ಜಿಯಲ್ಲಿ ಪ್ರತಿವಾದಿಗಳಾಗಿದ್ದರು.

ಶಬರಿಮಲೆ ದೇವಾಲಯದಲ್ಲಿ ಮಹಿಳೆ ಯರ ಪ್ರವೇಶ ನಿರ್ಬಂಧಿಸುವ ಮೂಲಕ ಮೂಲಭೂತ ಹಕ್ಕುಗಳನ್ನು ಉಲ್ಲಂಘಿ ಸಲಾಗುತ್ತಿದೆಯೇ? ಧರ್ಮ, ಜಾತಿ, ಲಿಂಗ ಆಧಾರದ ಮೇಲೆ ಅಸಮಾನತೆ ತೋರಲಾಗುತ್ತಿದೆಯೇ? ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆಯೇ? ಎಂಬುದು ಸೇರಿದಂತೆ ನಾಲ್ಕು ಪ್ರಶ್ನೆಗಳನ್ನು ಮುಂದಿಟ್ಟು ಕಳೆದ ವರ್ಷ ಅಕ್ಟೋಬರ್ ನಲ್ಲಿ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಸಾಂವಿಧಾನಿಕ ಪಂಚ ಪೀಠಕ್ಕೆ ವರ್ಗಾಯಿಸಿತ್ತು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯ ಮೂರ್ತಿ ದೀಪಕ್ ಮಿಶ್ರಾ ನೇತೃತ್ವದಲ್ಲಿ ನ್ಯಾಯಮೂರ್ತಿ ರೋಹಿಂಟನ್ ಪಾಲಿ ನಾರಿಮನ್, ನ್ಯಾಯಮೂರ್ತಿ ಎ.ಎಂ. ಖಾನ್ವೀಕರ್, ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರನ್ನೊಳ ಗೊಂಡ ಸಾಂವಿಧಾನಿಕ ಪಂಚ ಪೀಠ ಈ ಅರ್ಜಿ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡಿತ್ತು. ಇಲ್ಲಿ ವಿಚಾರಣೆ ವೇಳೆ ಕೇರಳ ಪರ ವಕೀಲರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಕೇರಳ ಸರ್ಕಾರ ಸಮ್ಮತಿ ಸೂಚಿಸಿದೆ ಎಂದು ತಿಳಿಸಿದರು. ಈ ವೇಳೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು `ಕೇರಳ ಸರ್ಕಾರ ನಾಲ್ಕನೇ ಬಾರಿ ತನ್ನ ನಿರ್ಧಾರವನ್ನು ಬದಲಿಸಿದೆಯಲ್ಲಾ?’ ಎಂದು ಪ್ರಶ್ನಿಸಿದಾಗ ವಕೀಲರು `ರಾಜ್ಯದಲ್ಲಿ ಸರ್ಕಾರ ಬದಲಾದಾಗ ನಿರ್ಧಾರಗಳು ಬದಲಾಗುತ್ತವೆ’ ಎಂದು ಹೇಳಿದರು. ನಂತರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಮಹಿಳೆಯರಿಗೆ ದೇಗುಲ ಪ್ರವೇಶ ನಿರ್ಬಂಧ ಹೇರುವುದು ಸರಿಯಲ್ಲ. ಮಹಿಳೆಯರಿಗೆ ಮಾತ್ರವಲ್ಲ, ಎಲ್ಲರಿಗೂ ಧಾರ್ಮಿಕ ಸ್ಥಳದಲ್ಲಿ ಮುಕ್ತ ಪ್ರವೇಶವಿರಬೇಕು. ಶಬರಿಮಲೆ ದೇಗುಲದಲ್ಲಿ ದೇವರ ಆರಾಧನೆಗೆ ಎಲ್ಲರಿಗೂ ಸಮಾನವಾದ ಅಧಿಕಾರವಿದೆ. ಹೀಗಿರುವಾಗ ಯಾವ ಆಧಾರದಲ್ಲಿ ಪ್ರವೇಶ ನಿಷೇಧಿಸುತ್ತೀರಿ? ಕೇರಳ ರಾಜ್ಯ ಸರ್ಕಾರದ ನಡೆ ಸಂವಿಧಾನ ವಿರೋಧಿ ನಡೆಯಾಗಿದೆ. ಜನಸಾಮಾನ್ಯರಿಗೆ ದೇಗುಲ ತೆರೆದಾಗ ಅಲ್ಲಿಗೆ ಎಲ್ಲರೂ ಹೋಗುವಂತಾಗಬೇಕು ಎಂದರು.

ಪ್ರಾರ್ಥನೆ ಸಲ್ಲಿಸುವಾಗ ಪುರುಷರಿಗಷ್ಟೇ ಸಮಾನತೆ ಮಹಿಳೆಯರಿಗೂ ಇರುತ್ತದೆ. ಈ ಅವಕಾಶವನ್ನು ತಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು. ಮಹಿಳೆಯರ ಋತುಸ್ರಾವದ ಕಾಲಘಟ್ಟ ಎಂದು 10ರಿಂದ 50 ವರ್ಷವರೆಗೆ ಮಹಿಳೆಯರಿಗೆ ನಿರ್ಬಂಧಿಸಲಾಗಿದೆ ಎಂಬ ಅಮಿಕಸ್ ಕ್ಯೂರಿ ಅಭಿಪ್ರಾಯಕ್ಕೆ ಸುಪ್ರೀಂಕೋರ್ಟ್, ಹೆಣ್ಣು ಮಕ್ಕಳಿಗೆ 10 ವರ್ಷಕ್ಕೂ ಮೊದಲೇ ಋತುಸ್ರಾವ ಆರಂಭವಾಗಬಹುದು. 50 ವರ್ಷದ ನಂತರವೂ ಅದು ಮುಂದುವರೆಯ ಬಹುದು. ದೇವಸ್ಥಾನ ಎನ್ನುವುದು ಯಾವತ್ತೂ ಖಾಸಗೀ ಸ್ವತ್ತಲ್ಲ. ಅದು ಸಾರ್ವಜನಿಕ ಆಸ್ತಿ. ಅಲ್ಲಿಗೆ ಯಾರು ಬೇಕಾದರೂ ಪ್ರವೇಶ ಮಾಡಬಹುದು ಎಂದು ಹೇಳಿದೆ.

ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ಮಹಿಳೆಯರಿಗೆ ತಾರತಮ್ಯ ಮಾಡು ವುದು ಸರಿಯಲ್ಲ. ದೇವಸ್ಥಾನ ಪ್ರವೇಶ ನಿರ್ಬಂಧ ಮಹಿಳೆಯರ ಮೂಲಭೂತ ಹಕ್ಕುಗಳಿಗೆ ವಿರೋಧವಾಗಿದೆ. ದೇವರಿಗೆ ಸೇವೆ ಸಲ್ಲಿಸಲು ಎಲ್ಲರೂ ಅರ್ಹರು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಹಿಂದೆ ಶಬರಿಮಲೆ ದೇವಸ್ಥಾನ ಆಡಳಿತ ಮಂಡಳಿಯು 10ರಿಂದ 50 ವರ್ಷ ಒಳಗಿನ ಮಹಿಳೆಯರಿಗೆ ದೇವಸ್ಥಾನ ಪ್ರವೇಶ ನಿರ್ಬಂಧ ಭಕ್ತರ ನಂಬಿಕೆಯಾಗಿದ್ದು, ಅದನ್ನು ಉಲ್ಲಂಘಿಸುವುದು ತಪ್ಪು. ತಲ-ತಲಾಂತರಗಳಿಂದ ನಂಬಿಕೊಂಡು ಬಂದ ಧಾರ್ಮಿಕ ನಂಬಿಕೆಗೆ ಇದರಿಂದ ಭಂಗವುಂಟಾಗುತ್ತದೆ ಎಂದು ವಾದ ಮಂಡಿಸಿತ್ತು. ನಮಗೆ ಪೂಜೆ ಮಾಡಲು ಅವಕಾಶ ಬೇಡ. ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿ ಎಂದು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿದ್ದ `ಹ್ಯಾಪಿ ಟು ಬ್ಲೀಡ್’ ಸಂಘಟನೆ ನ್ಯಾಯಾಲಯವನ್ನು ಕೋರಿತ್ತು.

ಶಬರಿಮಲೈ ದೇಗುಲದಲ್ಲಿ ಮಹಿಳೆಯರಿಗೂ ಅವಕಾಶ ನೀಡಬೇಕೆನ್ನುವುದು ಸರ್ಕಾರದ ಅಭಿಪ್ರಾಯ. ಅದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ನಾವು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ್ದೇವೆ. ಸುಪ್ರೀಂಕೋರ್ಟ್ ಇದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು. ನಾವು ನ್ಯಾಯಾಲಯ ಹೇಳಿದ ಆದೇಶವನ್ನು ಪಾಲಿಸುತ್ತೇವೆ.  – ಕಡಕಂಪಲ್ಲಿ ಸುರೇಂದ್ರನ್, ಕೇರಳದ ಮುಜರಾಯಿ ಸಚಿವ

Translate »