ಕೆಆರ್‌ಎಸ್‌ನಲ್ಲಿ ಕಾವೇರಿ ಕಲರ್‍ಫುಲ್ ಕಲರವ
ಮಂಡ್ಯ, ಮೈಸೂರು

ಕೆಆರ್‌ಎಸ್‌ನಲ್ಲಿ ಕಾವೇರಿ ಕಲರ್‍ಫುಲ್ ಕಲರವ

July 19, 2018
  • ಅಣೆಕಟ್ಟೆಯಿಂದ ಭೋರ್ಗರೆಯುತ್ತಿರುವ ನೀರಿಗೆ ಬಣ್ಣ ಬಣ್ಣದ 500 ಎಲ್‍ಇಡಿ ಬಲ್ಬ್‍ಗಳ ಮೆರಗು

ಮೈಸೂರು: ಮೈದುಂಬಿದ ಕಾವೇರಿಗೀಗ ಬಣ್ಣದ ಓಕುಳಿ. ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಕೃಷ್ಣರಾಜ ಸಾಗರ ಅಣೆ ಕಟ್ಟೆಯ ಸೌಂದರ್ಯವನ್ನು ವೀಕ್ಷಿಸಲು ಈಗ ಎರಡು ಕಣ್ಣು ಸಾಲದು.

ಕಾವೇರಿ ಕಣಿವೆಯಲ್ಲಿ ಸಮೃದ್ಧವಾಗಿ ಮಳೆ ಯಾಗಿರುವುದರಿಂದ ನಾಲ್ಕು ವರ್ಷಗಳ ನಂತರ ಇದೀಗ ಕೆಆರ್‌ಎಸ್‌ ಜಲಾಶಯ ತುಂಬಿ ತುಳು ಕುತ್ತಿರುವುದರಿಂದ ಹೆಚ್ಚುವರಿ ನೀರನ್ನು ಹೊರ ಬಿಡುತ್ತಿದ್ದು, ಅಣೆಕಟ್ಟೆ ಬಳಿ ಭೋರ್ಗರೆದು ಹರಿ ಯುತ್ತಿರುವ ಕಾವೇರಿಯ ಪ್ರಕೃತಿ ಸೌಂದರ್ಯ ವನ್ನು ನೋಡಲು ಪ್ರತಿನಿತ್ಯ ಸಾವಿರಾರು ಮಂದಿ ಧಾವಿಸುತ್ತಿರುವುದು ಭಾರೀ ಸುದ್ದಿಯಾಗಿದೆ.

ಬೃಂದಾವನ (ಉತ್ತರ)ಕ್ಕೆ ಮುನ್ನೆಚ್ಚರಿಕೆಯಾಗಿ ಪ್ರವಾಸಿಗರ ಪ್ರವೇಶ ನಿಷೇಧಿಸಿರುವುದರಿಂದ ಬೃಂದಾವನ ವೀಕ್ಷಣೆಗೆ ಬರುವವರು ಕಾವೇರಿ ನೀರಾವರಿ ನಿಗಮದ ಎಕ್ಸಿಕ್ಯೂಟಿವ್ ಇಂಜಿನಿಯರ್ ಕಚೇರಿ ಬಳಿ ಅಣೆಕಟ್ಟೆಯ ದಕ್ಷಿಣ ದ್ವಾರದ ಸಮೀಪ ಜಲಾಶಯದಿಂದ ಕ್ರೆಸ್ಟ್ ಗೇಟ್‍ಗಳ ಮೂಲಕ ಧುಮ್ಮಿಕ್ಕುತ್ತಿರುವ ಹಾಲಿನ ಹೊಳೆ ಯನ್ನು ನೋಡಿ ಅದರ ಸೌಂದರ್ಯ ಸವಿಯುವ ಅವಕಾಶ. ಹಾಗಾಗಿ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಜಲಸಾಗರ ವೀಕ್ಷಿಸಲು ಜನ ಸಾಗರವೇ ಕೆಆರ್‌ಎಸ್‌ಗೆ ಹರಿದು ಬರುತ್ತಿರುವುದರಿಂದ ಅಧಿಕಾರಿಗಳು ಹರಿವ ನೀರಿಗೆ ವಿಶೇಷ ಮೆರಗು ನೀಡಿದ್ದಾರೆ.

ನದಿಗೆ ಬಿಡಲಾಗಿರುವ ನೀರಿಗೆ ಬಣ್ಣಬಣ್ಣದ ವಿದ್ಯುದ್ದೀಪಾಲಂಕಾರ ಮಾಡಿದ್ದಾರೆ. ಸುಮಾರು 500 ಎಲ್‍ಇಡಿ ಲೈಟ್ ಗಳನ್ನು ಅಳವಡಿಸಿರುವುದರಿಂದ ಅಣೆಕಟ್ಟೆ ಹಾಗೂ ಇಡೀ ಕೆಆರ್‌ಎಸ್‌ ಈಗ ವರ್ಣರಂಜಿತವಾಗಿ ಕಂಗೊಳಿಸುತ್ತಿದ್ದು, ರಾತ್ರಿ ವೇಳೆ ದೃಶ್ಯ ಮನ ಮೋಹಕವಾಗಿದೆ. ಸಫ್ರಾನ್, ಬಿಳಿ, ಹಸಿರು, ಕೆಂಪು, ಪರ್ಪಲ್, ಹಳದಿ, ನೀಲಿ ಬಣ್ಣಗಳ ವಿದ್ಯುದ್ದೀಪಗಳು ಅಣೆಕಟ್ಟೆ ಮತ್ತು ನದಿಯ ನೀರನ್ನು ವರ್ಣಮಯವಾಗಿಸಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ಈ ಹಿಂದೆ ದೋಣಿ ವಿಹಾರ ತಾಣದಲ್ಲಿ ತೇಲುವ ವೇದಿಕೆ ನಿರ್ಮಿಸಿ ವಿದ್ಯುದ್ದೀಪಾಲಂಕಾರ ಮಾಡಿ ಸುಂದರಗೊಳಿ ಸಿದ್ದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಇದೀಗ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಅವರ ಪರಿಕಲ್ಪನೆ ಹಾಗೂ ಸಲಹೆಯಂತೆ ಹೊರ ಹರಿಯು ತ್ತಿರುವ ಕಾವೇರಿಗೆ ಬಣ್ಣದ ದೀಪಗಳಿಂದ ಶೃಂಗರಿಸಲಾಗಿದೆ.

ಪ್ರತೀ ದಿನ 30,000 ಮಂದಿ ಕೆಆರ್‌ಎಸ್‌ ವೀಕ್ಷಿಸಲು ಬರುತ್ತಿರು ವುದರಿಂದ ಕೇವಲ ಬೋರ್ಗರೆತಕ್ಕಷ್ಟೇ ಸೀಮಿತಗೊಳಿಸದೆ, ರಾತ್ರಿ ವೇಳೆ ವರ್ಣರಂಜಿತವಾಗಿ ಕಾಣುವ ನೀರನ್ನು ನೋಡಿ ಸಂತೋಷಪಡಲಿ ಎಂಬ ಉದ್ದೇಶದಿಂದ 7 ಬಗೆಯ ಬಣ್ಣದ ಲೈಟುಗಳಿಂದ ಶೃಂಗರಿಸಲಾಗಿದೆ ಎಂದು ನಿಗಮದ ಎಕ್ಸಿಕ್ಯೂಟಿವ್ ಇಂಜಿನಿಯರ್ ಕೆ. ಬಸವರಾಜೇಗೌಡ ತಿಳಿಸಿದ್ದಾರೆ.

ಜಲಾಶಯಕ್ಕೆ 71,353 ಕ್ಯೂಸೆಕ್ಸ್ ಒಳ ಹರಿವಿದ್ದು, ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ 76,106 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಯ ಬಿಡಲಾಗುತ್ತಿದೆ. ಹೊರ ಹರಿವು 40,000 ಕ್ಯೂಸೆಕ್ಸ್‍ಗೆ ಇಳಿಯುವವರೆಗೂ ಉತ್ತರ ಬೃಂದಾವನಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗುವುದು ಎಂದು ತಿಳಿಸಿದರು.

ವಿದ್ಯುದೀಪಾಲಂಕಾರ ಮಾಡಿದ ನಂತರವಂತೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೆಆರ್‌ಎಸ್‌ನತ್ತ ಧಾವಿಸುತ್ತಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು, ಕಾವೇರಿ ನೀರಾವರಿ ನಿಗಮ, ತೋಟಗಾರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ.

Translate »