ಲೋಕಸಭಾ ಚುನಾವಣೆ ಹೀನಾಯ ಸೋಲಿಗೆ ಮೊದಲು ಸಿದ್ದರಾಮಯ್ಯಗೆ  ನೋಟೀಸ್ ನೀಡಿ: ರೋಷನ್ ಬೇಗ್
ಮೈಸೂರು

ಲೋಕಸಭಾ ಚುನಾವಣೆ ಹೀನಾಯ ಸೋಲಿಗೆ ಮೊದಲು ಸಿದ್ದರಾಮಯ್ಯಗೆ ನೋಟೀಸ್ ನೀಡಿ: ರೋಷನ್ ಬೇಗ್

June 5, 2019

ಬೆಂಗಳೂರು: ಪ್ರಸಕ್ತ ಲೋಕಸಭಾ ಚುನಾ ವಣೆಯಲ್ಲಿ ಪಕ್ಷ ದಯನೀಯವಾಗಿ ಸೋಲಲು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್-ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕಾರಣರಾಗಿದ್ದು, ಈ ಹಿನ್ನೆಲೆಯಲ್ಲಿ ಮೊದಲು ಅವರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಬೇಕೆಂದು ಮಾಜಿ ಸಚಿವ, ಹಿರಿಯ ಮುಖಂಡ ರೋಷನ್ ಬೇಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಳು ಬಾರಿ ಗೆದ್ದಿರುವ ತಮಗೆ ಮಂತ್ರಿ ಸ್ಥಾನ ನೀಡದೇ ನಿರ್ಲಕ್ಷ್ಯ ವಹಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಟೀಕೆ ಮಾಡಿ ರುವ ಬೆನ್ನಲ್ಲೇ ಇದೀಗ ರೋಷನ್ ಬೇಗ್ ಇಂದು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮತ್ತಿತರ ನಾಯಕರ ವಿರುದ್ಧ ವಾಗ್ದಾಳಿ ನಡೆ ಸಿದ್ದಾರೆ. ಸಿದ್ದು ಮತ್ತು ದಿನೇಶ್ ಮೊದಲು ರಾಜೀನಾಮೆ ನೀಡಬೇಕು ಎಂದು ಪುನರುಚ್ಚರಿಸಿದ್ದಾರೆ. ನಾವು ವಿದ್ಯಾರ್ಥಿ ಜೀವನದಿಂದ ಸಾರ್ವಜನಿಕ ಕ್ಷೇತ್ರಕ್ಕೆ ಬಂದವರು. ಬೀದಿ ಹೋರಾಟ ಮಾಡಿ ದವರು. ನಾವು ಯಾರಿಗೂ ಹೆದರುವವರಲ್ಲ ಎಂದು ಸಹ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ರೋಷನ್ ಬೇಗ್, “ಲೋಕಸಭಾ ಚುನಾವಣೆಗೂ ಮುನ್ನ ನಾನೇ ಮುಂದಿನ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದರು. ಅವರ ಛೇಲಗಳು ಅದನ್ನೇ ಹೇಳುತ್ತಿದ್ದರು. ಈಗ ಫಲಿತಾಂಶ ಬಂದ ಮೇಲೆ ಇದೆಲ್ಲ ಇಳಿಯಿತೆ ಸಿದ್ದರಾಮಯ್ಯ ಎಂದ ರೋಷನ್ ಬೇಗ್, “ಇಳಿದು ಬಾ, ನೀ ಇಳಿದು ಬಾ” ಎಂದು ಸಿದ್ದರಾಮಯ್ಯ ಮಾದರಿಯನ್ನೇ ಅನುಕರಿಸಿ ನಟನೆಯ ಮೂಲಕ ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಅವರಿಗೆ ನಾನು ಹೇಳಿದ್ದೇ ನಡೆಯಬೇಕು. ನಾನೇ ಹೇಳಿದ ಹಾಗೇ ನಡೆಯಬೇಕು ಎನ್ನುವ ಮನೋಭಾವವಿದೆ. ಲಿಂಗಾಯತ ಸಮುದಾಯವನ್ನು ವಿಭಜನೆ ಮಾಡಲು ಹೋಗಿದ್ದಲ್ಲದೇ ಎಲ್ಲಾ ಕಡೆಗಳಲ್ಲಿ ಸ್ವೀಪ್ ಮಾಡುತ್ತೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದಿರಿ. ಆಗ ನಮ್ಮ ಮಾತು ಕೇಳಲಿಲ್ಲ. ಇಂತಹ ಮನಸ್ಥಿತಿ ಹೊಂದಿರುವ ಸಿದ್ದರಾಮಯ್ಯ, ಅವರಪ್ಪನಾಣೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಕುಮಾರಸ್ವಾಮಿ ಅವರಿಗೆ ಹೇಳುತ್ತಿದ್ದರು. ಆದರೆ ಸಿದ್ದರಾಮಯ್ಯ ಅವರೇ ಮುಂದೆ ನಿಂತು ಮುಖ್ಯಮಂತ್ರಿ ಮಾಡಿದರು. ಇದಕ್ಕಿಂತ ರಾಜಕೀಯ ದುರಂತ ಮತ್ತೊಂದಿಲ್ಲ ಎಂದರು. ಕಾಂಗ್ರೆಸ್‍ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ, ನಾನು ಅವರ ನಿಲುವನ್ನು ಬೆಂಬಲಿಸುತ್ತೇನೆ. ಅಷ್ಟೇಕೆ ಅವರ ಜೊತೆಯಲ್ಲಿಯೇ ಇರುತ್ತೇನೆ. ಕಾಂಗ್ರೆಸ್‍ನಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದ್ದು, ತಮಗೆ ಸಚಿವ ಸ್ಥಾನ ಕೊಟ್ಟಿಲ್ಲ. ಆದರೆ ರಾಮಲಿಂಗಾರೆಡ್ಡಿ, ಹೆಚ್.ಕೆ ಪಾಟೀಲ್ ಅವರಂತಹ ನಾಯಕರಿಗೂ ಸಚಿವ ಸ್ಥಾನ ನೀಡುವುದಿಲ್ಲ ಎಂದರೆ ಹೇಗೆ?. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಬಿಡುವುದಿಲ್ಲ. ಬೇರೆ ಪಕ್ಷ ಸೇರುವುದೂ ಇಲ್ಲ. ನನ್ನ ಸ್ನೇಹಿತ ರಾಮಲಿಂಗಾ ರೆಡ್ಡಿ ಜತೆ ನಾನು ಸಹ ಇರುತ್ತೇನೆ. ಆದರೆ ಈ ಸರ್ಕಾರದಲ್ಲಿ ತಾವು ಮಂತ್ರಿಯಾಗುವುದಿಲ್ಲ ಎಂದರು.

ಪಕ್ಷದ ನಾಯಕರನ್ನು ಟೀಕಿಸಿದ ಕಾರಣಕ್ಕಾಗಿ ತಮಗೆ ನೀಡಿರುವ ನೋಟೀಸ್‍ಗೆ ಯಾವುದೇ ಕಾರಣಕ್ಕೂ ಉತ್ತರ ನೀಡುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಸಿದ್ದರಾಮಯ್ಯ ಅವರೇ ಮೂಲ ಕಾರಣ. ಮಂಡ್ಯದಲ್ಲಿ ಮೈತ್ರಿ ಪಕ್ಷದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ ಸ್ವಾಮಿ ಅವರನ್ನು ಸೋಲಿಸಲು ಸಂಚು ರೂಪಿಸಿ ಅದನ್ನು ಕಾರ್ಯಗತಗೊಳಿಸಿದ್ದಾರೆ. ತುಮಕೂರಿನಲ್ಲಿ ದೇವೇಗೌಡರ ಸೋಲಿಗೂ ನಮ್ಮವರೇ ಕಾರಣರಾಗಿದ್ದಾರೆ. ಇದೇ ರೀತಿ ಹಲವು ಕ್ಷೇತ್ರಗಳಲ್ಲಿ ಪಕ್ಷ ಸೋಲಲು ಅವರ ಕೊಡುಗೆ ಇದೆ. ಹೀಗಾಗಿ ಮೊದಲು ಅವರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಬೇಕು ಎಂದು ಹೇಳಿದರು.

ನೋಟೀಸ್ ಕೊಡುವುದಾದರೆ ಕೋಲಾರದಲ್ಲಿ ಮುನಿಯಪ್ಪ ಅವರ ಸೋಲಿಗೆ ಕಾರಣರಾದವರಿಗೆ ಕೊಡಲಿ, ದೇವೇಗೌಡರನ್ನು ಸೋಲಿಸಿದ್ದು ನಮ್ಮ ಪಕ್ಷದವರೇ. ಅವರಿಗೆ ಯಾಕೆ ನೋಟೀಸ್ ಕೊಟ್ಟಿಲ್ಲ, ಮಂಡ್ಯದಲ್ಲಿ ನಿಖಿಲ್ ವಿರುದ್ಧ ಬಹಿರಂಗವಾಗಿಯೇ ನಮ್ಮ ಪಕ್ಷದವರು ಕೆಲಸ ಮಾಡಿದರು. ಹೀಗಿದ್ದೂ ಏಕೆ ನೋಟೀಸ್ ನೀಡಿಲ್ಲ, ಇದೆಲ್ಲಾ ಕಣ್ಣ ಮುಂದಿದ್ದರೂ ಸತ್ಯ ಶೋಧನಾ ಸಮಿತಿ ರಚಿಸಲಾಗಿದೆ. ಇದನ್ನು ನೋಡಿ ನೋಡಿ ತಮಗೆ ನಗು ಬರುತ್ತಿದೆ ಎಂದರು. ಪಕ್ಷ ಮತ್ತು ಸರ್ಕಾರದಲ್ಲಿ ಸೂಕ್ತ ಹೊಂದಾಣಿಕೆ ಇಲ್ಲ. ಹೊಂದಾಣಿಕೆ ಮಾಡಲು ಕಾರ್ಯತಂತ್ರ ರೂಪಿಸಿಲ್ಲ. ಇದನ್ನು ಮಾಡಬೇಕಾದ ದಿನೇಶ್ ಗುಂಡೂರಾವ್ ಅವರಿಗೆ ಪ್ರಬುದ್ಧತೆ ಇಲ್ಲ, ಇವರು ವಿಫಲ ನಾಯಕ. ಇಂತಹ ನಾಯಕರು ರಾಹುಲ್ ಗಾಂಧಿ ಅವರನ್ನೇ ದಾರಿ ತಪ್ಪಿಸಿದ್ದಾರೆ. ಹೀಗಾಗಿ ನಾನು ವೈಯಕ್ತಿಕವಾಗಿ ರಾಹುಲ್ ಗಾಂಧಿ ಅವರಲ್ಲಿ ಕ್ಷಮೆ ಕೋರುತ್ತೇನೆ. ಇಷ್ಟಕ್ಕೂ ರಾಹುಲ್ ಗಾಂಧಿ ರಾಜೀನಾಮೆ ನೀಡಬೇಕಿಲ್ಲ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೊದಲು ರಾಜೀನಾಮೆ ಕೊಡಬೇಕು ಎಂದರು.

Translate »