ಕಾರಿಗೆ ಲಾರಿ ಡಿಕ್ಕಿ: ನಿವೃತ್ತ ಕೆಎಎಸ್ ಅಧಿಕಾರಿ ಡಾ.ಕೆ.ಎ.ಅಪ್ಪಯ್ಯ ಸಾವು
ಮೈಸೂರು

ಕಾರಿಗೆ ಲಾರಿ ಡಿಕ್ಕಿ: ನಿವೃತ್ತ ಕೆಎಎಸ್ ಅಧಿಕಾರಿ ಡಾ.ಕೆ.ಎ.ಅಪ್ಪಯ್ಯ ಸಾವು

June 5, 2019

ಕುಶಾಲನಗರ: ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಿವೃತ್ತ ಕೆಎಎಸ್ ಅಧಿಕಾರಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಡಿಕೇರಿ-ಹಾಸನ ರಾಜ್ಯ ಹೆದ್ದಾರಿ ತೊರೆನೂರು ಗ್ರಾಮದ ಬಳಿ ಮಂಗಳವಾರ ಸಂಭವಿಸಿದೆ.

ಮೂಲತಃ ಮಡಿಕೇರಿ ತಾಲೂಕು, ಮೂರ್ನಾಡು ಸಮೀಪದ ಕುಂಬಳ ದಾಳು ನಿವಾಸಿ, ನಿವೃತ್ತ ಎಸಿ ಡಾ.ಕೆ.ಎ.ಅಪ್ಪಯ್ಯ(65) ಅಪಘಾತದಲ್ಲಿ ಮೃತಪಟ್ಟಿದ್ದು, ಜೊತೆಯಲ್ಲಿದ್ದ ಅವರ ಪತ್ನಿ ಮೀನಾಕ್ಷಿ ಅವರು ಅದೃಷ್ಟವ ಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಹಿಂಭಾಗದ ಸೀಟ್ ನಲ್ಲಿದ್ದ ಅಪ್ಪಯ್ಯ ಅವರ ಪ್ರೀತಿಯ ಶ್ವಾನವೂ ಬದುಕುಳಿದಿದೆ. ಬೆಂಗಳೂರಿನ ಹೆಬ್ಬಾಳು ಬಡಾವಣೆಯಲ್ಲಿ ನೆಲೆಸಿರುವ ಅಪ್ಪಯ್ಯ ಅವರು, ನಾಗದೇವತೆ ಪೂಜೆಗೆಂದು ಮಂಗಳವಾರ ಪತ್ನಿಯೊಂದಿಗೆ ಕಾರಿ(ಕೆಎ-04, ಎಂ.ಕೆ.4095) ನಲ್ಲಿ ಹಾಸನ-ಮಡಿಕೇರಿ ಹೆದ್ದಾರಿ ಮೂಲಕ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ, ತೊರೆನೂರು ಗ್ರಾಮದ ಬಳಿ ಎದುರಿನಿಂದ ಬಂದ ಲಾರಿ (ಕೆ.ಎ.42.3826) ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಲಾರಿ ರಸ್ತೆ ಬದಿಯ ಗದ್ದೆಹಳ್ಳಕ್ಕೆ ಇಳಿದರೆ, ಕಾರು ರಸ್ತೆ ತಡೆಗೋಡೆಗೆ ಅಪ್ಪಳಿಸಿ, ನಜ್ಜುಗುಜ್ಜಾಗಿದೆ. ಪರಿಣಾಮ ಕಾರು ಚಾಲಿಸುತ್ತಿದ್ದ ಅಪ್ಪಯ್ಯ ಅವರಿಗೆ ತೀವ್ರ ಪೆಟ್ಟಾಗಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಅವರ ಪತ್ನಿ ಮೀನಾಕ್ಷಿ ಅವರಿಗೆ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಲಾರಿ ಚಾಲಕ ಪ್ರಕಾಶ್‍ಗೂ ಗಾಯಗಳಾಗಿದ್ದು, ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆ.ಎ.ಅಪ್ಪಯ್ಯ ಅವರ ಮೃತದೇಹವನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ. ಅಪ್ಪಯ್ಯ ಅವರ ಪುತ್ರಿಯೊಬ್ಬರು ಕೆನಡಾದಲ್ಲಿ ನೆಲೆಸಿದ್ದು, ಅವರು ಬಂದ ನಂತರ ಮುಂದಿನ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ನಿರ್ಧರಿಸಿದ್ದಾರೆ. ಹಾಗಾಗಿ ಅಪ್ಪಯ್ಯ ಅವರ ದೇಹವನ್ನು ಮೈಸೂರು ಅಪೋಲೋ ಆಸ್ಪತ್ರೆಯೆ ಶವಾಗಾರದಲ್ಲಿ ಸಂರಕ್ಷಿಸಲಾಗಿದೆ. ಅಪಘಾತ ವಿಷಯ ತಿಳಿದು ಸುತ್ತಮುತ್ತಲ ಗ್ರಾಮಗಳ ನೂರಾರು ಜನ ಸ್ಥಳದಲ್ಲಿ ಜಮಾಯಿಸಿದ್ದರು. ಮೃತ ಅಪ್ಪಯ್ಯ ಕುಟುಂಬ ವರ್ಗದವರ ರೋದನ ಮುಗಿಲು ಮುಟ್ಟಿತ್ತು. ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕುಶಾಲನಗರ ಡಿವೈಎಸ್‍ಪಿ ದಿನಕರ್‍ಶೆಟ್ಟಿ, ವೃತ್ತ ನಿರೀಕ್ಷಕ ದಿನೇಶ್‍ಕುಮಾರ್, ಕುಶಾಲನಗರ ಸಂಚಾರ ಪೊಲೀಸ್ ಠಾಣೆಯ ಠಾಣಾಧಿಕಾರಿ ಸೋಮೇಗೌಡ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಕುಶಾಲನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆÉ.

ಅಪ್ಪಯ್ಯ ಅವರು ಕಳೆದ ನಾಲ್ಕು ವರ್ಷಗಳ ಹಿಂದೆ ಉಪವಿಭಾಗಾಧಿಕಾರಿ ಹುದ್ದೆ ಯಿಂದ ನಿವೃತ್ತಿಯಾಗಿ, ಬೆಂಗಳೂರಿನ ಹೆಬ್ಬಾಳದ ನಿವಾಸದಲ್ಲಿ ನೆಲೆಸಿದ್ದರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ 3 ವರ್ಷ, ಬಿ.ಎಸ್.ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ 2 ವರ್ಷ ಹಾಗೂ ಸದಾನಂದಗೌಡ ಅವರು ಸಿಎಂ ಆಗಿದ್ದಾಗ ಒಂದೂವರೆ ವರ್ಷಗಳ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಕಂದಾಯ ಇಲಾಖೆಗೆ ಮರಳಿ ನಿವೃತ್ತರಾಗಿದ್ದರು.

ಯಜಮಾನನ ಸಾವಿಗೆ ಶ್ವಾನ ಸಂಕಟ: ಅಪ್ಪಯ್ಯ ದಂಪತಿಯೊಂದಿಗೆ ಅವರ ಪ್ರೀತಿಯ ಶ್ವಾನವೂ ಕಾರಿನಲ್ಲಿತ್ತು. ಹಿಂಭಾಗದ ಸೀಟ್‍ನಲ್ಲಿದ್ದ ಶ್ವಾನ ಅಪಘಾತ ಸಂಭವಿಸಿದಾಗ ಕಾರಿನಿಂದ ಹೊರ ಬಂದು ಬೊಗಳುತ್ತಾ ಕೆ.ಎ.ಅಪ್ಪಯ್ಯ ಅವರ ಹತ್ತಿರಕ್ಕೆ ಹೋಗಿ ಕಣ್ಣೀರಿಡುತಿದ್ದ ದೃಶ್ಯ ಮನ ಕಲಕುವಂತಿತ್ತು. ಅಪ್ಪಯ್ಯ ಅವರ ಮೃತದೇಹವನ್ನು ಕುಶಾಲನಗರಕ್ಕೆ ಸಾಗಿಸಿದ ನಂತರ ಅವರ ಸಂಬಂಧಿಕರೊಬ್ಬರು ಶ್ವಾನವನ್ನು ತಮ್ಮ ಕಾರಿಗೆ ಹತ್ತಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಆ ಶ್ವಾನ ತನ್ನ ಯಜಮಾನನ ಕಾರಿನ ಹತ್ತಿರಕ್ಕೆ ಎಳೆದೊಯ್ಯುತ್ತಿತ್ತು. ಕಡೆಗೆ ಶ್ವಾನವನ್ನು ಬಲವಂತವಾಗಿ ಕರೆದೊಯ್ಯಲಾಯಿತು.

Translate »