ಮೈಸೂರು ನಗರಪಾಲಿಕೆ ಇಂಜಿನಿಯರ್‍ಗಳಾದ ಸುನಿಲ್ ಬಾಬು, ಮೋಹನಕುಮಾರಿ ಅಮಾನತು
ಮೈಸೂರು

ಮೈಸೂರು ನಗರಪಾಲಿಕೆ ಇಂಜಿನಿಯರ್‍ಗಳಾದ ಸುನಿಲ್ ಬಾಬು, ಮೋಹನಕುಮಾರಿ ಅಮಾನತು

June 5, 2019

– ಎಸ್.ಟಿ. ರವಿಕುಮಾರ್

ಮೈಸೂರು: ಮೈಸೂರಿನ ಪ್ರತಿ ಷ್ಠಿತ ಮಹಾತ್ಮ ಗಾಂಧಿ ರಸ್ತೆ ಕಾಮಗಾರಿ ಯಲ್ಲಿ ನಕಲಿ ಬಿಲ್ ತಯಾರಿಸಿ 1.40 ಕೋಟಿ ರೂ. ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿರುವ ಮೈಸೂರು ಮಹಾನಗರ ಪಾಲಿಕೆ ಅಸಿಸ್ಟೆಂಟ್ ಎಗ್ಸಿ ಕ್ಯುಟಿವ್ ಇಂಜಿನಿಯರ್ ಸುನಿಲ್ ಬಾಬು ಹಾಗೂ ಕಿರಿಯ ಇಂಜಿನಿಯರ್ ಎಂ.ವಿ. ಮೋಹನ ಕುಮಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ(ಮಹಾನಗರ ಪಾಲಿಕೆ-2) ನಾಗರಾಜ ಅವರು ಜೂನ್ 1 ರಂದು ಆದೇಶ (ಸಂಖ್ಯೆ : ನಇ 62 ಎಸಿಎಂ 2019) ಹೊರಡಿಸಿದ್ದಾರೆ. ಹಣ ದುರುಪಯೋಗ ಪ್ರಕರಣದಲ್ಲಿ ಭಾಗಿಯಾಗಿ ದ್ದಾರೆನ್ನಲಾದ ಪ್ರಥಮ ದರ್ಜೆ ಗುತ್ತಿಗೆದಾರ ಸಿ.ಕರೀಗೌಡರನ್ನು ಕಪ್ಪುಪಟ್ಟಿಗೆ ಸೇರಿ ಸಿದ್ದು, ಮೈಸೂರು ಮಹಾನಗರ ಪಾಲಿ ಕೆಯು ಮೂವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಠಾಣೆಗೆ ದೂರು ನೀಡಿದೆ. ಮೂಲತಃ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ಸುನಿಲ್ ಬಾಬು ಹಾಗೂ ಮೋಹನ ಕುಮಾರಿ ಅವರು ಕಳೆದ ಒಂದೂವರೆ ವರ್ಷದ ಹಿಂದಷ್ಟೇ ಮೈಸೂರು ಮಹಾನಗರ ಪಾಲಿಕೆಗೆ ಡೆಪ್ಯುಟೇಷನ್ ಮೇಲೆ ನಿಯೋಜನೆಗೊಂಡಿದ್ದರು. ಸಾರ್ವಜನಿಕರ ತೆರಿಗೆ ಹಣ ದುರುಪ ಯೋಗಪಡಿಸಿಕೊಂಡು ಪಾಲಿಕೆಗೆ ಆರ್ಥಿಕ ನಷ್ಟವನ್ನುಂಟು ಮಾಡಿರುವ ಅವರು ಸಕ್ಷಮ ಪ್ರಾಧಿಕಾರದ ಪೂರ್ವಾನುಮೋದನೆ ಪಡೆಯದೆ ಕೇಂದ್ರಸ್ಥಾನ ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮೈಸೂರು ಕೋರ್ಟ್ ಮುಂಭಾಗದಿಂದ ರಾಷ್ಟ್ರೀಯ ಹೆದ್ದಾರಿ 212 ವರೆಗೆ ಎಂಜಿ ರಸ್ತೆ ಮತ್ತು ಅದರ ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿ ನಿರ್ವಹಣೆಯಲ್ಲಿ ಪಾಲಿಕೆಗೆ ಲೋಪವೆಸಗಿರುವ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ಸುನಿಲ್ ಬಾಬು ಹಾಗೂ ಜೂನಿಯರ್ ಇಂಜಿನಿಯರ್ ಎಂವಿ ಮೋಹನಕುಮಾರಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕಳೆದ ಏಪ್ರಿಲ್ 24 ರಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಏನಿದು ಹಗರಣ : ಮೈಸೂರು ಜಿಲ್ಲಾ ನ್ಯಾಯಾಲಯದ ಎದುರಿನಿಂದ ಎಂಆರ್‍ಸಿ ಸರ್ಕಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 212 ವರೆಗೆ ಮಹಾತ್ಮ ಗಾಂಧಿ ರಸ್ತೆಯಲ್ಲಿನ ಆಯ್ದ ಭಾಗಗಳಲ್ಲಿ ರಸ್ತೆ ಮತ್ತು ಪಾದಚಾರಿ ಮಾರ್ಗ ಅಭಿವೃದ್ಧಿ ಸಂಬಂಧ ಮೈಸೂರು ಮಹಾ ನಗರ ಪಾಲಿಕೆಯು 4 ಕೋಟಿ ರೂ.ಗಳ ಕಾಮಗಾರಿಗೆ ಅನುಮೋದನೆ ನೀಡಿತ್ತು.

ಪಾಲಿಕೆ ವಲಯ ಕಚೇರಿ-1ರ ಸಹಾಯಕ ಆಯುಕ್ತರಾದ ಸುನಿಲ್ ಬಾಬು ಮತ್ತು ಜೂನಿಯರ್ ಇಂಜಿನಿಯರ್ ಎಂ.ವಿ. ಮೋಹನಕುಮಾರಿ, ಕಾಮಗಾರಿ ಪೂರ್ಣಗೊಳಿಸಲಾ ಗಿದೆ ಎಂದು ಹಿಂದಿನ ಅವಧಿಯಲ್ಲಿ ನಡೆದಿದ್ದ ಕಾಮಗಾರಿಗಳಿಗೆ ಮತ್ತೆ 1,40,68,850 ರೂ. ಮೊತ್ತದ ಫೋರ್ಜರಿ ಬಿಲ್ ಮಾಡುವ ಮೂಲಕ ಈ ಭಾರೀ ಹಣ ದುರ್ಬಳಕೆ ಮಾಡಿದ್ದಾರೆಂದು ಜನವರಿ 20ರಂದು ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಬಿ.ವಿ.ಮಂಜುನಾಥ್ ಗಂಭೀರ ಆರೋಪ ಮಾಡಿದ್ದರು.

ಸತ್ಯಶೋಧನಾ ಸಮಿತಿ : ಸದರಿ ಆರೋಪದ ಹಿನ್ನೆಲೆಯಲ್ಲಿ ಪಾಲಿಕೆಯು ಮೇಯರ್ ಪುಷ್ಟಲತಾ ಜಗನ್ನಾಥ್ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿಯನ್ನು ರಚಿಸಿದ್ದು, ಪಾಲಿಕೆ ಕೌನ್ಸಿಲ್ ಕಾರ್ಯದರ್ಶಿ ಆರ್.ರಂಗಸ್ವಾಮಿ ಸದಸ್ಯ ಕಾರ್ಯದರ್ಶಿಯಾಗಿರುವ ಸಮಿತಿಯಲ್ಲಿ ಉಪಮೇಯರ್ ಷಫೀ ಅಹಮದ್, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ, ಆಡಳಿತ ಪಕ್ಷದ ನಾಯಕಿ ಹೆಚ್.ಎಂ.ಶಾಂತಕುಮಾರಿ, ಜೆಡಿಎಸ್ ನಾಯಕಿ ಎಸ್.ಪ್ರೇಮಾ ಶಂಕರೇಗೌಡ, ಮಾಜಿ ಮೇಯರ್ ಅಯೂಬ್‍ಖಾನ್, ಕಾರ್ಪೊರೇಟರ್ ಗಳಾದ ಶಿವಕುಮಾರ್, ಎಂ.ವಿ. ರಾಮಪ್ರಸಾದ್ ಹಾಗೂ ಲೋಕೋಪಯೋಗಿ ಇಲಾಖೆ ಸೂಪರಿಂಟೆಂಡೆಂಟ್ ಇಂಜಿನಿಯರ್ ಕೆ.ವಿ. ಪ್ರಕಾಶ ಸದಸ್ಯರಾಗಿದ್ದಾರೆ.

ಅಮಾನತಿಗೆ ಶಿಫಾರಸ್ಸು: ಹಗರಣ ಕುರಿತಂತೆ ಪರಿಶೀಲಿಸಿದ ಸತ್ಯ ಶೋಧನಾ ಸಮಿತಿಯು ರಸ್ತೆ ಕಾಮಗಾರಿ ಹೆಸರಲ್ಲಿ ನಕಲಿ ಬಿಲ್ ತಯಾರಿಸಿ 1.40 ಕೋಟಿ ರೂ. ದುರುಪಯೋಗ ಮಾಡಿರುವುದು ಮೇಲ್ನೋಟಕ್ಕೆ ಸತ್ಯ ಎಂದು ತಿಳಿದು ಬಂದಿರುತ್ತದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿ ಆಧರಿಸಿ ಸುನಿಲ್ ಬಾಬು, ಎಂ.ವಿ.ಮೋಹನ ಕುಮಾರಿ, ಪ್ರಥಮ ದರ್ಜೆ ಗುತ್ತಿಗೆದಾರ ಸಿ.ಕರಿಗೌಡ 3ನೇ ವ್ಯಕ್ತಿ (3ಡಿಜ ಪಾರ್ಟಿ iಟಿsಠಿeಛಿಣioಟಿ) ತಪಾಸಣೆದಾರರಾದ ಕ್ಯಾಡ್ ಸ್ಟೇಷನ್ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್ ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡುಬಂದಿರುವುದರಿಂದ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಮಾರ್ಚ್ 8 ರಂದು ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ನಕಲಿ ಬಿಲ್‍ಗಳನ್ನು ತಯಾರಿಸಿ ಈಗಾಗಲೇ ಬೇರೆ ಅನುದಾನದಲ್ಲಿ ನಡೆದಿರುವ ಕಾಮಗಾರಿಯನ್ನು ತಾವೇ ಮಾಡಿದ್ದಾಗಿ ನಮೂದಿಸಿ 1.40 ಕೋಟಿ ರೂ. ಬಿಲ್ ಮಾಡಿರುವ ಪ್ರಥಮ ದರ್ಜೆ ಗುತ್ತಿಗೆದಾರ ಸಿ.ಕರೀಗೌಡರನ್ನು ಕಪ್ಪು ಪಟ್ಟಿಗೆ ಸೇರಿಸಿ ಪಾವತಿಯಾಗಿರುವ ಹಣವನ್ನು ವಸೂಲಿ ಮಾಡಬೇಕೆಂದೂ ಪಾಲಿಕೆ ಕೌನ್ಸಿಲ್ ಸಭೆ ನಿರ್ಣಯಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಎಸಿಬಿ ತನಿಖೆ: ಪ್ರಕರಣ ಸಂಬಂಧ ಮೈಸೂರಿನ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಡಿವೈಎಸ್‍ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಯಾವ ಸಮಯದಲ್ಲಾದರೂ ಆರೋಪಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.




Translate »