ಎನ್‍ಆರ್ ಮೊಹಲ್ಲಾದ ದೊಡ್ಡಮ್ಮ ತಾಯಿ ಛತ್ರದ ಮಾಲೀಕ ರಾಜು ಆತ್ಮಹತ್ಯೆ
ಮೈಸೂರು

ಎನ್‍ಆರ್ ಮೊಹಲ್ಲಾದ ದೊಡ್ಡಮ್ಮ ತಾಯಿ ಛತ್ರದ ಮಾಲೀಕ ರಾಜು ಆತ್ಮಹತ್ಯೆ

June 24, 2018

ಮೈಸೂರು:  ದೇವಾಲಯದ ಅರ್ಚಕರೂ ಆದ ಛತ್ರವೊಂದರ ಮಾಲೀಕ, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿ ನಡೆದಿದೆ.

ಎನ್.ಆರ್.ಮೊಹಲ್ಲಾದ ಗಣೇಶ ದೇವಾಲಯ ರಸ್ತೆಯಲ್ಲಿರುವ ದೊಡ್ಡಮತಾಯಿ ದೇವಾಲಯದ ಅರ್ಚಕ ಹಾಗೂ ದೊಡ್ಡಮ್ಮತಾಯಿ ಛತ್ರದ ಮಾಲೀಕ ರಾಜು(45), ಛತ್ರದ ಹಿಂಭಾಗದಲ್ಲಿರುವ ಬಾತ್‍ರೂಂನಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎನ್.ಆರ್.ಠಾಣೆ ಪೊಲೀಸರು, ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ರಾಜು ಅವರ ಕುಟುಂಬದವರೆಲ್ಲಾ ಚಾಮರಾಜನಗರಕ್ಕೆ ತೆರಳಿದ್ದು, ವಿಷಯ ತಿಳಿಸಲಾಗಿದೆ. ಸಾಲ ಮಾಡಿಕೊಂಡಿದ್ದ ರಾಜು, ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದು, ತನಿಖೆ ನಂತರವೇ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಡಿದ ಎಡವಟ್ಟು ಪ್ರಾಣಕ್ಕೆ ಕುತ್ತಾಯಿತೇ?: ಮತ್ತೊಂದು ಮೂಲದ ಪ್ರಕಾರ ರಾಜು, ಮಾಡಿಕೊಂಡ ಎಡವಟ್ಟು ಅವರ ಅತ್ಮಹತ್ಯೆಗೆ ಕಾರಣವೆಂದು ತಿಳಿದುಬಂದಿದೆ. ದೊಡ್ಡಮ್ಮತಾಯಿ ಛತ್ರದ ಮಾಲೀಕನಾಗಿದ್ದ ರಾಜು, ಒಂದೇ ದಿನ ಎರಡು ಮದುವೆಗೆ ಡೇಟ್ ನೀಡಿದ್ದರು. ಇಂದು ಮಧ್ಯಾಹ್ನ ಎರಡೂ ಕಡೆಯವರು ಛತ್ರದ ಬಳಿ ಬಂದಾಗ ತಾನು ಮಾಡಿರುವ ಎಡವಟ್ಟು ರಾಜುಗೆ ತಿಳಿದಿದೆ. ಕಡೇ ಗಳಿಗೆಯಲ್ಲಿ ಛತ್ರವಿಲ್ಲ ಎಂದಾದರೆ ವಿವಾಹ ನಡೆಯುವುದಾದರೂ ಹೇಗೆ?. ಈಗ ಬೇರೆ ಛತ್ರ ಎಲ್ಲಿ ಸಿಗುತ್ತದೆ?. ಸಿಕ್ಕರೂ ಲಗ್ನ ಪತ್ರಿಕೆಯಲ್ಲಿ ತಿಳಿಸಿರುವ ಛತ್ರವನ್ನು ಬಿಟ್ಟು ಬೇರೆ ಸ್ಥಳದಲ್ಲಿ ವಿವಾಹ ಮಾಡಿದರೆ, ಬರುವವರಿಗೆ ಗೊತ್ತಾಗುವುದು ಹೇಗೆ? ಎಂದು ಪ್ರಶ್ನಿಸಿ, ರಾಜು ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ದೊಡ್ಡ ಗಲಾಟೆಯೇ ನಡೆದಿದೆ.
ಇದರಿಂದ ಮನನೊಂದ ರಾಜು, ಛತ್ರದ ಹಿಂಭಾಗದಲ್ಲಿರುವ ಬಾತ್‍ರೂಂನ ಕಬ್ಬಿಣದ ರಾಡ್‍ಗೆ, ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜು ಮೃತದೇಹವನ್ನು ಮೈಸೂರು ವೈದ್ಯಕೀಯ ಹಾಗೂ ಸಂಶೋಧನಾ ಸಂಸ್ಥೆಯ ಶವಾಗಾರದಲ್ಲಿಡಲಾಗಿದ್ದು, ನಾಳೆ(ಜೂ.24) ಬೆಳಿಗ್ಗೆ ಶವ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Translate »