ಮದುವೆ ಛತ್ರಗಳಲ್ಲಿ ಕಳವು ಮಾಡುತ್ತಿದ್ದ ಕಳ್ಳಿ ಬಂಧನ
ಮೈಸೂರು

ಮದುವೆ ಛತ್ರಗಳಲ್ಲಿ ಕಳವು ಮಾಡುತ್ತಿದ್ದ ಕಳ್ಳಿ ಬಂಧನ

June 24, 2018

ಮೈಸೂರು:  ಸಮಾರಂಭಗಳು ನಡೆಯುವ ಸಂದರ್ಭದಲ್ಲಿ ಛತ್ರಗಳಿಗೆ ತೆರಳಿ, ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳನ್ನು ಕಳವು ಮಾಡುತ್ತಿದ್ದ ಖತರ್ನಾಕ್ ಕಳ್ಳಿ, ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ.

ಸರಗೂರು ಗ್ರಾಮದ ನಿವಾಸಿ ಶಶಿಕಲಾ(50), ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆಯುತ್ತಿದ್ದ ಸಮಾರಂಭವೊಂದರಲ್ಲಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದಾಗ ಲಕ್ಷ್ಮೀಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಳಿಕ ಆಕೆ ನೀಡಿದ ಮಾಹಿತಿ ಮೇರೆಗೆ ವಿವಿಧೆಡೆ ಅಡವಿಟ್ಟಿದ್ದ ಸುಮಾರು 20 ಗ್ರಾಂ ಚಿನ್ನಾಭರಣ ಹಾಗೂ 1600 ಗ್ರಾಂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.

ಮದುವೆ ಛತ್ರಗಳಲ್ಲಿ ಕಳ್ಳತನವಾಗುತ್ತಿರುವ ಬಗ್ಗೆ ಅನೇಕ ದೂರುಗಳು ದಾಖಲಾಗಿದ್ದವು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಸಿಸಿ ಟಿವಿಗಳನ್ನು ಪರಿಶೀಲಿಸಿದಾಗ ಹಲವು ಛತ್ರಗಳಲ್ಲಿ ಮಹಿಳೆಯೊಬ್ಬರ ಚಲನವಲನ ಇರುವುದನ್ನು ಗಮನಿಸಿದ್ದರು. ಅಂದಿನಿಂದ ಆ ಮಹಿಳೆಯ ಶೋಧ ನಡೆಸುತ್ತಿದ್ದರು. ಶುಕ್ರವಾರ ಹೊಯ್ಳಳ ಕರ್ನಾಟಕ ಸಭಾಂಗಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲೂ ಆ ಮಹಿಳೆ ಭಾಗವಹಿಸಿದ್ದಳು. ಕೂಡಲೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಬ್ಯಾಗಿನಲ್ಲಿ ಬೆಳ್ಳಿ ಪದಾರ್ಥಗಳು ಪತ್ತೆಯಾಗಿವೆ. ನಂತರ ವಿಚಾರಣೆ ನಡೆಸಿದಾಗ ಛತ್ರಗಳಲ್ಲಿ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ.

ಶಶಿಕಲಾ ಅವರ ಸಹೋದರಿ ವಿಕಲಾಂಗಚೇತನೆ, ಸಹೋದರ ನಿರುದ್ಯೋಗಿ. ಈ ಮೂವರೂ ಅವಿವಾಹಿತರಾಗಿದ್ದು, ಕಿತ್ತು ತಿನ್ನುವ ಬಡತನವಿದೆ. ಇದರಿಂದಲೇ ಶಶಿಕಲಾ ಕಳ್ಳತನದ ಹಾದಿ ಹಿಡಿದಿದ್ದಳು ಎನ್ನಲಾಗಿದೆ.

ಲಕ್ಷ್ಮೀಪುರಂ ಠಾಣೆ ಇನ್ಸ್‍ಪೆಕ್ಟರ್ ಮಹದೇವಶೆಟ್ಟಿ, ಎಎಸ್‍ಐಗಳಾದ ಗೌರಿಶಂಕರ್, ವನಜಾಕ್ಷಿ, ಸಿಬ್ಬಂದಿಗಳಾದ ಸುದೀಪ್‍ಕುಮಾರ್, ಮಲ್ಲಿಕಾರ್ಜುನಸ್‍ವಾಮಿ, ಸಿದ್ದಪ್ಪಾಜಿ ಹಾಗೂ ಸ್ವಾಮಿ ಕಾರ್ಯಾಚರಣೆ ನಡೆಸಿ, ಕಳ್ಳಿಯನ್ನು ಬಂಧಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Translate »