ವೃದ್ಧೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಖದೀಮನ ಸೆರೆ
ಮೈಸೂರು

ವೃದ್ಧೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಖದೀಮನ ಸೆರೆ

August 22, 2019

ಮೈಸೂರು, ಆ.21(ಆರ್‍ಕೆ)- ಮನೆ ಮಳಿಗೆಯ ಬಾಡಿಗೆದಾರನೂ ಆದ ಹಣ್ಣಿನ ವ್ಯಾಪಾರಿ, ಹಾಡಹಗಲೇ ತನ್ನ ಮಳಿಗೆ ಮಾಲೀಕರ ಮನೆಗೆ ನುಗ್ಗಿ, ಮನೆಯಲ್ಲಿದ್ದ ವೃದ್ಧೆಯ ಬಾಯಿಗೆ ಬಟ್ಟೆ ತುರುಕಿ ಅವರ ಕೈಗಳಲ್ಲಿದ್ದ 7 ಚಿನ್ನದ ಬಳೆಗಳನ್ನು ದೋಚಿ ಪರಾರಿಯಾಗಿದ್ದು, ಕೇವಲ ಅರ್ಧಗಂಟೆ ಯಲ್ಲಿ ಲಕ್ಷ್ಮೀಪುರಂ ಠಾಣೆ ಪೊಲೀಸರು ಆತನ ಹೆಡೆಮುರಿ ಕಟ್ಟಿದ್ದಾರೆ. ಈ ಆಘಾತ ಕಾರಿ ಘಟನೆ ಮೈಸೂರಿನ ಜಿಲ್ಲಾ ನ್ಯಾಯಾ ಲಯದೆದುರು, ಚಾಮರಾಜಪುರಂನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

ಮೈಸೂರಿನ ಬನ್ನಿಮಂಟಪದ ಅಲೀಂ ನಗರ ನಿವಾಸಿ ಗೌಸ್ ಷರೀಫ್ ಮಗ ರೆಹಮಾನ್ ಷರೀಫ್ (28) ಚಿನ್ನಾಭರಣ ದೋಚಿ, ಸಿಕ್ಕಿಬಿದ್ದಿ ರುವ ಖದೀಮ. ಮೈಸೂರು ಜಿಲ್ಲಾ ನ್ಯಾಯಾಲಯದ ಎದುರು ಚಾಮರಾಜ ಪುರಂನ ನರಸರಾಜ ರಸ್ತೆಯ ಮನುವನ ಪಾರ್ಕ್ ಬಳಿ 1079ನೇ ಸಂಖ್ಯೆಯ ಮನೆ ಯಲ್ಲಿ ವಾಸವಾಗಿರುವ ರಾಮಚಂದ್ರ ಅವರ ಪತ್ನಿ ಶ್ರೀಮತಿ ಆರ್.ನಾಗರತ್ನ (84) ಎಂಬು ವರೇ ಮನೆಯ ಮಳಿಗೆ ಬಾಡಿಗೆದಾರ ರೆಹಮಾನ್ ಷರೀಫ್‍ನಿಂದ ಸುಲಿಗೆಗೊಳ ಗಾಗಿ ಚಿನ್ನದ ಆಭರಣ ಕಳೆದುಕೊಂಡಿದ್ದ ವೃದ್ಧೆ. ಈ ಮನೆಯಲ್ಲಿ ನಾಗರತ್ನ, ಅವರ ಪುತ್ರಿ ಶ್ರೀಮತಿ ಪ್ರಭಾವತಿ ಹಾಗೂ ಅಳಿಯ ಮೋಹನಕುಮಾರ್ ವಾಸಿಸುತ್ತಿದ್ದಾರೆ. ಎಂದಿನಂತೆ ಪ್ರಭಾವತಿ ಇಂದು ಬೆಳಿಗ್ಗೆ ಎದ್ದು ಎದುರಿನ ಮನುವನ ಪಾರ್ಕ್‍ನಲ್ಲಿ ವಾಕಿಂಗ್ ಮಾಡುತ್ತಿದ್ದರೆ, ಅವರ ಪತಿ ಕಣ್ಣಿನ ಆಪರೇಷನ್ ಆಗಿದ್ದರಿಂದ ಮನೆ ಅಂಗಳ ದಲ್ಲೇ ವಾಕ್ ಮಾಡುತ್ತಿದ್ದರು. ಇನ್ನು ನಾಗರತ್ನ ಅವರು ಬೆಳಿಗ್ಗೆ 7.30ರಲ್ಲಿ ಮನೆಯಲ್ಲಿ ಸ್ನಾನದ ಕೋಣೆಯ ವಾಷ್ ಬೇಸಿನ್ ಮುಂದೆ ಹಲ್ಲು ಬ್ರಷ್ ಮಾಡುತ್ತಿದ್ದರು.

ಈ ವೇಳೆ ತಾನು ಹಣ್ಣುಗಳ ದಾಸ್ತಾನಿಗೆ ಬಾಡಿಗೆಗೆ ಪಡೆದಿದ್ದ ಮಳಿಗೆಯ ಮೂಲಕ ಇರುವ ಬಾಗಿಲಿನಿಂದ ದಿಢೀರ್ ಮನೆ ಒಳನುಗ್ಗಿದ ರೆಹಮಾನ್ ಷರೀಫ್ ನಾಗರತ್ನ ಅವರ ಬಾಯಿಗೆ ಬಟ್ಟೆಯನ್ನು ಅದುಮಿಟ್ಟು ಅವರ ಕೈಗಳಲ್ಲಿದ್ದ 120 ಗ್ರಾಂ ತೂಗುವ 7 ಚಿನ್ನದ ಬಳೆಗಳನ್ನು ಕಸಿದುಕೊಂಡು ಕೋಣೆಯ ಬಾಗಿಲು ಹಾಕಿಕೊಂಡು ಮಳಿಗೆ ಮೂಲಕವೇ ಪರಾರಿಯಾಗಿದ್ದಾನೆ. 84 ವರ್ಷದ ನಾಗರತ್ನ, ಗಾಬರಿಗೊಂಡು ಕೋಣೆಯ ಬಾಗಿಲನ್ನು ಎರಡು ಮೂರು ಬಾರಿ ಬಲವಾಗಿ ತಳ್ಳಿ, ತೆಗೆದುಕೊಂಡು ಹೊರಬರುವಷ್ಟರಲ್ಲಿ ವಾಕಿಂಗ್ ಮುಗಿಸಿಕೊಂಡು ಪುತ್ರಿ ಪ್ರಭಾವತಿ ಮನೆಗೆ ಬಂದರು. ಅವರು ವಿಷಯ ತಿಳಿದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳಕ್ಕಾಗಮಿಸಿದ ಲಕ್ಷ್ಮೀಪುರಂ ಠಾಣೆ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಬಲ್ಲಾಳ್ ಸರ್ಕಲ್ ಬಳಿಯ ಪೆಟ್ಟಿಗೆ ಅಂಗಡಿ ಹಿಂಭಾಗ ಅಡಗಿಕೊಂಡಿದ್ದ ರೆಹಮಾನ್ ಷರೀಫ್‍ನನ್ನು ಅರ್ಧ ಗಂಟೆಯೊಳಗೆ ಬಂಧಿಸಿ ಆತನಿಂದ 7 ಚಿನ್ನದ ಬಳೆಗಳನ್ನು ವಶಪಡಿಸಿಕೊಂಡರು. ಸ್ವಲ್ಪ ತಡವಾಗಿದ್ದರೂ ಖದೀಮ ಪರಾರಿಯಾಗುತ್ತಿದ್ದ.

ಈತ ಪ್ರತಿನಿತ್ಯ ಮೈಸೂರು ಕೋರ್ಟ್ ಎದುರು ಮನುವನ ಪಾರ್ಕ್ ಬಳಿ ಫುಟ್‍ಪಾತ್ ಮೇಲೆ ತಳ್ಳು ಗಾಡಿಯಲ್ಲಿ ಕಟ್‍ಫ್ರೂಟ್ಸ್ ಮಾರಾಟ ಮಾಡುತ್ತಿದ್ದು, ಸಮೀಪದಲ್ಲೇ ಇರುವ ನಾಗರತ್ನ ಅವರ ಮನೆಯ ಮಳಿಗೆಯನ್ನು ಬಾಡಿಗೆಗೆ ಪಡೆದು ಅಲ್ಲಿ ಹಣ್ಣುಗಳನ್ನು ದಾಸ್ತಾನಿರಿಸಿದ್ದ. ಪ್ರತೀ ದಿನ ಪ್ರಭಾವತಿ ಅವರು ವಾಕಿಂಗ್ ಹೋಗುತ್ತಿದ್ದು, ಅವರ ಪತಿಗೆ ಕಣ್ಣಿನ ಆಪರೇಷನ್ ಆಗಿರುವುದು ಹಾಗೂ ನಾಗರತ್ನ ಅವರು ಒಬ್ಬರೇ ಮನೆಯಲ್ಲಿರುವ ಸಮಯ ಎಲ್ಲವನ್ನೂ ಹೊಂಚುಹಾಕಿ, ಸಮಯ ಸಾಧಿಸಿದ್ದ ಖದೀಮ, ಕಾರು ಗ್ಯಾರೇಜಿನಿಂದ ಮನೆಗೆ ನುಸುಳಿ ಈ ಕೃತ್ಯ ಎಸಗಿದ್ದ. ಪ್ರಕರಣ ದಾಖಲಿಸಿಕೊಂಡಿರುವ ಲಕ್ಷ್ಮೀಪುರಂ ಠಾಣೆ ಇನ್‍ಸ್ಪೆಕ್ಟರ್ ಎಸ್.ಗಂಗಾಧರ್, ಖದೀಮ ರೆಹಮಾನ್ ಷರೀಫ್‍ನನ್ನು ಸಂಜೆ ವೇಳೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಈ ಪತ್ತೆ ಕಾರ್ಯಾಚರಣೆಯಲ್ಲಿ ಇನ್‍ಸ್ಪೆಕ್ಟರ್ ಜೊತೆಗೆ ಎಎಸ್‍ಐ ಗೌರಿಶಂಕರ್, ಸಿಬ್ಬಂದಿಗಳಾದ ಉಮೇಶ್, ಸುದೀಪ್, ಸಿದ್ದಪ್ಪಾಜಿ, ಪುಟ್ಟಸ್ವಾಮಿ ಹಾಗೂ ಇತರರು ಪಾಲ್ಗೊಂಡಿದ್ದರು. ತಾನು ಮಾಡಿದ್ದ ಸಾಲ ತೀರಿಸುವ ಸಲುವಾಗಿ ಮನೆ ಮಾಲೀಕರ ಒಡವೆಗಳನ್ನೇ ದೋಚಲು ನಿರ್ಧರಿಸಿದ್ದಾಗಿ ವಿಚಾರಣೆ ವೇಳೆ ರೆಹಮಾನ್ ಷರೀಫ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

Translate »