ಮೈಸೂರು, ಆ.21(ಎಂಟಿವೈ, ಹನಗೋಡು ಮಹೇಶ್)- ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಗಜಪಡೆ. ಅಂಬಾರಿ ಆನೆ ಅರ್ಜುನ ನೇತೃತ್ವದ ಆರು ಆನೆಗಳುಳ್ಳ ಮೊದಲ ತಂಡ ನಾಳೆ(ಆ.22) ಬೆಳಿಗ್ಗೆ 11ಕ್ಕೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗೇಟ್‍ನಿಂದ ಮೈಸೂರಿಗೆ ಆಗಮಿಸಲಿವೆ.
ನಾಗರಹೊಳೆ ಅಭಯಾರಣ್ಯದ ಕಾಡಂಚಿನ ಹಾಡಿ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗೇಟ್ ಬಳಿ ನಾಳೆ ಬೆಳಿಗ್ಗೆ 11ಕ್ಕೆ ದಸರಾ ಗಜಪಡೆಗೆ ಮೈಸೂರು ಜಿಲ್ಲೆ ನೆರೆ ಪರಿಹಾರ ಉಸ್ತುವಾರಿಯಾಗಿ ನಿಯೋಜನೆಗೊಂಡಿರುವ ಸಚಿವ ಆರ್.ಅಶೋಕ್ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಸಲ್ಲುವ ಅಭಿಜಿನ್ ಲಗ್ನದಲ್ಲ್ಲಿ ಪುರೋಹಿತ ಎಸ್.ವಿ.ಪ್ರಹ್ಲಾದ್‍ರಾವ್ ವನದೇವತೆ, ಗಣಪತಿ ಪ್ರಾರ್ಥನೆ ಸಲ್ಲಿಸಿ ಆನೆಗಳ ಪಾದ ತೊಳೆದು ಹರಿಶಿನ, ಕುಂಕುಮ, ಅಕ್ಷತೆ, ಗಂಧ, ವಿವಿಧ ಪರಿಮಳ ಪುಷ್ಪ-ಪತ್ರಗಳಿಂದ ಪಾದ ಪೂಜೆ ಸಲ್ಲಿಸಿ, ಗಣಪತಿಗೆ ಇಷ್ಟವಾದ ಮೋದಕ, ಕಡಬು, ಪಂಚಫಲ, ಚಕ್ಕಲಿ, ಕೋಡುಬಳೆ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ನೈವೇದ್ಯ ಮಾಡಿ, ಮಂತ್ರಪುಷ್ಪ, ಗಣಪತಿ ಅರ್ಚನೆ ಪ್ರಾರ್ಥನೆ ಮಾಡಿ ನಾಡಹಬ್ಬ ದಸರಾ ಯಶಸ್ವಿಯಾಗಲೆಂದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಮೊದಲು ಅರಣ್ಯ ಇಲಾಖೆ ವತಿಯಿಂದ ಸಂಪ್ರದಾಯದಂತೆ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಸೇರಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಜಿಲ್ಲಾಡಳಿತದ ವತಿಯಿಂದ ಪೂಜೆ ನೆರವೇರಲಿದೆ. 2004ರಿಂದ ದಸರಾ ಗಜಪಯಣವನ್ನು ಸಾರ್ವಜನಿಕರು ಹಾಗೂ ಸ್ಥಳೀಯ ಗ್ರಾಮಸ್ಥರೊಡಗೂಡಿ ಆಚರಿಸುವ ಪರಂಪರೆಯನ್ನು ಅನುಸರಿಸುತ್ತಾ ಬರಲಾಗಿದ್ದು, ಈ ಕಾರ್ಯಕ್ರಮಕ್ಕೆ ವಿವಿಧ ಗ್ರಾಮಸ್ಥರು ಹಾಗೂ ಸ್ಥಳೀಯ ಹಾಡಿಗಳ ನೂರಾರು ಮಂದಿ ಪಾಲ್ಗೊಳ್ಳುವ ಸಂಪ್ರದಾಯ ರೂಢಿಯಲ್ಲಿದೆ. ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಮೈಸೂರು ಮೇಯರ್ ಪುಷ್ಪಲತಾ ಜಗನ್ನಾಥ್, ಜಿ.ಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್, ಶಾಸಕರಾದ ಎಸ್.ಎ.ರಾಮದಾಸ್, ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಕೆ.ಮಹದೇವು, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮೈಸೂರು ವೃತ್ತದ ಸಿಸಿಎಫ್ ಟಿ.ಹೀರಾಲಾಲ್, ನಾಗರಹೊಳೆ ಸಿಎಫ್ ನಾರಾಯಣಸ್ವಾಮಿ, ಡಿಸಿಎಫ್‍ಗಳಾದ ಅಲೆಕ್ಸಾಂಡರ್, ಡಾ.ಕೆ.ಸಿ.ಪ್ರಶಾಂತ್‍ಕುಮಾರ್, ಜಿ.ಪಂ ಸಿಇಒ ಕೆ.ಜ್ಯೋತಿ, ಪಶುವೈದ್ಯ ಡಾ.ಡಿ.ಎನ್.ನಾಗರಾಜು, ವೈಲ್ಡ್‍ಲೈಫ್ ವಾರ್ಡನ್ ಕೃತಿಕಾ ಆಲನಹಳ್ಳಿ ಹಾಗೂ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಸ್ವಾಗತಕ್ಕೆ ಸಜ್ಜು: ಪ್ರತಿ ವರ್ಷ ವೀರನಹೊಸಹಳ್ಳಿ ಗೇಟ್ ಬಳಿ ನಾಗಾಪುರ ಹಾಡಿಯ ಗಿರಿಜನ ಆಶ್ರಮ ಶಾಲೆ ಮುಂಭಾಗದಲ್ಲಿ ವೇದಿಕೆ ಸಜ್ಜುಗೊಳಿಸಲಾಗಿದೆ. ‘ಗಜಪಡೆಗೆ ಸ್ವಾಗತ’ ಸುಂದರ ಕಮಾನು ಹಾಕಲಾಗಿದೆ. ಹಾಡಿ ಮಕ್ಕಳಿಂದ ಸಾಂಪ್ರದಾಯಿಕ ನೃತ್ಯ, ಟಿಬೆಟ್ ಕ್ಯಾಂಪ್ ಮಕ್ಕಳಿಂದ ನೃತ್ಯ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮೊದಲ ತಂಡದ ಸದಸ್ಯರು: ಈ ಬಾರಿ ದಸರಾದಲ್ಲಿ 14 ಆನೆಗಳು ಪಾಲ್ಗೊಳ್ಳಲಿವೆ. ಮೊದಲ ತಂಡದಲ್ಲಿ ಗಜಪಡೆ ನಾಯಕ ಅರ್ಜುನ, ಅಭಿಮನ್ಯು, ವರಲಕ್ಷ್ಮೀ, ಧನಂಜಯ, ಈಶ್ವರ ಹಾಗೂ ವಿಜಯ ಆನೆ ಆಗಮಿಸಲಿವೆ. ಸಾಂಸ್ಕೃತಿಕ ಕಾರ್ಯಕ್ರಮ ಮುಗಿದ ನಂತರ ಮಧ್ಯಾಹ್ನ ಆನೆಗಳನ್ನು ಲಾರಿ ಮೂಲಕ ಮೈಸೂರಿನ ಅಶೋಕಪುರಂನ ಅರಣ್ಯ ಭವನಕ್ಕೆ ಕರೆತರಲಾಗುತ್ತದೆ. ನಾಳೆ ಗಜಪಯಣ ನಡೆಯಲಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆಯೇ ವಿವಿಧ ಕ್ಯಾಂಪ್‍ಗಳಿಂದ ಮೊದಲ ತಂಡದ ಆರು ಆನೆಗಳನ್ನು ವೀರನಹೊಸಹಳ್ಳಿ ಗೇಟ್‍ಗೆ ಕರೆತರಲಾಗಿದೆ. ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ನಾಲ್ಕು ದಿನ ಇರಲಿರುವ ದಸರಾ ಆನೆಗಳನ್ನು ಆ.26ರಂದು ಅರಣ್ಯ ಇಲಾಖೆ ವತಿಯಿಂದ ಸಾಂಪ್ರದಾಯಿಕ ಪೂಜೆ.