ಯುವಶಕ್ತಿಯಿಂದ ಮಾತ್ರ ಬದಲಾವಣೆ ಸಾಧ್ಯ
ಹಾಸನ

ಯುವಶಕ್ತಿಯಿಂದ ಮಾತ್ರ ಬದಲಾವಣೆ ಸಾಧ್ಯ

December 1, 2018

ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಜಿ. ಸೋಮಶೇಖರ್
ಅರಸೀಕೆರೆ:  ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಯುವ ಜನತೆಯ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ಯುವ ಶಕ್ತಿಯನ್ನು ಹೆಚ್ಚು ಹೊಂದಿರುವ ದೇಶ ಭಾರತವಾಗಿದ್ದು, ಈ ಶಕ್ತಿಯಿಂದ ದೇಶದಲ್ಲಿ ಯಾವುದೇ ಬದಲಾವಣೆ ಮಾಡ ಬಹುದೆಂಬ ಅಚಲವಾದ ನಂಬಿಕೆಯನ್ನು ಶಾಸ್ತ್ರಿಯವರು ಇಟ್ಟಿದ್ದರು ಎಂದು ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಜಿ.ಸೋಮಶೇಖರ್ ಹೇಳಿದರು.

ಕಳೆದ ಎರಡು ದಿನಗಳಿಂದ ನಗರದ ಕಸ್ತೂರಿ ಬಾ ಗಾಂಧಿ ಆಶ್ರಮದಲ್ಲಿ ನಡೆಯು ತ್ತಿರುವ 42ನೇ ಅಂತರ ಕಾಲೇಜು ನಾಯಕತ್ವ ಶಿಬಿರದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನೆಗಳಲ್ಲಿ ಭಾಗವಹಿಸಿರುವ ಮಕ್ಕಳು ಸಂವಿಧಾನದ ಆಶಯಗಳನ್ನು ಅರಿತು ಜೀವನದಲ್ಲಿ ಆಳವಡಿಸಿಕೊಳ್ಳಬೇಕು. ಗಾಂಧಿಜಿಯವರ ತತ್ವ ಸಿದ್ದಾಂತಗಳನ್ನು ಆಳವಡಿಸಿಕೊಂಡಾಗ ಮಾತ್ರ ಈ ಶಿಬಿರ ಗಳಿಗೆ ಅರ್ಥ ಬರುತ್ತದೆ. ದೇಶದ ಸಂಸ್ಕøತಿ ಯನ್ನು ಉಳಿಸುವ ಶಕ್ತಿ ಏನಾದರೂ ಇದ್ದಲ್ಲಿ ಅದು ಯುವ ಶಕ್ತಿಯಲ್ಲಿ ಮಾತ್ರ. ಸಮಾಜದ ಮೌಲ್ಯಗಳನ್ನು ಹೊರುತ್ತಾ ಜವಾಬ್ದಾರಿಯುವ ಪ್ರಜೆಯಾಗಿ ಬದುಕ ಬೇಕು ಹಾಗೂ ಮತ್ತೊಬ್ಬರಿಗೆ ಮಾದರಿ ಯಾಗಬೇಕು ಎಂದರು.

ಇಂದಿನ ಯುವ ಶಕ್ತಿಯು ಪರೋಪ ಕಾರಿ ಜೀವನ ಶೈಲಿಗೆ ಹೆಚ್ಚು ಒತ್ತನ್ನು ನೀಡ ಬೇಕಾಗಿದೆ. ಮಾನವೀಯ ನೆಲೆಗಟ್ಟಿನ ಸಂಸ್ಕøತಿಯನ್ನು ನಾವು ಉಳಿಸಬೇಕಾದರೆ ಮಹಾತ್ಮ ಗಾಂಧಿಜಿ, ವಿವೇಕಾನಂದ, ಲಾಲ್ ಬಹುದ್ದೂರ್ ಶಾಸ್ತ್ರಿ ಅವರಂತಹ ದಾರ್ಶನಿಕರ ಚರಿತ್ರೆಯನ್ನು ಅಧ್ಯಯನ ಮಾಡಬೇಕು. ಆ ನಿಟ್ಟಿನಲ್ಲೇ ಇಂದಿನ ಶಿಬಿರದ ವಿದ್ಯಾರ್ಥಿಗಳು ಕಾರ್ಯೋನ್ಮುಖ ರಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಂಗಳೂರಿನ ವಿಜಯ್ ಅವರು ಶಿಭಿರಾಥಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಗನವಾಡಿ ರುದ್ದಪ್ಪನ ಅವರು ಮಾತನಾಡಿದರು. ಮೈಸೂರು ವಿಶ್ವ ವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಂ.ಎಸ್. ಶೇಖರ್, ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ್ ಉಪನ್ಯಾಸ ನೀಡಿ ದರು. ಪ್ರೊ.ಜಿ.ಬಿ.ಶಿವರಾಜ್, ನಗರಸಭೆ ಮಾಜಿ ಅಧ್ಯಕ್ಷ ಮನುಕುಮಾರ್ ಇನ್ನಿತರರಿದ್ದರು.

Translate »