ಅ.14ರಂದು ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಓಪನ್ ಸ್ಟ್ರೀಟ್ ಉತ್ಸವ
ಮೈಸೂರು

ಅ.14ರಂದು ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಓಪನ್ ಸ್ಟ್ರೀಟ್ ಉತ್ಸವ

September 21, 2018

ಮೈಸೂರು: ಕಳೆದ ಭಾರಿ ಡಿ.ದೇವರಾಜ ಅರಸು ರಸ್ತೆಯಲ್ಲಿ ನಡೆಸಿದ ಓಪನ್ ಸ್ಟ್ರೀಟ್ ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಈ ವರ್ಷದ ದಸರಾ ಉತ್ಸವದ ವೇಳೆ ಮೈಸೂರಿನ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಈ ಉತ್ಸವ ಆಯೋಜಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಎರಡು ಕಡೆ ರಸ್ತೆ, ವಿಶಾಲ ವಿಭಜಕ ಮತ್ತು ಫುಟ್‍ಪಾತ್ ಜಾಗ, ಪಾರ್ಕಿಂಗ್ ಸೌಲಭ್ಯವಿದ್ದು, ಸಂಚಾರಕ್ಕೆ ತೊಂದರೆ ಆಗುವುದಿಲ್ಲ. ಈ ಅಂಶಗಳನ್ನು ಪರಿಗಣಿಸಿ ಜಿಲ್ಲಾ ಪಂಚಾಯ್ತಿ ಕಚೇರಿ ಮತ್ತು ಓರಿಯಂಟಲ್ ರಿಸರ್ಚ್ ಇನ್ಸ್‍ಟಿಟ್ಯೂಟ್ (ORI) ನಡುವೆ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ದಸರಾ ಓಪನ್ ಸ್ಟ್ರೀಟ್ ಉತ್ಸವವನ್ನು ಅಕ್ಟೋಬರ್ 14ರಂದು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಹೆಚ್.ಪಿ. ಜನಾರ್ಧನ್ ತಿಳಿಸಿದ್ದಾರೆ.

ಕ್ರಾಫರ್ಡ್ ಭವನ, ಡಿಸಿ ಕಚೇರಿ, ಓಆರ್‍ಪಿ, ಮಹಾರಾಜ-ಯುವರಾಜ ಕಾಲೇಜು, ಜಿಪಂ ಕಚೇರಿ, ಜಿಲ್ಲಾ ನ್ಯಾಯಾಲಯ ಸೇರಿದಂತೆ ಹಲವು ಪಾರಂಪರಿಕ ಕಟ್ಟಡಗಳ ನಡುವೆ ಇರುವ ಕೃಷ್ಣರಾಜ ಬುಲೇವಾರ್ಡ್ ಜೋಡಿ ರಸ್ತೆ ವಿಶಾಲವಾಗಿರುವುದರಿಂದ ಓಪನ್ ಸ್ಟ್ರೀಟ್ ಉತ್ಸವ ನಡೆಸಲು ಪ್ರಶಸ್ತ ಸ್ಥಳ ಎಂಬುದನ್ನು ಮನಗಂಡು ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಮೇರೆಗೆ ಜಿಲ್ಲಾಡಳಿತವು ನಿರ್ಧಾರ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ದಸರಾ ಮಹೋತ್ಸವಕ್ಕೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಈ ಬಾರಿ ಮಕ್ಕಳ ಆಟ, ಎಕೋಫ್ರೆಂಡ್ಲಿ ಗ್ರೀನ್ ಕಾರಿಡಾರ್, ಚಿತ್ರಸಂತೆ, ಪೇಂಟಿಂಗ್ಸ್, ವ್ಯಾಪಾರ-ವಹಿವಾಟು, ವಿವಿಧ ಮನರಂಜನೆಗಳನ್ನು ಆಯೋಜಿಸಿ ವಿಶೇಷ ಆಕರ್ಷಣೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಜನಾರ್ಧನ್ ತಿಳಿಸಿದರು. ಅಕ್ಟೋಬರ್ 14ರಂದು ಬೆಳಿಗ್ಗೆಯಿಂದ ಸಂಜೆವರೆಗೂ ನಡೆಯುವ ಓಪನ್ ಸ್ಟ್ರೀಟ್ ಫೆಸ್ಟಿವಲ್‍ಗೆ ವರ್ತಕರು, ಕಲಾವಿದರು, ಸೌಂದರ್ಯ ವರ್ಧನೆ ಸಂಸ್ಥೆಗಳು, ವಿವಿಧ ಆಟಿಕೆ ಪ್ರದರ್ಶನ, ಸ್ಪರ್ಧೆಗಳನ್ನು ಏರ್ಪಡಿಸಿ ಕಳೆದ ಬಾರಿಗಿಂತ ಮತ್ತಷ್ಟು ಆಕರ್ಷಣೀಯವಾಗಿಸುವುದರಿಂದ ಪ್ರವಾ ಸಿಗರನ್ನು ಮೈಸೂರಿಗೆ ಕರೆತರಲು ಈ ಕಾರ್ಯಕ್ರಮವೂ ಒತ್ತಾಸೆಯಾಗಲಿದೆ.

Translate »