ಶಿವಮೊಗ್ಗ: ಪ್ರಪಂಚದಲ್ಲಿರುವ ಎಲ್ಲರಿಗಿಂತಲೂ ದುಷ್ಟ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಈಶ್ವರಪ್ಪ, ಕುಮಾರಸ್ವಾಮಿ ಒಬ್ಬ ಮುಖ್ಯಮಂತ್ರಿಯಾಗಿ ತಮ್ಮ ಸ್ಥಾನ ಉಳಿಸಿಕೊಳ್ಳಲು ರಾಜ್ಯದ ಜನರು ದಂಗೆ ಏಳುವಂತೆ ಕರೆ ನೀಡಿರುವುದು ಅಪರಾಧ. ಕುಮಾರ ಸ್ವಾಮಿ ಅವರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಹೀಗಾಗಿ ಕೂಡಲೇ ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎ.ಮಂಜು ಆರೋಪಿಸಿರುವಂತೆ ಸಚಿವ ರೇವಣ್ಣ ಪುತ್ರ ಪ್ರಜ್ವಲ್ ಭೂ ಕಬಳಿಕೆ ಮಾಡಿರುವುದು ನಿಜ. 54 ಎಕರೆ ಭೂಮಿ ಪ್ರಜ್ವಲ್ ಹೆಸರಲ್ಲಿ ರಿಜಿಸ್ಟ್ರರ್ ಆಗಿದೆ ಎಂದು ಹೇಳಿದರು. ರಾಮನಗರದ ಕ್ಯಾತಗಾನಹಳ್ಳಿಯಲ್ಲಿ ಎಸ್ಸಿ/ಎಸ್ಟಿಗೆ ಮೀಸಲಾಗಿದ್ದ 46 ಎಕರೆ ಭೂಮಿಯನ್ನು ಎಚ್ಡಿಕೆ ಕುಟುಂಬ ಕಬಳಿಸಿದೆ.
ಇಂದು ಕಾಂಗ್ರೆಸ್‍ನ ಕೆಲ ಗೂಂಡಾಗಳು ಯಡಿಯೂರಪ್ಪ ಅವರ ಮನೆಗೆ ನುಗ್ಗಿ ಅವರ ಪ್ರಾಣ ತೆಗೆಯಲು ಮುಂದಾಗಿದ್ದರು.ಇದು ಸರ್ಕಾರದ ಪ್ರೇರಣೆಯಿಂದ ನಡೆದಿದೆ ಎಂದು ಆರೋಪಿಸಿದರು. ಬಿಜೆಪಿ ಆಪರೇಷನ್ ಕಮಲಕ್ಕೆ ಯಾವುದೇ ಯತ್ನ ಮಾಡಿಲ್ಲ. ನಾವು ಯಾರನ್ನೂ ಕರೆದಿಲ್ಲ. ಕಾಂಗ್ರೆಸ್ ಶಾಸಕರೇ ಪಕ್ಷ ತೊರೆಯಲು ಮುಂದಾಗಿದ್ದಾರೆ ಎಂದರು.