ಟಿಪ್ಪು ಹಿಡಿದುಕೊಂಡವರೆಲ್ಲಾ ಹಾಳಾಗಿ ಹೋಗಿದ್ದಾರೆ, ಈಗ ಸಿಎಂ ಕುಮಾರಸ್ವಾಮಿ ಸರದಿ
ಮೈಸೂರು

ಟಿಪ್ಪು ಹಿಡಿದುಕೊಂಡವರೆಲ್ಲಾ ಹಾಳಾಗಿ ಹೋಗಿದ್ದಾರೆ, ಈಗ ಸಿಎಂ ಕುಮಾರಸ್ವಾಮಿ ಸರದಿ

November 8, 2018

ಹಾಸನ: ಟಿಪ್ಪುವನ್ನು ಹಿಡಿದುಕೊಂಡ ವರೆಲ್ಲಾ ಈಗಾಗಲೇ ಹಾಳಾಗಿ ಹೋಗಿದ್ದು, ಇದನ್ನೇ ಮುಂದುವರೆಸಲು ಹೊರಟಿರುವ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸರದಿ ಬಂದಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಅದಿ ದೇವತೆ ಹಾಸನಾಂಬೆ ದರ್ಶನ ವನ್ನು ಕುಟುಂಬ ಸಮೇತ ಪಡೆದು ಹೊರಗೆ ಬಂದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಟಿಪ್ಪು ಹಿಡಿದುಕೊಂಡವರೆಲ್ಲಾ ಹಾಳಾಗಿ ಹೋಗಿದ್ದಾರೆ. ಟಿಪ್ಪು ಜಯಂತಿಗೆ ಅವಕಾಶ ಮಾಡಿಕೊಟ್ಟ ಸಿದ್ದರಾಮಯ್ಯ ಅವರ ಕಥೆ ಏನಾಯಿತು. ಮಲ್ಯ ಅವರ ಗತಿ ಏನಾಯಿತು. ಎಲ್ಲವೂ ಗೊತ್ತಿರುವ ವಿಚಾರ ಈಗ ಕುಮಾರಸ್ವಾಮಿ ಸರದಿ ಮುಂದು ವರೆದಿದೆ ಎಂದು ವ್ಯಂಗ್ಯವಾಡಿದರು.

ಟಿಪ್ಪು ಜಯಂತಿಯನ್ನು ಸರ್ಕಾರ ಏಕೆ ಪ್ರತಿಷ್ಟೆಯಾಗಿ ಪರಿಗಣಿಸಿದೆಯೋ ತಿಳಿಯ ದಾಗಿದೆ. ಟಿಪ್ಪು ಸುಲ್ತಾನ್‍ಗೂ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯಗೆ ಏನು ಸಂಬಂಧ ತಿಳಿಯುತ್ತಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ಟಿಪ್ಪು ಜಯಂತಿ ಶುರುವಾಯಿತು. ಇದರಿಂದ ಸುಮಾರು 21 ಹಿಂದೂ ಯುವಕರ ಕಗ್ಗೊಲೆಯಾಯ್ತು. ಟಿಪ್ಪು ಜಯಂತಿ ಯಿಂದ ರಾಜ್ಯದಲ್ಲಿ ಶಾಂತಿ ಕದಡುತ್ತದೆ ಎಂದು ಗೊತ್ತಿದ್ದರೂ ಸರ್ಕಾರ ಮತ್ತೇ ಜಯಂತಿ ಆಚರಣೆ ಮುಂದಾಗಿರುವುದು ಸರಿಯೇ? ಎಂದು ಪ್ರಶ್ನಿಸಿದರು.

ಟಿಪ್ಪು ಜಯಂತಿಯನ್ನು ವಿರೋಧಿಸಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೇ ಮತ್ತೆ ಜಯಂತಿ ಆಚರಣೆಗೆ ಮುಂದಾಗಿದ್ದಾರೆ ಎಂದರು. ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಓಟು ಹಾಕುತ್ತಾರೆ ಎಂಬ ಕಾರಣಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಜಾತಿ-ಧರ್ಮದ ಹೆಸರಿನಲ್ಲಿ ಕೀಳು ಮಟ್ಟದ ರಾಜಕೀಯಕ್ಕೆ ಮುಂದಾಗಿವೆ. ಇವರಿಗೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿ ಕಾರಿದರು. ದೀಪಾವಳಿ ನಂತರ ರಾಜ್ಯದ ಜನತೆಗೆ ಬಿಜೆಪಿ ಸಿಹಿ ಸುದ್ದಿ ಕೊಡಲಿದೆ. ನಾವು 104 ಸ್ಥಾನಗಳಿಸಿದ್ದೇವೆ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಬದಲಾವಣೆ ಗಳಾಗಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ರೈತರ ಸಾಲಮನ್ನಾ ಮಾಡಿದ್ದೇನೆ ಎಂದು ಸಿಎಂ ಹೇಳುತ್ತಾರೆ. ಆದರೆ ರೈತರಿಗೆ ಯಾಕೆ ಅರೆಸ್ಟ್ ವಾರೆಂಟ್ ಬರುತ್ತಿದೆ ಎಂದು ತಿಳಿಯುತ್ತಿಲ್ಲ ಎಂದು ಕಿಡಿಕಾರಿದರು. ಕಾಂಗ್ರೆಸ್ ಕುತಂತ್ರದಿಂದ ರಾಮನಗರದಲ್ಲಿ ನಮ್ಮ ಅಭ್ಯರ್ಥಿ ಪಕ್ಷ ಬಿಟ್ಟಿದ್ದಾರೆ ಎಂದ ಅವರು ಇದು ಅವರಿಗೆ ಸಿಕ್ಕ ತಾತ್ಕಾಲಿಕ ಗೆಲುವು ಎಂದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 24 ಸ್ಥಾನ ಬರುವುದು ನಿಶ್ಚಿತವಾಗಿದೆ. ದೇಶದಲ್ಲಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವೇಣು ಗೋಪಾಲ್, ಪುನೀತ್, ದಯಾನಂದ್ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಇತರರು ಇದ್ದರು.

Translate »