ನೀವು ಏನು ಮಾಡುತ್ತೀರೋ ಮಾಡಿ, ಪ್ರತಿಯಾಗಿ ನಮಗೂ ಗೊತ್ತಿದೆ
ಮೈಸೂರು

ನೀವು ಏನು ಮಾಡುತ್ತೀರೋ ಮಾಡಿ, ಪ್ರತಿಯಾಗಿ ನಮಗೂ ಗೊತ್ತಿದೆ

September 21, 2018

ಬೆಂಗಳೂರು: ರಾಜ್ಯದಲ್ಲಿ ನಿಮ್ಮ(ಕುಮಾರ ಸ್ವಾಮಿ) ಸರ್ಕಾರವಿದ್ದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರ್ಕಾರವಿದೆ. ನೀವು ಏನು ಮಾಡುತ್ತೀರೋ ಮಾಡಿ, ಅದಕ್ಕೆ ಪ್ರತಿಯಾಗಿ ಮಾಡಲು ನಮಗೂ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲೆಸೆದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇಂದು ಬೆಳಿಗ್ಗೆ ಭೇಟಿಯಾದ ನಂತರ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರುತಮ್ಮ ವಿರುದ್ಧ ಹರಿಹಾಯ್ದದ್ದಕ್ಕೆ ಯಡಿಯೂರಪ್ಪ ತಕ್ಕ ಪ್ರತ್ಯುತ್ತರ ನೀಡಿದರು.

ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿ, ರಾಷ್ಟ್ರೀಯ ಪಕ್ಷದ ಅಧ್ಯಕ್ಷನಾಗಿ ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂಬ ಇತಿ-ಮಿತಿ ನನಗೆ ಗೊತ್ತಿದೆ. ಹದ್ದು ಮೀರಿ ಮಾತನಾಡುತ್ತಿರುವುದು ನೀವು. ನಿಮ್ಮ ಕುಟುಂಬದವರು ಕಾನೂನು ಬಾಹಿರವಾಗಿ ಭೂ ಕಬಳಿಕೆ ಮಾಡಿದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಆರೋಪ ಮಾಡಿದ್ದಾರಲ್ಲಾ, ಅದಕ್ಕೆ ಉತ್ತರ ಹೇಳಿ. ಯಾಕೆ ಮೌನವಾಗಿದ್ದೀರಿ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.

ಶಿವರಾಮ ಕಾರಂತ ಬಡಾವಣೆ ಬಗ್ಗೆ ತನಿಖೆ ನಡೆಯಲಿ. ರಾಜ್ಯದಲ್ಲಿ ಅವರದೇ ಅಧಿಕಾರ ಇದೆಯಲ್ಲಾ, ತನಿಖೆ ನಡೆಸಿ, ಸತ್ಯಾಂಶ ಏನೆಂದು ರಾಜ್ಯದ ಜನರಿಗೆ ತಿಳಿಸಲಿ. ಈ ತನಿಖೆಗಳಿಗೆಲ್ಲಾ ಬಗ್ಗುವವನು ಈ ಯಡಿಯೂರಪ್ಪ ಅಲ್ಲ. ನಿಮ್ಮ ಮೇಲಿನ ಡಿ ನೋಟಿಫಿಕೇಷನ್ ಹಗರಣಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವವರು ನೀವು. ನಿಮ್ಮ ಮೇಲೆ ಸುಪ್ರೀಂಕೋರ್ಟ್‍ನಲ್ಲಿ ಕೇಸ್‍ಗಳು ಇಲ್ಲವೇನೂ ಎಂದು ಮುಖ್ಯಮಂತ್ರಿಗಳಿಗೆ ಯಡಿಯೂರಪ್ಪ ಪ್ರಶ್ನೆ ಎಸೆದರು.

Translate »